ಡ್ಯಾಂನ ಹೂಳು ತೆರವಿಗೆ ಸಿದ್ಧತೆ

dam
Published on

ಪುತ್ತೂರು: ನೆಕ್ಕಿಲಾಡಿ ಅಣೆಕಟ್ಟಿನಲ್ಲಿ ಮರಳು ಮಿಶ್ರಿತ ಹೂಳು ತುಂಬಿರುವುದರಿಂದ ಪುತ್ತೂರಿಗೆ ಈ ಬಾರಿ ನೀರಿನ ಕೊರತೆಯಾಗಬಹುದು ಎಂದು ಡ್ಯಾಂನ ಮರಳು ತೆರವಿಗೆ ನಗರಸಭೆಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗದ ಹಿನ್ನೆಲೆ ನಗರಸಭೆಯೇ ಮರಳು ರಹಿತ ಹೂಳು ತೆಗೆಯಲು ಸಿದ್ಧತೆ ನಡೆಸಿದೆ.

ನೆಕ್ಕಿಲಾಡಿ ಅಣೆಕಟ್ಟಿನಲ್ಲಿ ನಿರಂತರ ನೀರು ಸೋರಿಕೆಯಾಗುತ್ತಿದ್ದರೂ ಅಕಾಲಿಕ ಮಳೆ ಕಾರಣದಿಂದ ಒಳಹರಿವು ಹೆಚ್ಚಾಗಿದೆ. ಈಗಾಗಲೇ 405 ಎಂಎಲ್‌ಡಿ ನೀರು ಶೇಖರಗೊಂಡಿದ್ದರಿಂದ ನೀರಿನ ಪ್ರಮಾಣ ಇಳಿಕೆಯಾದ ಕೂಡಲೇ ನೆಕ್ಕಿಲಾಡಿ ಡ್ಯಾಂನ ಪಾಶ್ವದಲ್ಲಿರುವ ಮರಳು ರಹಿತ ಹೂಳು ತೆರವುಗೊಂಡ ನಂತರ ಜನವರಿ 3ನೇ ವಾರದಲ್ಲಿ ನೆಕ್ಕಿಲಾಡಿ ಡ್ಯಾಂಗೆ ಗೇಟ್ ಅಳವಡಿಸಲಾಗುತ್ತದೆ. ಆದ್ದರಿಂದ ಮುಂದಿನ ಮೇ ಕೊನೇ ವಾರದವರೆಗೆ ಪುತ್ತೂರಿಗೆ ನೀರಿನ ಬರ ಇರಲ್ಲ ಎಂದು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಮಾಹಿತಿ ನೀಡಿದ್ದಾರೆ.

ದಿನದ 24 ಗಂಟೆ ಪುತ್ತೂರಿಗೆ ನೀರು ಪೂರೈಕೆಗೆಂದೇ ನೆಕ್ಕಿಲಾಡಿ ಬಳಿ ಡ್ಯಾಂ ನಿರ್ಮಿಸಲಾಗಿದೆ. ಪ್ರಸ್ತುತ 630 ಎಂಎಲ್‌ಡಿ ನೀರು ಶೇಖರಣಾ ಸಾಮರ್ಥ್ಯದ ಡ್ಯಾಂನಲ್ಲಿ ಮಳೆ ನೀರು ತುಂಬಿ ಹೆಚ್ಚುವರಿ ನೀರು ಹೊರಹೋಗುತ್ತಿದೆ. ಕಳೆದ ಜನವರಿಯಲ್ಲಿ ನೀರಿನಮಟ್ಟ ಗರಿಷ್ಠ ಮಟ್ಟದಲ್ಲಿ ಕುಸಿದಿತ್ತು.

ಕಳೆದ ಬಾರಿ ನೀರಿನ ಮಟ್ಟ ಕುಸಿತ: 27 ವಾರ್ಡ್ ಹೊಂದಿರುವ ಪುತ್ತೂರು ನಗರಸಭೆಯಲ್ಲಿ 60 ಸಾವಿರ ಜನಸಂಖ್ಯೆಯಿದ್ದು, ಪ್ರತಿದಿನ ಅಗತ್ಯವಿರುವ 75 ಲಕ್ಷ ಲೀಟರ್ ನೀರು ಪೂರೈಕೆಗೆ 9,200 ಸಂಪರ್ಕ ನೀಡಲಾಗಿದೆ. ಕಳೆದ ಫೆಬ್ರವರಿ 2ನೇ ವಾರದಲ್ಲಿ ನೀರಿನ ಹರಿವು ಬಹುತೇಕ ನಿಂತಿತ್ತು. ಜತೆಗೆ ಕಾಮಗಾರಿಯ ತಾಂತ್ರಿಕ ದೋಷದಿಂದ ಡ್ಯಾಂ ಗೇಟ್ ಮೂಲಕ ನೀರು ಸೋರಿಕೆಯಾಗಿತ್ತು. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಡ್ಯಾಂನಲ್ಲಿ ಹೆಚ್ಚುವರಿ ನೀರು ಹೊರಹೋಗುತ್ತಿದೆ.

630 ಎಂಎಲ್‌ಡಿ ನೀರು ಶೇಖರಣಾ ಸಾಮರ್ಥ್ಯದ ನೆಕ್ಕಿಲಾಡಿ ಡ್ಯಾಂನ ಸುತ್ತ ಮರಳು ಮಿಶ್ರಿತ ಹೂಳು ತುಂಬಿರುವುದರಿಂದ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿತ್ತು. ಈ ಬಗ್ಗೆ ಯಾವುದೇ ಸೂಚನೆ ಬಂದಿಲ್ಲ. ಪುತ್ತೂರಿಗೆ ಅಗತ್ಯ ನೀರು ಸರಬರಾಜಾಗುವ ನಿಟ್ಟಿನಲ್ಲಿ ಸ್ವತಃ ನಗರಸಭೆ ಮರಳು ರಹಿತ ಹೂಳು ತೆರವುಗೊಳಿಸಲು ಸಿದ್ಧತೆ ನಡೆಸಿದೆ. ಜೀವಂಧರ್ ಜೈನ್, ನಗರಸಭೆ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net