'ಪಕ್ಷ ಅಧಿಕಾರಕ್ಕೆ ತರಲು ಈಗಿನಿಂದಲೇ ತಯಾರಿ ಮಾಡಿಕೊಳ್ಳಿರಿ'

33
Published on

ಮೈಸೂರು: ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುವಂತೆ ಕಾರ್ಯಕರ್ತರು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುವಂತೆ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಹೇಳಿದರು.

ಜಿಲ್ಲಾ ಬಿಜೆಪಿ ಗ್ರಾಮಾಂತರದಿಂದ ನಂಜನಗೂಡು ನಗರ ಮಂಡಲದ ಬೂತ್ ಸಂಖ್ಯೆ 34,35,36,37,41,42 ಹಾಗೂ ಹೆಗ್ಗಡಹಳ್ಳಿ ಗ್ರಾ.ಪಂ ವ್ಯಾಪ್ತಿಗೆ ಸಂಬಂಧಿಸಿದ ಬೂತ್‌ಗಳ ಅಧ್ಯಕ್ಷರುಗಳ ಆಯ್ಕೆ ಬಳಿಕ ಅವರು ಮಾತನಾಡಿದರು.

ಆರು ವರ್ಷಗಳಿಗೆ ಒಮ್ಮೆ ಬಿಜೆಪಿ ಸದಸ್ಯ ನವೀಕರಣ ಮಾಡುವುದಲ್ಲದೇ ಹೊಸ ಸದಸ್ಯರ ಸೇರ್ಪಡೆ ಮಾಡಿಕೊಳ್ಳುತ್ತದೆ. ಆದ್ದರಿಂದ ಅಧ್ಯಕ್ಷರು ನಿಯೋಜನೆ ಆಗುವ ಮೂಲಕ ಪ್ರತಿ ಬೂತ್‌ನಲ್ಲೂ 13 ಜನರ ಒಂದು ಸಮಿತಿ ಬೂತ್ ಅಧ್ಯಕ್ಷ, ಬೂತ್ ಕಾರ್ಯದರ್ಶಿ,ಪೇಜ್ ಪ್ರಮುಖ್, ಮನ್‌ಕಿಬಾತ್ ಪ್ರಮುಖ್, ಲಾ ಭಾರತಿ ಪ್ರಮುಖ್ ಇದೆಲ್ಲವನ್ನು ನೇಮಕ ಮಾಡಬೇಕು ಎಂದರು.

ಎಲ್ಲರೂ ಮುಂಬರುವ ಜಿ.ಪಂ. ಹಾಗೂ ತಾ.ಪಂ. ಚುನಾವಣೆಗಳಲ್ಲಿ ನಮ್ಮ ಅಭ್ಯರ್ಥಿಗಳು ಹೆಚ್ಚಿನ ರೀತಿಯಲ್ಲಿ ಗೆಲ್ಲಬೇಕೆಂದರೆ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿ, ಅಭ್ಯರ್ಥಿಗಳಾಗಲು ಬಯಸುವವರು ಮನೆಮನೆಗೆ ತೆರಳಿ ಚಿರಪರಿಚಿತರಾಗಿ ಸದಸ್ಯತ್ವ ನೋಂದಣಿ ಬಳಿಕ ಆ ಬೂತ್‌ನ್ನು ಗಟ್ಟಿಗೊಳಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಹೇಳಿದರು.

ಮಾಜಿ ಶಾಸಕ ಹರ್ಷವರ್ಧನ್ ನಂಜನಗೂಡಿನಲ್ಲಿ 251 ಬೂತ್ ಇದ್ದು ಪ್ರತೀ ಬೂತ್‌ನಲ್ಲಿ ಬೂತ್ ಸಮಿತಿ ಮಾಡಿಕೊಡುವ ನಿಟ್ಟಿನಲ್ಲಿ ನಾನೂ ಕೂಡ ಪ್ರತೀ ಬೂತ್‌ಗಳಿಗೂ ಭೇಟಿ ನೀಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟನೆ ಮಾಡಿ ಬಿಜೆಪಿಯನ್ನು ಬೂತ್ ಮಟ್ಟದಿಂದ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳಿದರು.

ಸಂಘಟನಾ ಪರ್ವ ವಿಭಾಗ ಸಂಚಾಲಕ ಸಚ್ಚಿದಾನಂದ ಮೂರ್ತಿ ಮಾತನಾಡಿದರು. ನಂಜನಗೂಡು ನಗರ ಅಧ್ಯಕ್ಷ ಸಿದ್ದರಾಜು,ನಗರಸಭಾ ಸದಸ್ಯ ಮಹದೇವಪ್ರಸಾದ್, ನಂಜನಗೂಡು ಗ್ರಾಮಾಂತರ ಅಧ್ಯಕ್ಷ ಕೆಂಡಗಣ್ಣಪ್ಪ, ಜಿಲ್ಲಾ ಉಪಾಧ್ಯಕ್ಷ ಚಿಕ್ಕರಂಗನಾಯಕ, ಕೃಷ್ಣಪ್ಪ ಗೌಡ, ಸಂಘಟನಾ ಪರ್ವ ಸಹಯೋಗಿ ಪರಿಷತ್ತಿನ ರಾಜ್ ಅರಸ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಮಹೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net