

ಯಳಂದೂರು: ಪಟ್ಟಣ ಪಂಚಾಯಿತಿ ಚಿಕ್ಕದಾಗಿದ್ದು ಇಲ್ಲಿನ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಮಾಸ್ಟರ್ ಪ್ಲಾನ್‌ನ್ನು ರಚಿಸಿಕೊಟ್ಟಲ್ಲಿ ನಾನು ಸರ್ಕಾರದಿಂದ ವಿಶೇಷ ಅನುದಾನ ತಂದು ಪಟ್ಟಣವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಪಟ್ಟಣದಲ್ಲಿ ನೂತನವಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಇಂದಿರಾ ಕ್ಯಾಂಟೀನ್ ಬಳಿ ಇರುವ 1.15 ಎಕರೆ ಜಾಗದಲ್ಲಿ 1.05 ಎಕರೆ ಜಾಗದಲ್ಲಿ ಬಸ್ ನಿಲ್ದಾಣ ಮಾಡಲು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಆದಷ್ಟು ಬೇಗ ಕಾಮಗಾರಿ ಆರಂಭಿಸಲು ಕ್ರಮವಹಿಸಲಾಗುವುದು. ಅಲ್ಲದೆ, ಸಮಗ್ರ ಕುಡಿಯುವ ನೀರಿಗೆ 6 ಕೋಟಿ ರೂ.ಹಣ ಬಿಡುಗಡೆಯಾಗಿತ್ತು. ಈಗಾಗಲೇ ಇದಕ್ಕೆ ಮೂರು ಬಾರಿ ಟೆಂಡರ್ ಕರೆಯಲಾಗಿತ್ತು. ಮೂರು ಬಾರಿಯೂ ಒಬ್ಬರೆ ಟೆಂಡರ್ ಹಾಕಿರುವುದರಿಂದ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಉನ್ನತ ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ಇದನ್ನು ಕಳುಹಿಸಿ ಇವರಿಗೆ ಟೆಂಡರ್ ನೀಡಲು ಕ್ರಮ ವಹಿಸಲಾಗುವುದು. ಆಗ ಇಲ್ಲಿನ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ ಎಂದು ಹೇಳಿದರು.
ಮುಳ್ಳೂರು ಗ್ರಾಮದಲ್ಲಿರುವ ಜಾಕ್‌ವೆಲ್‌ನಿಂದ ಪಟ್ಟಣಕ್ಕೆ ಕಾವೇರಿ ಕುಡಿಯುವ ನೀರು ಸರಬರಾಜಾಗುತ್ತಿದ್ದು ಮಾರ್ಗ ಮಧ್ಯೆ ಇರುವ ಗ್ರಾಮಗಳಿಗೂ ನೀರು ನೀಡಲಾಗುತ್ತಿದೆ. ಈಗ ಜೆಜೆಎಂ ಯೋಜನೆ ಜಾರಿಯಾಗಿದ್ದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಇದನ್ನು ಕಡಿತಗೊಳಿಸಲು ಕ್ರಮವಹಿಸಲಾಗುವುದು. ಎಸ್‌ಎಫ್‌ಸಿ ಹಾಗೂ 15ನೇ ಹಣಕಾಸು ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅನುಮೋದನೆ ನೀಡಲಾಗಿದೆ. ಇದರೊಂದಿಗೆ ಪಂಚಾಯಿತಿಯಲ್ಲಿ 40 ಮಂಜೂರು ಹುದ್ದೆಗಳಿದ್ದು ಇಲ್ಲಿ ಸಿಬ್ಬಂದಿ ಕೊರತೆ ಇದೆ. ಹುದ್ದೆ ಭರ್ತಿಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಹೈಮಾಸ್ಟ್ ವಿದ್ಯುತ್ ದೀಪಗಳ ದುರಸ್ತಿ, ಹಳೇ ಪಪಂ ಕಚೇರಿಯ ನವೀಕರಣ, ಸಂತೆಮಾಳದಲ್ಲಿರುವ ಅಂಗಡಿ ಮಳಿಗೆಗಳ ದುರಸ್ತಿಗೆ ಮನವಿ ಮಾಡಿದ್ದು ಇದನ್ನು ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಸತ್ತವರ ಹೆಸರಲ್ಲಿ ಇ-ಸ್ವತ್ತು : ಪಟ್ಟಣ ಪಂಚಾಯಿತಿಯ 2ನೇ ವಾರ್ಡ್ ಸದಸ್ಯ ವೈ.ಜಿ.ರಂಗನಾಥ ಮಾತನಾಡಿ, ಈ ವಾರ್ಡಿನ ಕಮ್ಮನಕೇರಿ ವ್ಯಾಪ್ತಿಯಲ್ಲಿ ಬಿಳಿಗಿರಿರಂಗನಾಯಕ ಅವರಿಗೆ ಇ-ಸ್ವತ್ತು ನೀಡಲಾಗಿದೆ. ಇವರು ಮೃತಪಟ್ಟು 10 ವರ್ಷಗಳ ಮೇಲಾಗಿದೆ. ಅಲ್ಲದೆ ನಾಡ ಹೆಂಚಿನ ಮನೆಯನ್ನು ಆರ್‌ಸಿಸಿ ಕಟ್ಟಡವೆಂದು ಪರಿಗಣಿಸಿ ಇ-ಸ್ವತ್ತು ನೀಡಲಾಗಿದ್ದು ಇದಕ್ಕೆ ಕಾರಣವಾಗಿರುವ ನೌಕರರ ವಿರುದ್ಧ ಕಾನೂನು ಕ್ರಮ ವಹಿಸುವಂತೆ ಮನವಿ ಮಾಡಿದರು. ಇದಕ್ಕೆ ಶಾಸಕರು ನೌಕರರು, ಮುಖ್ಯಾಧಿಕಾರಿ ವಿರುದ್ಧ ಗರಂ ಆದರು. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ವಹಿಸಿ ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು.
ದೇಗುಲ, ಅಂಗನವಾಡಿಗೆ ಜಾಗ ನೀಡಿ
ಪಪಂನ ಒಂದನೇ ವಾರ್ಡ್‌ನ ಸದಸ್ಯ ಮಹೇಶ್ ಮಾತನಾಡಿ, ಈ ವಾರ್ಡ್ ವ್ಯಾಪ್ತಿಯಲ್ಲಿ ದೇಗುಲ ಹಾಗೂ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಸ್ಥಳ ಮಂಜೂರು ಮಾಡಿ ಎಂದು 2020 ರಲ್ಲೇ ತೀರ್ಮಾನ ಮಾಡಲಾಗಿದೆ. ಆದರೂ ಜಾಗ ಗುರುತಿಸಿಲ್ಲ ಎಂದು ಸಭೆಯಲ್ಲಿ ದೂರಿದರು. ಈ ಬಗ್ಗೆ ಶೀಘ್ರದಲ್ಲೇ ಕ್ರಮ ವಹಿಸುವಂತೆ ಶಾಸಕರು ಸೂಚನೆ ನೀಡಿದರು.
ಕಟ್ಟಡ ತೆರವಿಗೆ ಕ್ರಮ
ಬಸ್ ನಿಲ್ದಾಣದಲ್ಲಿ ವಾಣಿಜ್ಯ ಕಟ್ಟಡವನ್ನು ರಾಷ್ಟ್ರೀಯ ಹೆದ್ದಾರಿ 209ರ ವಿಸ್ತರಣೆ ಸಮಯದಲ್ಲಿ ಹಾಗೆಯೇ ಬಿಡಲಾಗಿದೆ. ಆದರೆ ಈ ಬಗ್ಗೆ ಪಂಚಾಯಿತಿ ಬಳಿ ಸೂಕ್ತ ದಾಖಲೆಗಳೇ ಇಲ್ಲ. ಹೈಕೋರ್ಟ್ ಆದೇಶವಿದ್ದು ಇದನ್ನು ತೆರವುಗೊಳಿಸಬಾರದು ಎಂಬ ಸಬೂಬು ನೀಡಿ ಈ ಕಟ್ಟಡ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಅಲ್ಲದೆ ಇದನ್ನು ನವೀಕರಿಸಿ ಇಲ್ಲಿ ಅಂಗಡಿ ಮಳಿಗೆಗಳನ್ನು ಬಾಡಿಗೆಗೆ ನೀಡಲಾಗಿದ್ದು ಇದನ್ನು ತೆರವುಗೊಳಿಸುವಂತೆ ಶಾಸಕರಿಗೆ ಸದಸ್ಯರು ಮನವಿ ಮಾಡಿದರು. ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿ ತನಿಖೆ ನಡೆಸಿ ಕ್ರಮ ವಹಿಸುವಂತೆ ಶಾಸಕರು ಮನವಿ ಮಾಡಿದರು. ಅಲ್ಲದೆ ಆದಷ್ಟು ಬೇಗ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪಪಂ ಅಧ್ಯಕ್ಷೆ ಲಕ್ಷ್ಮೀ ಮಲ್ಲು, ಉಪಾಧ್ಯಕ್ಷೆ ಶಾಂತಮ್ಮ ನಿಂಗರಾಜು, ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ಮಹದೇವನಾಯಕ, ಸವಿತಾ ಬಸವರಾಜು, ಮಂಜು, ಪ್ರಭಾವತಿ, ಬಿ.ರವಿ, ಸುಶೀಲಾ ಪ್ರಕಾಶ್, ಲಿಂಗರಾಜಮೂರ್ತಿ, ಮುಖ್ಯಾಧಿಕಾರಿ ಮಹೇಶ್‌ಕುಮಾರ್, ಜೆಇ ನಾಗೇಂದ್ರ, ಜಯಲಕ್ಷ್ಮೀ, ಲಕ್ಷ್ಮೀ, ರೇಖಾ, ಬಸವಣ್ಣ, ಮಲ್ಲಿಕಾರ್ಜುನಸ್ವಾಮಿ ಇದ್ದರು.