ನೈಋತ್ಯ ಪದವಿ-ಶಿಕ್ಷಕರ ಕ್ಷೇತ್ರ ಚುನಾವಣೆಗೆ ಸಿದ್ಧತೆ, ಚುನಾವಣಾ ಆಯೋಗದಿಂದ ಮತದಾರರ ನೋಂದಣಾಧಿಕಾರಿ ನೇಮಕ

chunavane
Published on

ಮಂಗಳೂರು: ಮುಂದಿನ ವರ್ಷ ನಡೆಯಲಿರುವ ವಿಧಾನ ಪರಿಷತ್‌ನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಭಾರತ ಚುನಾವಣಾ ಆಯೋಗದಿಂದ ಪೂರ್ವ ಸಿದ್ಧತೆ ನಡೆದಿದ್ದು, ಮೊದಲ ಹಂತವಾಗಿ ಮತದಾರರ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದೆ.

ನೈಋತ್ಯ ಪದವಿ-ಶಿಕ್ಷಕರ ಚುನಾವಣಾ ಕ್ಷೇತ್ರ ವ್ಯಾಪ್ತಿಗಳ ಒಳಪಡುವ ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ (ಹೊನ್ನಾಳಿ, ನ್ಯಾಮತಿ ಮತ್ತು ಚೆನ್ನಗಿರಿ ತಾಲೂಕುಗಳಲ್ಲಿ) ಮತದಾರರ ನೊಂದಣಾಧಿಕಾರಿಯನ್ನಾಗಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರರನ್ನು ನಿಯುಕ್ತಿಗೊಳಿಸಲಾಗಿದೆ. ಇತ್ತ ರಾಜಕೀಯ ಪಕ್ಷಗಳೂ ಮತದಾರರ ನೋಂದಣಿಗೆ ಪೂರ್ಣ ಪ್ರಮಾಣದ ಸಿದ್ದತೆ ನಡೆಯುತ್ತಿವೆ. ಸಾಮಾಜಿಕ ಜಾಲತಾಣ ಹಾಗೂ ನವಮಾಧ್ಯಮಗಳನ್ನು ಬಳಸಿಕೊಂಡು ಹೊಸ ಮತದಾರರ ನೋಂದಣಿ ಕಾರ್ಯ ಬಿರುಸಿನಿಂದ ನಡೆಯುತ್ತಿದೆ.

*ಚುನಾವಣಾ ಶಾಖೆ ನೋಂದಣಿ ಕಾರ್ಯಕ್ಕೆ ಬಳಕೆ

ನೈಋತ್ಯ ಪದವಿ-ಶಿಕ್ಷಕರ ಚುನಾವಣಾ ಕ್ಷೇತ್ರ ವ್ಯಾಪ್ತಿಗಳ ಜಿಲ್ಲಾಧಿಕಾರಿಗಳನ್ನು ಹಾಗೂ ಉಪ ವಿಭಾಗಕ್ಕೆ ಸಂಬಂಧಪಟ್ಟ ಎಲ್ಲ ಉಪ ವಿಭಾಗ ಅಧಿಕಾರಿಗಳು ಹಾಗೂ ವಿಭಾಗದ ಎಲ್ಲಾ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರನ್ನು ಸಹಾಯಕ ಮತದಾರರ ನೋಂದಣಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾರ್ಯನಿರ್ವಹಿಸುತ್ತಿದ್ದ ಚುನಾವಣಾ ಶಾಖೆಗಳನ್ನು ನೋಂದಣಿ ಕಾರ್ಯಕ್ಕೆ ಬಳಸಿಕೊಳ್ಳಲು ಸೂಚಿಸಲಾಗಿದೆ. ಅರ್ಜಿಗಳನ್ನು ಭರ್ತಿ ಮಾಡಿ ನಗರ ಪ್ರದೇಶದಲ್ಲಿ ಮಹಾನಗರಪಾಲಿಕೆ ಮತ್ತು ಗ್ರಾಮೀಣ ಭಾಗದಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಸ್ವೀಕರಿಸಲೂ ಅವಕಾಶ ನೀಡಲಾಗಿದೆ.

-------------------

ಡಿ.30 ಮತದಾರರ ಅಂತಿಮ ಪಟ್ಟಿ ಪ್ರಕಟ

ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯನ್ನು ಹೊಸದಾಗಿ ಸಿದ್ಧಪಡಿಸಲಾಗುತ್ತಿದ್ದು , ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಮತದಾರರು ಸಹ ನಮೂನೆ 19ರಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಬೇಕಿದೆ. ನವೆಂಬರ್ 6 ಅರ್ಜಿ ನಮೂನೆ 18, 19 ರ ಅರ್ಜಿ ಸ್ವೀಕರಿಸಲು ಕೊನೆ ದಿನ. ನ.23ರಂದು ಕರಡು ಮತದಾರ ಪಟ್ಟಿ ಪ್ರಕಟಣೆ, ಡಿಸೆಂಬರ್ 9ರ ವರೆಗೆ ಅಕ್ಷೇಪಣೆ ಸಲ್ಲಿಕೆಗೆ ಕೊನೆಯ ದಿನ. ಡಿ.30 ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ.

------------------

ಹೆಸರು ನೋಂದಾಯಿಸಲು ಮಾರ್ಗಸೂಚಿ

ನಮೂನೆ 18ರ ಮೂಲಕ ನೈರುತ್ಯ ಪದವೀಧರ ಕ್ಷೇತ್ರ, ನಮೂನೆ 19ರ ಮೂಲಕ ಶಿಕ್ಷಕರ ಪದವೀಧರ ಕ್ಷೇತ್ರ ಮತದಾರರನ್ನಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ.

2020ರ ನ.1ರ ಮೊದಲು ಪದವಿ ಪಡೆದ ಭಾರತೀಯ ಪ್ರಜೆ ಹಾಗೂ ನೈರುತ್ಯ ಪದವಿ, ಶಿಕ್ಷಕ ಕ್ಷೇತ್ರದ ನಿವಾಸಿಯಾಗಿರಬೇಕು. ಫೋಟೋ, ಆಧಾರ್ ಕಾರ್ಡ್ ಪ್ರತಿ, ಪದವಿ ಪೂರೈಸಿರುವ ಮಾರ್ಕ್ಸ್ ಕಾರ್ಡ್ ಮತ್ತು ಪದವಿ ಪ್ರಮಾಣಪತ್ರ, ಎಲ್ಲ ದಾಖಲೆಗಳಲ್ಲೂ ಸ್ವಯಂಘೋಷಿತ ಸಹಿ, ವೋಟರ್ ಐಡಿ ಪ್ರತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು. ನಮೂನೆ 19ರ ಮೂಲಕ ನೈರುತ್ಯ ಶಿಕ್ಷಕರ ಕ್ಷೇತ್ರದ ಮತದಾರರನ್ನಾಗಿ ಅರ್ಜಿ ಸಲ್ಲಿಸಲು 2023ರ ನ.1ಕ್ಕೆ ಅನ್ವಯವಾಗುವಂತೆ ಕನಿಷ್ಠ 3 ವರ್ಷ(ಕಳೆದ 6ವರ್ಷಗಳಲ್ಲಿ) ಬೋಧನಾ ವೃತ್ತಿ ಕೈಗೊಂಡಿರಬೇಕು (ಶಿಕ್ಷಕ ವೃತ್ತಿಯನ್ನು ಆರಂಭಿಸಿ ಮೂರು ವರ್ಷ ಪೂರೈಸಿರುವವರು). ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರಿಂದ ತಾನು ಹಿಂದಿನ ಆರು ವರ್ಷಗಳಲ್ಲಿ ಒಟ್ಟು ಮೂರು ವರ್ಷಗಳು ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಕುರಿತು ಅರ್ಜಿಯೊಂದಿಗೆ ಪ್ರಮಾಣಪತ್ರವನ್ನು ಲಗತ್ತಿಸಬೇಕು.

---------------------

ಚುನಾವಣಾ ಆಯೋಗದ ಸುತ್ತೋಲೆಯಂತೆ ಆಯಾ ತಾಲೂಕು ತಹಸೀಲ್ದಾರರನ್ನು ನೈಋತ್ಯ ಪದವಿ-ಶಿಕ್ಷಕರ ಕ್ಷೇತ್ರ ಚುನಾವಣೆಯ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಕಾರ್ಯಕ್ಕೆ ವ್ಯಾಪಕ ಮಾಹಿತಿ ಪ್ರಸಾರ ಮಾಡಲಾಗಿದ್ದು, ಚುನಾವಣಾ ಆಯೋಗದ ನಮೂನೆಯನ್ನು ಭರ್ತಿ ಮಾಡುವ ಮೂಲಕ ಮತದಾರರಾಗಿ ತಮ್ಮ ಹೆಸರು ನೋಂದಾಯಿಸಬೇಕು.

ಡಾ. ಸಂತೋಷ್, ಅಪರ ಜಿಲ್ಲಾಧಿಕಾರಿ, ದ.ಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net