

ಎಸ್.ಲಿಂಗರಾಜು ಮಂಗಲ ಹನೂರು
ಶಾಲಾ ಆರಂಭೋತ್ಸವದ ಹಿನ್ನೆಲೆಯಲ್ಲಿ ಹನೂರು ಶೈಕ್ಷಣಿಕ ವಲಯದ ಶಾಲೆಗಳಲ್ಲಿ ಅಗತ್ಯ ಸಿದ್ಧತಾ ಕಾರ್ಯಗಳು ನಡೆದಿದ್ದು, ಮಕ್ಕಳನ್ನು ಸ್ವಾಗತಿಸಲು ಶಿಕ್ಷಕರ ತಂಡ ಸಜ್ಜುಗೊಂಡಿದೆ.
ಹನೂರು ಶೈಕ್ಷಣಿಕ ವಲಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಕಿರಿಯ ಸೇರಿದಂತೆ 96 ಕಿರಿಯ ಪ್ರಾಥಮಿಕ ಶಾಲೆ, 105 ಹಿರಿಯ ಹಾಗೂ 44 ಪ್ರೌಢಶಾಲೆಗಳಿವೆ. ಪ್ರತಿ ವರ್ಷ ಶಾಲಾ ಆರಂಭೋತ್ಸವನ್ನು ಶಾಲೆಗಳಲ್ಲಿ ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತದೆ. ಶಾಲೆಗಳನ್ನು ತಳಿರು, ತೋರಣ ಹಾಗೂ ಬಣ್ಣ ಬಣ್ಣದ ರಂಗೋಲಿಯಿಂದ ಶಾಲೆ ಆವರಣವನ್ನು ಸಿಂಗರಿಸಲಾಗುತ್ತದೆ. ಆಗಮಿಸುವ ಮಕ್ಕಳಿಗೆ ಬಹುತೇಕ ಶಾಲೆಗಳಲ್ಲಿ ಗುಲಾಬಿ ಹೂ ಹಾಗೂ ಸಿಹಿ ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಗುತ್ತದೆ. ಅದರಂತೆಯೇ ಈ ವರ್ಷವೂ ವಲಯದಲ್ಲಿ ಶಾಲಾ ಆರಂಭೋತ್ಸವಕ್ಕೆ ಬಿಇಒ ಗುರುಲಿಂಗಯ್ಯ ಅವರ ಮಾರ್ಗದರ್ಶನದಲ್ಲಿ ಶಿಕ್ಷಕರ ತಂಡ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಮಕ್ಕಳ ಆಗಮನಕ್ಕೆ ಕಾತುರದಿಂದ ಕಾದಿದೆ.
ಶಾಲೆಗಳಲ್ಲಿ ಸಿದ್ಧತೆ: 2025-26ನೇ ಸಾಲಿನ ಶೈಕ್ಷಣಿಕ ವರ್ಷ ಮೇ 30ರಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಶಾಲಾ ಆರಂಭೋತ್ಸವಕ್ಕೆ ಬಿಇಒ ಗುರುಲಿಂಗಯ್ಯ ಅವರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮೇ 27ರಂದು ಮುಖ್ಯಶಿಕ್ಷಕರ ಸಭೆ ನಡೆಸಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದು, ಅದರಂತೆಯೇ ಶಿಕ್ಷಕರ ತಂಡ ಶಾಲೆಗಳಲ್ಲಿ ಕಾರ್ಯೋನ್ಮುಖರಾಗಿ ಸಕಲ ವ್ಯವಸ್ಥೆ ಮಾಡಿಕೊಂಡಿದೆ.
ತರಗತಿ ಕೊಠಡಿ, ಅಡುಗೆ ಕೋಣೆಯ ದುರಸ್ತಿ ಕಾರ್ಯ, ಸ್ವಚ್ಛತೆ, ಅಡುಗೆ ಪರಿಕರಗಳ ಶುಚಿತ್ವ ಹಾಗೂ ಕೆಲವು ಶಾಲೆಗಳಲ್ಲಿ ಬಣ್ಣ ಬಳಿಯುವಿಕೆ ಕಾರ್ಯ ನಡೆದಿದೆ. ಶಾಲಾವರಣದಲ್ಲಿ ಸ್ವಚ್ಛತೆ, ನೀರು ಸರಬರಾಜು ತೊಟ್ಟಿ, ಟ್ಯಾಂಕರ್ ಹಾಗೂ ನೀರಿನ ಮೂಲವನ್ನು ಸ್ವಚ್ಛಗೊಳಿಸುವಂತೆ ಸೂಚಿಸಲಾಗಿದೆ. ಶೌಚಗೃಹ ದುರಸ್ತಿಗೊಂಡಿದ್ದಲ್ಲಿ ರಿಪೇರಿ ಪಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಅಗತ್ಯ ಮೂಲಸೌಕರ್ಯ ಕೊರತೆಯಾಗದಂತೆ ಸಭೆಯಲ್ಲಿ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ. ಜತೆಗೆ ಸಂಘ, ಸಂಸ್ಥೆ, ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳಿಂದ ಸಹಕಾರ ಪಡೆಯುವಂತೆ ಸಲಹೆ ನೀಡಲಾಗಿದೆ.
ಸ್ವಚ್ಛಂದ ಕಲಿತಾ ವಾತಾವರಣ: ಬೇಸಿಗೆಯ ರಜೆಯನ್ನು ಅನುಭವಿಸಿದ ಮಕ್ಕಳು ಶುಕ್ರವಾರ ಶಾಲೆಗಳಿಗೆ ಆಗಮಿಸಲಿದ್ದಾರೆ. ಹಾಗಾಗಿ ಪ್ರತಿ ಮಗುವನ್ನು ಪ್ರೀತಿ ಪೂರ್ವಕವಾಗಿ ಸ್ವಾಗತಿಸಿ ಸ್ವಚ್ಛಂದ ಕಲಿಕಾ ವಾತಾವರಣವನ್ನು ನಿರ್ಮಿಸುವುದು ಆಯಾ ಶಾಲೆಯ ಶಿಕ್ಷಕರ ಆದ್ಯ ಕರ್ತವ್ಯ. ಈ ದೆಸೆಯಲ್ಲಿ ಬಿಇಒ ಗುರುಲಿಂಗಯ್ಯ ಅವರ ಸೂಚನೆ ಮೇರೆಗೆ ಶಿಕ್ಷಕರ ತಂಡ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರನ್ನು ಆಹ್ವಾಮಿಸಿದ್ದು, ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳುವಿಕೆಗೆ ವಲಯದ ಶಾಲೆಗಳು ಸಜ್ಜುಗೊಂಡಿದ್ದು, ಶಿಕ್ಷಕರು ಉತ್ಸಾಹದಿಂದ ಮಕ್ಕಳ ಆಗಮಿಸುವಿಕೆಯನ್ನು ಕಾದಿದ್ದಾರೆ.
ಸಮವಸ್ತ್ರ ವಿತರಣೆ: ಶಾಲಾ ಆರಂಭೋತ್ಸವದ ಹಿನ್ನ್ನೆಲೆಯಲ್ಲಿ ಈಗಾಗಲೇ ಶಾಲೆಗಳಿಗೆ ಒಂದು ಜತೆ ಮಕ್ಕಳ ಸಮವಸ್ತ್ರವನ್ನು ವಿತರಿಸಲಾಗಿದೆ. ಪಠ್ಯಪುಸ್ತಕ ವಿತರಣೆಗೆ ಆಯಾ ಕ್ಲಸ್ಟರ್ ವ್ಯಾಪ್ತಿಯಲ್ಲಿ ಕ್ರಮವಹಿಸಲಾಗಿದೆ. ಇನ್ನು ಶಾಲೆಗೆ ಆಗಮಿಸಿದ ಮೊದಲನೆ ದಿನ ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಸಿಹಿ ವಿತರಿಸುವಂತೆ ಸೂಚಿಸಲಾಗಿದ್ದು, ಬಿಸಿಯೂಟದಲ್ಲಿ ಈ ಕೆಲಸ ಕಾರ್ಯರೂಪಕ್ಕೆ ಬರಲಿದೆ. ಒಟ್ಟಿನಲ್ಲಿ ಶಾಲಾ ಆರಂಭೋತ್ಸವಕ್ಕೆ ಹನೂರು ಶೈಕ್ಷಣಿಕ ವಲಯ ಸಜ್ಜುಗೊಂಡಿದೆ.
ಅಧಿಕಾರಿಗಳ ಭೇಟಿ: ಶಾಲಾ ಆರಂಭೋತ್ಸವಕ್ಕೆ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ. ಜತೆಗೆ ಶಾಲೆಗಳಿಗೆ ಅಧಿಕಾರಿಗಳು ಭೇಟಿ ನೀಡುವ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ. ಅದರಂತೆಯೇ ಹನೂರಿನ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಸಕ ಎಂ.ಆರ್.ಮಂಜುನಾಥ್, ಪಪಂ ಅಧ್ಯಕ್ಷೆ ಮಮ್ತಾಜ್‌ಬಾನು, ಉಪಾಧ್ಯಕ್ಷ ಆನಂದ್‌ಕುಮಾರ್ ಅವರನ್ನು ಆಹ್ವಾನಿಸಲಾಗಿದೆ. ಹಾಗೆಯೇ ಆಯಾ ಶಾಲಾ ವ್ಯಾಪ್ತಿಯಲ್ಲಿ ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಇನ್ನು ಬಿಇಒ ಗುರುಲಿಂಗಯ್ಯ ಅವರು ವಿವಿಧ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ಅವರು ಆರ್.ಎಸ್ ದೊಡ್ಡಿ ಶಾಲೆ, ತಾಪಂ ಇಒ ಉಮೇಶ್ ಮಂಗಲ ಶಾಲೆ ಇತರ ಅಧಿಕಾರಿಗಳು ನಿಯೋಜಿಸಿರುವ ಶಾಲೆಗಳಿಗೆ ಭೇಟಿ ನೀಡಲಿದ್ದಾರೆ.
ಶಾಲಾ ಆರಂಭೋತ್ಸವದ ಹಿನ್ನೆಲೆಯಲ್ಲಿ ಈಗಾಗಲೇ ಮುಖ್ಯಶಿಕ್ಷಕರ ಸಭೆ ಕರೆದು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ತರಗತಿ ಕೊಠಡಿ, ಅಡುಗೆ ಕೋಣೆಯಲ್ಲಿ ರಿಪೇರಿ ಕಾರ್ಯ, ಶಾಲೆಯಲ್ಲಿ ಸ್ವಚ್ಛತೆ ಕಾಪಾಡುವಂತೆ ಹಾಗೂ ಅಡುಗೆ ತಯಾರಿಸುವ ಸಾಮಗ್ರಿಗಳನ್ನು ಶುಚಿಗೊಳಿಸುವಂತೆ ಸೂಚಿಸಲಾಗಿದೆ. ಮಕ್ಕಳನ್ನು ಬರಮಾಡಿಕೊಳ್ಳುವಿಕೆ ವಿನೂತನ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ಜತೆಗೆ ಅಧಿಕಾರಿಗಳು ಶಾಲೆಗೆ ನೀಡುವ ಬಗ್ಗೆ ಜವಾಬ್ದಾರಿಯನ್ನು ಸಹ ಹಂಚಿಕೆ ಮಾಡಲಾಗಿದೆ.
ಗುರುಲಿಂಗಯ್ಯ, ಬಿಇಒ ಹನೂರು