ಕರೊನಾ ರಕ್ಷಾಕವಚಕ್ಕೆ ಕರುನಾಡ ಕಲಿಗಳ ಸ್ಪರ್ಶ: ಭಟ್ಕಳ ಫ್ಯಾಕ್ಟರಿಯಲ್ಲಿ ಪಿಪಿಇ ಕಿಟ್ ತಯಾರಿ

PPE
Published on

ಭಟ್ಕಳ: ಕರೊನಾ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಲಾಕ್​ಡೌನ್ ಘೋಷಿಸಿದ್ದರೆ ಅವರ ಕಾರ್ಯಾಲಯ(ಪಿಎಂಒ) ಮಾತ್ರ ತಾಲೂಕಿನ ಕಾರ್ಖಾನೆಯೊಂದಕ್ಕೆ ‘ನಿರಂತರವಾಗಿ ಕೆಲಸ ಮಾಡಿ, ನಿಮಗೆ ಅಗತ್ಯ ನೆರವು ನೀಡುತ್ತೇವೆ’ ಎಂಬ ವಾಗ್ದಾನ ನೀಡಿದೆ!

ಕರೊನಾದಿಂದ ರಕ್ಷಿಸಲು ಅಗತ್ಯವಾದ ಪರ್ಸನಲ್ ಪ್ರೊಟೆಕ್ಟಿವ್ ಇಕ್ವಿಪ್​ವೆುಂಟ್(ಪಿಪಿಇ)ಕಿಟ್ ತಯಾರಿಸುವ ಬೆಳಕೆ ಗ್ರಾಮದ ಧೃತಿ ಸರ್ಜಿಕಲ್ ಫ್ಯಾಕ್ಟರಿಗೆ ಇಂಥದ್ದೊಂದು ಸೂಚನೆ ಸಿಕ್ಕಿದೆ. ‘ನೀವು ಕೆಲಸ ನಿಲ್ಲಿಸುವುದು ಬೇಡ, ನಿಮಗೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಹೆಲಿಕಾಪ್ಟರ್ ಮೂಲಕವಾದರೂ ನಾವು ಸರಬರಾಜು ಮಾಡಲು ಸಿದ್ಧರಿದ್ದೇವೆ’ ಎಂಬ ಸಂದೇಶ ಬಂದಿರುವುದಾಗಿ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಶರತ್ ಕುಮಾರ್ ಶೆಟ್ಟಿ ಹೆಮ್ಮೆಯಿಂದ ಹೇಳುತ್ತಾರೆ.

ಪ್ರತಿದಿನ 3ರಿಂದ 5 ಸಾವಿರ ಕಿಟ್ ತಯಾರಿಸಲಾಗುತ್ತಿದ್ದು, 100 ಕಾರ್ವಿುಕರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಕಾರ್ಖಾನೆ ಪ್ರಾರಂಭವಾಗಿ 2 ತಿಂಗಳಷ್ಟೇ ಆಗಿದೆ. ಕರೊನಾ ಪ್ರಭಾವ ಚೀನಾದಲ್ಲಿ ತಾರಕಕ್ಕೇರಿದಾಗ ಧೃತಿ ಸರ್ಜಿಕಲ್​ಗೆ ಬೆಂಗಳೂರಿನ ಏರ್​ಫೋರ್ಸ್ ಆಸ್ಪತ್ರೆಯಿಂದ ಟೆಂಡರ್ ಆಗಿ ಕಿಟ್ ತಯಾರಿಸಿ ಕೊಡುವ ಒಪ್ಪಂದವಾಗಿತ್ತು. ತಾಲೂಕಿನಲ್ಲಿ ಲಾಕ್​ಡೌನ್ ಘೊಷಣೆಯಾಗುತ್ತಿರುವಂತೆ ಇಲ್ಲಿಂದ ಸಾಗಿಸಲು ಪರವಾನಗಿ ಕೇಳಲು ಭಟ್ಕಳ ಉಪವಿಭಾಗಾಧಿಕಾರಿಗಳ ಬಳಿ ಕಾರ್ಖಾನೆಯವರು ಬಂದಾಗಲೇ ತಾಲೂಕಿನಲ್ಲಿ ಇಂಥದ್ದೊಂದು ಘಟಕ ಇದೆ ಎನ್ನುವುದು ಬೆಳಕಿಗೆ ಬಂದಿದೆ.

ಈ ಮೊದಲು ಕಾರ್ಖಾನೆ ಪ್ರಮುಖವಾಗಿ ರಕ್ಷಣಾ ಇಲಾಖೆಗೆ, ಕೆಲವು ಆಸ್ಪತ್ರೆಗಳಿಗೂ ಪಿಪಿಇ ಕಿಟ್ ಸರಬರಾಜು ಮಾಡುತ್ತಿತ್ತು. ವಿವಿಧ ಜಿಲ್ಲಾಡಳಿತಗಳೂ ಈಗ ಇವರಿಂದ ಉತ್ಪನ್ನ ಖರೀದಿಸುತ್ತಿವೆ.

ಏನಿದು ಪಿಪಿಇ?

ಪಿಪಿಇ ಎಂದರೆ, ಪರ್ಸನಲ್ ಪ್ರೊಟೆಕ್ಟಿವ್ ಇಕ್ವಿಪ್​ವೆುಂಟ್ (ವೈಯಕ್ತಿಕ ಸುರಕ್ಷಾ ಸಾಧನ) ಕಿಟ್. ಕೈಗವಸು, ಮೇಲಂಗಿ, ಶೂ ಕವರ್, ತಲೆ ಕವರ್, ನೇತ್ರ ರಕ್ಷಕ, ಮುಖರಕ್ಷಕ, ಕನ್ನಡಕ ಮೊದಲಾದ ಸುರಕ್ಷಾ ಸಾಧನಗಳನ್ನು ಒಳಗೊಂಡಿರುತ್ತದೆ. ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡುವ ವೈದ್ಯರು, ನರ್ಸ್ ಹಾಗೂ ಇತರ ಆಸ್ಪತ್ರೆ ಸಿಬ್ಬಂದಿಗೆ ಸೋಂಕು ತಗಲದಿರಲು ಪಿಪಿಇ ಧರಿಸುವುದು ಅತಿ ಅವಶ್ಯಕವಾಗಿದೆ.

ಚೀನಾದಲ್ಲಿ 2 ತಿಂಗಳ ಹಿಂದೆ ಕರೊನಾ ಕಂಡುಬಂದಾಗಲೇ ಬೆಂಗಳೂರಿನಿಂದ ಬೇಡಿಕೆ ಬಂದಿತ್ತು. 2 ತಿಂಗಳಿಂದ ಇದನ್ನು ತಯಾರಿಸುತ್ತಿದ್ದು ಪ್ರಸ್ತುತ ಮಂಗಳೂರು, ಉಡುಪಿ, ಕಾರವಾರಕ್ಕೆ ಪೂರೈಸಲಾಗುತ್ತಿದೆ. ಬೇಡಿಕೆಗೆ ತಕ್ಕಷ್ಟು ಪೂರೈಸಲು ಕಾರ್ವಿುಕರ ಕೊರತೆ ಇದ್ದು, ತಾಲೂಕು ಆಡಳಿತ ಸಹಕಾರ ನೀಡುತ್ತಿದೆ. ಮುಂದಿನ ದಿನಗಳಲ್ಲಿ 5 ಸಾವಿರಕ್ಕಿಂತಲೂ ಹೆಚ್ಚು ಕಿಟ್ ಪೂರೈಸುವ ಗುರಿ ಹೊಂದಲಾಗಿದೆ. | ಶರತ್ ಕುಮಾರ್ ಶೆಟ್ಟಿ ಮ್ಯಾನೆಜಿಂಗ್ ಡೈರಕ್ಟರ್, ಧೃತಿ ಸರ್ಜಿಕಲ್

| ರಾಮಚಂದ್ರ ಕಿಣಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net