

ಚಿಕ್ಕಮಗಳೂರು: ಶಿಕ್ಷಕರು ಬೋಧನೆಯನ್ನು ಉನ್ನತ ಮಟ್ಟದಲ್ಲಿ ಮಾಡುವುದರ ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿನ ಎಲ್ಲ ಸವಾಲುಗಳನ್ನು ಸ್ವೀಕರಿಸಿ ಅವುಗಳನ್ನು ಎದುರಿಸಲು ಸನ್ನದ್ಧರಾಗಿರಬೇಕು ಎಂದು ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ.ರಾಜಶೇಖರ್ ತಿಳಿಸಿದರು.
ನಗರದ ಜೆವಿಎಸ್ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲೆ ಆರಂಭಕ್ಕೂ ಮುನ್ನ ಶಾಲೆಯ ಶಿಕ್ಷಕರಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕಲಿಕೆ ಎನ್ನುವುದು ನಿರಂತರವಾಗಿರಬೇಕು. ಹಿರಿಯ ಶಿಕ್ಷಕರ ಮಾರ್ಗದರ್ಶನ ಪಡೆದು ಉತ್ತಮ ಬೋಧನೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಹೆಚ್ಚು ಆಸಕ್ತಿ ಮೂಡಿಸಬೇಕು. ಆಗ ಪಾಲಕರು ಸಂತಸಪಡುವ ಜೊತೆಗೆ ಶಾಲೆಯ ಕೀರ್ತಿ ಇನ್ನಷ್ಟು ಹೆಚ್ಚಲಿದೆ ಎಂದು ಹೇಳಿದರು.
ಜೆವಿಎಸ್ ಶಾಲೆಗೆ ಈ ಬಾರಿಯೂ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ. ೧೦೦ರಷ್ಟು ಫಲಿತಾಂಶ ಬಂದಿರುವುದಕ್ಕೆ ಶಿಕ್ಷಕರ ಪರಿಶ್ರಮ ಮುಖ್ಯ. ಶಿಕ್ಷಕರ ಸಹಕಾರಕ್ಕೆ ಧನ್ಯವಾದ ಹೇಳಲೇಬೇಕಿದೆ. ಶಿಕ್ಷಕರಿಂದಲೇ ನಿರಂತರವಾಗಿ ಶಾಲೆ ದೊಡ್ಡ ಸಾಧನೆ ಮಾಡಲು ಸಾಧ್ಯವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಸಕ್ತ ಶೈಕ್ಷಣಿಕ ವರ್ಷದ ೨೦೨೪-೨೫ನೇ ಸಾಲಿನಲ್ಲಿಯೂ ಇದೇ ರೀತಿ ಶಾಲೆ ಜಿಲ್ಲಾ ಮಟ್ಟದಲ್ಲಿ ಹೆಸರು ಮಾಡಲು ಶಿಕ್ಷಕರು ಪರಿಶ್ರಮ ಹಾಕಿ ಸಹಕರಿಸಬೇಕು ಎಂದರು.
ತರಬೇತುದಾರ ಉದಯ್ ಮಾತನಾಡಿ, ೨೪ ಸೆಂಚುರಿ ಶಿಕ್ಷಣದ ಆಯಾಮ ಎಂಬ ಬಗ್ಗೆ ಶಿಕ್ಷಕರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಸಲಾಗುತ್ತಿದೆ. ಇಲ್ಲಿ ಶಿಕ್ಷಕರಿಗೆ ಬೋಧನೆ ಮಾತ್ರವಲ್ಲ ಯಾವುದೇ ವಿಷಯದಲ್ಲಿ ಪರಿಣಿತಿ ಹೊಂದಲು ಹೊಸ ಹೊಸ ಶಿಕ್ಷಣ ತಂತ್ರಗಳನ್ನು ಪರಿಚಯಿಸಲಾಗುತ್ತಿದೆ ಎಂದು ಹೇಳಿದರು.
ಕಳೆದ ೧೫ ವರ್ಷಗಳ ಹಿಂದಿನ ಶಿಕ್ಷಣಕ್ಕೂ ಈಗಿನ ಶಿಕ್ಷಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಪ್ರಸ್ತುತ ವಿದ್ಯಾರ್ಥಿಗಳ ಜ್ಞಾನಕ್ಕೆ ತಕ್ಕಂತೆ ಬೋಧನೆ ಮಾಡಬೇಕಾದ ಅಗತ್ಯವಿದೆ ಎಂದರು.
ಕಾರ್ಯಾಗಾರದಲ್ಲಿ ಜೆವಿಎಸ್ ಶಾಲೆ ಮುಖ್ಯ ಶಿಕ್ಷಕ ವಿಜಿತ್, ಸಿಇಓ ಕುಳ್ಳೇಗೌಡ ಮತ್ತಿತರರಿದ್ದರು.