

ಚಿಕ್ಕಬಳ್ಳಾಪುರ: ವಿದೇಶಗಳಲ್ಲಿ ಕರೊನಾ ಹೊಸ ತಳಿ ಅಬ್ಬರದ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲೂ ಸೋಂಕಿನ ಸಮರ್ಪಕ ನಿಯಂತ್ರಣದ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಕೈಗೊಂಡಿದ್ದು, ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆಯು ಮತ್ತೆ ಅಲಾರ್ಟ್ ಆಗಿದೆ.
ಇತ್ತೀಚಿನ ದಿನಗಳಲ್ಲಿ ಕರೊನಾ ಪ್ರಕರಣಗಳ ಏರಿಕೆಯೊಂದಿಗೆ ಅನ್ಯ ದೇಶಗಳಲ್ಲಿ ಸಮಸ್ಯೆ ಉಲ್ಬಣಗೊಂಡಿದೆ. ಇದರ ಪ್ರಭಾವದಿಂದ ಭಾರತದ ಹಲವು ರಾಜ್ಯಗಳಲ್ಲಿ ಹೊಸ ಅಲೆ ಬಾಧಿಸುವ ಆತಂಕ ಮೂಡಿದೆ. ಇದರಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸರ್ಕಾರವು ಜಿಲ್ಲಾಡಳಿತಕ್ಕೆ ಸೂಚಿಸಿದೆ. ಇದಕ್ಕೆ ಸೋಂಕು ಪರೀಕ್ಷೆ, ಚಿಕಿತ್ಸೆ, ಲಸಿಕಾಕರಣ ಬಿರುಸು ಸೇರಿ ಆರೋಗ್ಯ ಸೇವೆಯ ಹಲವು ಚಟುವಟಿಕೆಗೆ ಇಲಾಖೆಯ ಅಧಿಕಾರಿಗಳು ಸಜ್ಜಾಗುತ್ತಿದ್ದಾರೆ.
ಪ್ರಸ್ತುತ ನಿಯಂತ್ರಣದಲ್ಲಿದೆ ಸೋಂಕು:
ಜಿಲ್ಲೆಯಲ್ಲಿ ಪ್ರಸ್ತುತ ಕರೊನಾ ಸೋಂಕು ಮೃತಪಟ್ಟಿದೆ. ಇತ್ತೀಚೆಗೆ ಹೊಸ ಪ್ರಕರಣಗಳು ಯಾವುದು ಕಂಡಿಲ್ಲ. ಸಕ್ರಿಯ ಪ್ರಕರಣಗಳ ಸಂಖ್ಯೆ ಕೇವಲ 1. ಇಲ್ಲಿಯವರೆಗೂ 56,190 ಮಂದಿಗೆ ಸೋಂಕು ತಗುಲಿದ್ದು, ಈ ಪೈಕಿ 55,726 ಮಂದಿ ಕಾಯಿಲೆ ವಾಸಿಯಾಗಿ, ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. 462 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು 13,82,562 ಜನರ ಗಂಟಲು ಸ್ರಾವ ಮಾದರಿ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 13,19,810 ಮಾದರಿಗಳು ನೆಗೆಟಿವ್ ಆಗಿದೆ. ಲಸಿಕಾರಣದಲ್ಲೂ ಜಿಲ್ಲೆಯು ಮುಂಚೂಣಿಯಲ್ಲಿದೆ. ಬರೋಬ್ಬರಿ 24,65,744 ಡೋಸ್ ಲಸಿಕೆ ಹಾಕಲಾಗಿದೆ. ಬೂಸ್ಟರ್ ಡೋಸ್ ಅಭಿಯಾನವನ್ನು ಮತ್ತಷ್ಟು ಬಿರುಸುಗೊಳಿಸಲಾಗಿದೆ. ಇದರ ನಡುವೆ ವಿದೇಶಗಳಿಂದ ಬಂದವರ ಪೈಕಿ ಯಾರಿಗೂ ಸೋಂಕು ತಗುಲಿರುವ ವರದಿ ಬಂದಿಲ್ಲ.
ಜಿಲ್ಲಾಡಳಿತ ಭವನದ ವಾರ್‌ರೂಮ್ ಪ್ರಾರಂಭ:
ಕರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪರಸ್ಪರ ಉತ್ತಮ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ವಾರ್ ರೂಮ್ ಪ್ರಾರಂಭಿಸಲಾಗಿದೆ. ಜಿಲ್ಲಾಡಳಿತ ಭವನದ ಮೊದಲನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ ಎಫ್‌ಎ.9ರಲ್ಲಿ ನಂಬರ್ ಜನರೇಷನ್, ಪ್ರಥಮ ಹಾಗೂ ದ್ವಿತೀಯ ಸಂಪರ್ಕಿಗಳ ಕಾಂಟ್ಯಾಕ್ಟ್ ಟ್ರೇಸಿಂಗ್, ಹಾಸಿಗೆ ನಿರ್ವಹಣೆ, ಪೇಷಂಟ್ ಡಿಸ್ಟಾರ್ಟ್ ಸೇರಿದಂತೆ ಕರೊನಾ ನಿಯಂತ್ರಣದ ಚಟುವಟಿಕೆ ನಡೆಯಲಿದೆ. ಸಹಾಯವಾಣಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕರೊನಾ ಸಹಾಯವಾಣಿ, ದೂ.ಸಂಖ್ಯೆ: 08156-27707 ಅನ್ನು ಸಂಪರ್ಕಿಸಬಹುದಾಗಿದೆ.
ವ್ಯವಸ್ಥೆ ಪರಿಶೀಲನೆ:
ಸರ್ಕಾರಿ ಆಸ್ಪತ್ರೆಗಳಲ್ಲಿ ಕರೊನಾ ನಿಯಂತ್ರಣ, ಚಿಕಿತ್ಸೆ ಮತ್ತು ಆಕ್ಸಿಜನ್ ವ್ಯವಸ್ಥೆಯನ್ನು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ನೇತೃತ್ವದಲ್ಲಿ ಸರ್ಕಾರಿ ವೈದ್ಯಕೀಯ ಶಿಕ್ಷಣ ಕಾಲೇಜಿನ ಡೀನ್ ಡಾ.ಮಂಜುನಾಥ್, ಆರ್‌ಎಂಒ ಡಾ.ರಮೇಶ್ ಸೇರಿದಂತೆ ವೈದ್ಯರನ್ನೊಳಗೊಂಡ ತಂಡವು ಪರಿಶೀಲಿಸಿದೆ. ಜಿಲ್ಲೆಯಲ್ಲಿನ ಆಕ್ಸಿಜನ್ ಘಟಕಗಳು ಚಾಲ್ತಿಯಲ್ಲಿರುವುದನ್ನು ದೃಢಪಡಿಸಿಕೊಳ್ಳಲಾಗಿದೆ. ಸಿಬ್ಬಂದಿ ಕೊರತೆ ನಿವಾರಣೆ, ಶಂಕಿತ ಪ್ರಕರಣಗಳು ಕಂಡು ಬಂದಾಗ ಕ್ವಾರಂಟೈನ್, ಚಿಕಿತ್ಸೆ ವ್ಯವಸ್ಥೆಯನ್ನು ಪರಿಶೀಲಿಸಿ, ಸಿಬ್ಬಂದಿಗೆ ಸಲಹೆ ಸೂಚನೆ ನೀಡಲಾಗುತ್ತದೆ.
ಆಸ್ಪತ್ರೆಯಲ್ಲಿ ಸೂಕ್ತ ವ್ಯವಸ್ಥೆ:
ಐಸಿಯು, ಐಸಿಯು ಜತೆಗೆ ವೆಂಟಿಲೇಟರ್, ಜನರಲ್ ಹಾಸಿಗೆ ಸೇರಿದಂತೆ ಜಿಲ್ಲಾಸ್ಪತ್ರೆ ಹಾಗೂ ಹಳೇ ಜಿಲ್ಲಾ ಆಸ್ಪತ್ರೆ ಕಟ್ಟಡದಲ್ಲಿನ 150 ಹಾಸಿಗೆಗೆಳು, 5 ತಾಲೂಕು ಆಸ್ಪತ್ರೆಗಳಲ್ಲಿ ತಲಾ 50, ಎಂಸಿಎಚ್ ವಿಭಾಗದಲ್ಲಿ ಚಿಂತಾಮಣಿಯಲ್ಲಿ 30 ಹಾಗೂ ಗೌರಿಬಿದನೂರಿನಲ್ಲಿ 50, ಬಟ್ಲಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಗೂಳೂರು ಆಸ್ಪತ್ರೆಗಳಲ್ಲಿ ತಲಾ 5 ಜನರಲ್ ಹಾಸಿಗೆ, ಜಂಗಮಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 26 ಜನರಲ್ ಮತ್ತು 4 ಐ.ಸಿ.ಯು ಹಾಸಿಗೆಗಳನ್ನು ಕರೊನಾಗಾಗಿ ಮೀಸಲಿಡಲಾಗಿದೆ. ಪ್ರಸ್ತುತ ಜಿಲ್ಲೆಯ 37 ಖಾಸಗಿ ಆಸ್ಪತ್ರೆಗಳಲ್ಲಿ 585 ಹಾಸಿಗೆಗಳು ಕರೊನಾ ಚಿಕಿತ್ಸೆಗಾಗಿ ಲಭ್ಯ ಇವೆ.
ತಡೆಗೆ ಸರ್ವಸನ್ನದ್ಧ
ಶಿಡ್ಲಘಟ್ಟ: ಚೀನಾದಲ್ಲಿ ಕರೊನಾ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಭಾರತ ಸರ್ಕಾರ ಬಿಗಿ ಕ್ರಮ ಕೈಗೊಳ್ಳುತ್ತಿದೆ. ಸರ್ಕಾರಿ ಸೂಚನೆಯಂತೆ ನಾವುಗಳೂ ಸರ್ವಸನ್ನದ್ಧರಾಗಿದ್ದೇವೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮೂರ್ತಿ ತಿಳಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವರು ಸಂಭವನೀಯ ಕರೊನಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿ, ಆಕ್ಸಿಜನ್ ಸಿಲಿಂಡರ್‌ಗಳು, ವೆಂಟಿಲೇಟರ್ ಮತ್ತು ಮಾನವ ಸಂಪನ್ಮೂಲಗಳನ್ನು ಒಳಗೊಂಡಂತೆ ಆಸ್ಪತ್ರೆಯ ಮೂಲಸೌಕರ್ಯಗಳ ವ್ಯವಸ್ಥೆ ಮಾಡಿಕೊಂಡಿದ್ದೇವೆ. 50 ಆಮ್ಲಜನಕ ವ್ಯವಸ್ಥೆಯಿರುವ ಹಾಸಿಗೆ, ಹತ್ತು ಹಾಸಿಗೆಗಳುಳ್ಳ ಐಸಿಯು, 8 ಪ್ರತ್ಯೇಕ ವಾಸದ ಹಾಸಿಗೆಗಳು, ಐದು ವೆಂಟಿಲೇಟರ್‌ಗಳು, ಮಕ್ಕಳಿಗಾಗಿ ಪ್ರತ್ಯೇಕ ಹಾಸಿಗೆ, ರಕ್ತ ತಪಾಸಣೆಗಾಗಿ ಲ್ಯಾಬ್ ವ್ಯವಸ್ಥೆ, 94 ಆಮ್ಲಜನಕ ಸಿಲಿಂಡರುಗಳಲ್ಲಿ 80 ತುಂಬಿವೆ. ವೈದ್ಯರು ಹಾಗೂ ದಾದಿಯರಿಗೆ ತರಬೇತಿ ಸಹ ನೀಡಲಾಗಿದೆ. ಆಸ್ಪತ್ರೆ ಆವರಣದಲ್ಲಿನ ಆಮ್ಲಜನಕ ಉತ್ಪಾದಕ ಘಟಕ ಸುಸ್ಥಿತಿಯಲ್ಲಿದೆ ಎಂದು ಹೇಳಿದರು.
ಸಂಭವನೀಯ ಸೋಂಕು ರೋಗ ನಿಯಂತ್ರಿಸಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಮಾಲೋಚನೆ ನಡೆಸಿದ್ದು, ಸೋಂಕಿತರಿಗಾಗಿ ಪ್ರತ್ಯೇಕ ವಾರ್ಡ್ ಮತ್ತು ಹಾಸಿಗೆ ಮೀಸಲಿಡುವ ಕೆಲಸ ಮಾಡಿದ್ದೇವೆ ಎಂದರು. ಸಾರ್ವಜನಿಕ ಆಸ್ಪತ್ರೆ ಆಡಳಿತ ಅಧಿಕಾರಿ ಡಾ.ಮಂಜನಾಯಕ್, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ದೇವರಾಜ್, ಸುರಕ್ಷತಾಧಿಕಾರಿ ಲೋಕೇಶ್ ಮತ್ತಿತರರು ಇದ್ದರು.
ಕರೊನಾ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಈಗಾಗಲೇ ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಸಂದರ್ಭದಲ್ಲಿ ಹೊಸ ತಳಿ ಸೋಂಕು ಪ್ರಕರಣಗಳು ಕಂಡು ಬಂದರೂ ಸಮರ್ಪಕವಾಗಿ ನಿಭಾಯಿಸುವಲ್ಲಿ ಸಜ್ಜಾಗಿದ್ದು, ಜನರು ಆತಂಕಪಡುವ ಅವಶ್ಯಕತೆ ಇಲ್ಲ. ಸೋಂಕಿನ ನಿಯಂತ್ರಣಕ್ಕೆ ಅಗತ್ಯ ಸಹಕಾರ ನೀಡಬೇಕು.
ಡಾ.ಎಸ್.ಎಸ್.ಮಹೇಶ್ ಕುಮಾರ್
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಚಿಕ್ಕಬಳ್ಳಾಪುರ