

ಬೆಂಗಳೂರು: ರಾಜ್ಯಾದ್ಯಂತ ಜೂ.25ರಿಂದ ಎಸ್ಸೆಸ್ಸೆಲ್ಸೆ ಪರೀಕ್ಷೆ ಆರಂಭವಾಗಲಿದ್ದು, ಗ್ರಾಮಾಂತರ ಜಿಲ್ಲೆಯಲ್ಲಿ ಕರೊನಾ ಮುಂಜಾಗ್ರತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲು ಜಿಲ್ಲಾ ಶಿಕ್ಷಣ ಇಲಾಖೆ ಸರ್ವ ಸಿದ್ಧತೆ ನಡೆಸಿದೆ.
ಜಿಲ್ಲೆಯಲ್ಲಿ 13192 ವಿದ್ಯಾರ್ಥಿಗಳು ನೋಂದಾಯಿಸಿದ್ದು, ಪರೀಕ್ಷಾರ್ಥಿಗಳು 52 ಕೇಂದ್ರಗಳಲ್ಲಿ ಪರೀಕ್ಷೆ ಎದುರಿಸಲಿದ್ದಾರೆ. ಜೂ.25ರಿಂದ ಜು.3ರವರೆಗೆ ಪರೀಕ್ಷೆ ನಡೆಯಲಿದ್ದು, ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಅಗತ್ಯ ಸಿದ್ಧತೆ ನಡೆದಿದೆ.
ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ನಡುವೆಯೇ ಯಾವುದಾದರೂ ತಾಲೂಕಿನಲ್ಲಿ ಕಂಟೇನ್ಮೆಂಟ್ ಆದರೆ ಆ ಭಾಗದ ವಿದ್ಯಾರ್ಥಿಗಳಿಗೆ ತಾಲೂಕು ಕೇಂದ್ರದಲ್ಲಿ ಪ್ರತ್ಯೇಕ ಪರೀಕ್ಷಾ ಕೇಂದ್ರ ತೆರೆಯಲಾಗಿದೆ.
ಕರೊನಾ ಮುಂಜಾಗ್ರತೆ: ಪ್ರತಿ ವಿದ್ಯಾರ್ಥಿ ಹಾಗೂ ಪರೀಕ್ಷಾ ಕರ್ತವ್ಯದಲ್ಲಿ ಭಾಗವಹಿಸುವವರಿಗೆ 2 ಮಾಸ್ಕ್, ಪ್ರತಿದಿನ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವ ಮುನ್ನ ಸ್ಯಾನಿಟೈಸರ್ ಮತ್ತು ಪ್ರತಿ ಕೇಂದ್ರದಲ್ಲಿ ಹೆಲ್ತ್ ಸ್ಟೇಷನ್ ಸ್ಥಾಪನೆ ಮಾಡಲಾಗುತ್ತಿದೆ. ಪ್ರತಿ ಪರೀಕ್ಷಾ ದಿನದಂದು ಬೆಳಗ್ಗೆ 8.30ಕ್ಕೆ ಆರೋಗ್ಯ ಇಲಾಖೆ, ಸ್ಕೌಟ್ ಆ್ಯಂಡ್ ಗೈಡ್ ಉಸ್ತುವಾರಿಯಲ್ಲಿ ಪ್ರತಿ ವಿದ್ಯಾರ್ಥಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು.
ಗರಿಷ್ಠ 20 ವಿದ್ಯಾರ್ಥಿಗಳು: ಪರೀಕ್ಷಾ ಕೇಂದ್ರದ ಪ್ರತಿ ಕೊಠಡಿಯಲ್ಲಿ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ 1 ಡೆಸ್ಕ್‌ಗೆ ಇಬ್ಬರಂತೆ 3.5 ಅಡಿ ಅಂತರದಲ್ಲಿ ಗರಿಷ್ಠ 20 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಮಾಡಲಾಗುತ್ತಿದೆ.
ಪರೀಕ್ಷೆ ಆರಂಭದ ಮುನ್ನಾ ದಿನದಂದು ಆಯಾ ಪಂಚಾಯಿತಿಯಿಂದ ಪರೀಕ್ಷಾ ಕೇಂದ್ರಗಳಲ್ಲಿ ಸೋಂಕು ನಿವಾರಕ ಸಿಂಪಡಿಸಬೇಕು. ಬಳಿಕ ಪರೀಕ್ಷಾ ದಿನದ ಆರಂಭದ ದಿನಗಳಲ್ಲೂ ಇದನ್ನು ಮುಂದುವರಿಸಬೇಕು ಎಂದು ಗ್ರಾಪಂ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.
ವಿದ್ಯಾರ್ಥಿಗಳು ಸುಗಮವಾಗಿ ಪರೀಕ್ಷಾ ಕೇಂದ್ರಗಳಿಗೆ ತಲುಪಲು ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ 144 ಸಿ.ಆರ್.ಪಿ.ಸಿ ಕಲಂ ಜಾರಿಮಾಡಲಾಗುವುದು ಹಾಗೂ ಪರೀಕ್ಷಾ ಕೇಂದ್ರಗಳ ಸಮೀಪದ ಝೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ.
ಇಂದು ಅವಕಾಶ: ಇಂದು ಬೆಳಗ್ಗೆ 10ರಿಂದ 2 ಗಂಟೆವರೆಗೆ ವಿದ್ಯಾರ್ಥಿಯು ತಾನು ಪರೀಕ್ಷೆ ಬರೆಯಲಿರುವ ಕೊಠಡಿ ಮತ್ತು ಜಾಗವನ್ನು ನೋಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಹೊಸಕೋಟೆಯಲ್ಲಿ ಪೂರ್ವ ಸಿದ್ಧತೆ ಸಭೆ: ಹೊಸಕೋಟೆ:10ನೇ ತರಗತಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ ಹುರಿದುಂಬಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಜಿಪಂ ಸಿಇಒ ನಾಗರಾಜ್ ಸೂಚನೆ ನೀಡಿದರು.
ನಗರದ ತಾಪಂ ಸಭಾಂಗಣದಲ್ಲಿ ಮಂಗಳವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವ ಸಿದ್ಧತೆ ಕುರಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಪರೀಕ್ಷಾ ಕೇಂದ್ರಗಳಿಗೆ ಸ್ವಂತ ವಾಹನದಲ್ಲಿ ಬರಲು ತಾಲೂಕಿನಲ್ಲಿ 219 ವಿದ್ಯಾರ್ಥಿಗಳಿಗೆ ಸಮಸ್ಯೆ ಇದೆ. ಈ ವಿದ್ಯಾರ್ಥಿಗಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ತಾಲೂಕು 13 ಪರೀಕ್ಷಾ ಕೇಂದ್ರಗಳಿಗೆ ಥರ್ಮಲ್ ಸ್ಕ್ರೀನಿಂಗ್ ಯಂತ್ರವನ್ನು ಜಿಪಂ ಸಿಇಒ ನಾಗರಾಜ್ ವಿತರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎನ್.ಕನ್ನಯ್ಯ, ತಾಪಂ ಇಒ ಶ್ರೀನಾಥ್‌ಗೌಡ ಮತ್ತಿತರರಿದ್ದರು.