

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ (ಎಂಜಿಎನ್ವಿವೈ)ಯ ಹಂತ-2ರಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ 200 ಕೋಟಿ ರೂ. ಬಿಡುಗಡೆಯಾಗಿದ್ದು, ವಿವಿಧ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಯಾ ಯೋಜನೆ ತಯಾರಿಸಲಾಗುತ್ತಿದೆ ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದರು.
ನಗರದ ಕಿತ್ತೂರ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಪಾಲಿಕೆ ವತಿಯಿಂದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಎಂಜಿಎನ್ವಿವೈ ಹಂತ-1ರಲ್ಲಿ ಅವಳಿ ನಗರಕ್ಕೆ 126 ಕೋಟಿ ರೂ. ಬಿಡುಗಡೆಯಾಗಿತ್ತು. ಅದರಲ್ಲಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಹುಬ್ಬಳ್ಳಿಯಲ್ಲಿ ಪಾಲಿಕೆಯ ನೂತನ ಸಭಾಭವನ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ ಎಂದರು.
2024-25ನೇ ಸಾಲಿನಲ್ಲಿ ಆಸ್ತಿ ತೆರಿಗೆ ಮೂಲಕ 200 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿ ಇಟ್ಟುಕೊಂಡಿದ್ದೇವೆ. ಜುಲೈ ಅಂತ್ಯದವರೆಗೆ 78 ಕೋಟಿ ರೂ. ಸಂಗ್ರಹವಾಗಿದೆ. ಪಾಲಿಕೆ ವ್ಯಾಪ್ತಿಯ ಎಲ್ಲ ವಿಧದ ಆಸ್ತಿಗಳನ್ನು ಗುರುತಿಸಿ ಅವುಗಳನ್ನು ತೆರಿಗೆ ವ್ಯಾಪ್ತಿಗೆ ತರುವ ಹಾಗೂ ಅವುಗಳ ವಾಸ್ತವಿಕ ಸ್ಥಿತಿಯನ್ನು ಅರಿಯಲು ಭೌಗೋಳಿಕ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಜಿಐಎಸ್ (ಜಿಯೋಗ್ರಾಫಿಕ್ ಇನ್ಫಾಮೇಶನ್ ಸಿಸ್ಟಮ್ ಸರ್ವೆ ನಡೆಸಲು ಸದ್ಯದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಹೇಳಿದರು.
ಇ-ಆಸ್ತಿ ಹಾಗೂ ತೆರಿಗೆ ಮೇಳ ಸದ್ಯದಲ್ಲೇ ನಡೆಸಲಾಗುವುದು. ಮನೆಯ ಬಾಗಿಲಿಗೆ ಪಾಲಿಕೆ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದರು.
ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ರಾಮಪ್ಪ ಬಡಿಗೇರ, ಸದಸ್ಯರಾದ ರಾಜಣ್ಣ ಕೊರವಿ, ಶಿವು ಮೆಣಸಿನಕಾಯಿ, ನಜೀರ್ ಅಹ್ಮದ್ ಹೊನ್ಯಾಳ, ಇತರರು ಇದ್ದರು.