ಶಿರಾ ಉಪಚುನಾವಣೆ ಮತದಾನ ಪ್ರಕ್ರಿಯೆಗೆ ಸಕಲ ಸಿದ್ಧತೆ

dc 1
Published on

ತುಮಕೂರು: ಶಿರಾ ಉಪಚುನಾವಣೆ ಮತದಾನ ಪ್ರಕ್ರಿಯೆ ನ.3ರಂದು ನಡೆಯಲಿದ್ದು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಟ್ಟು 2,15,725 ಮತದಾರರಿದ್ದು ಈ ಪೈಕಿ 1,10,281 ಪುರುಷರು, 1,05,434 ಮಹಿಳೆಯರು ಹಾಗೂ 10 ಇತರ ಮತದಾರ ರಿದ್ದಾರೆ. ನಮೂನೆ-12ಡಿ ಅಡಿ ಅಂಚೆ ಮತಪತ್ರದ ಮೂಲಕ ಈಗಾಗಲೇ 4,821 ಜನರು ಮತ ಚಲಾಯಿಸಿದ್ದಾರೆ ಎಂದು ತಿಳಿಸಿದರು.

ಕ್ಷೇತ್ರದಲ್ಲಿ 267 ಮತಗಟ್ಟೆಗಳ ಜತೆಗೆ 63 ಹೆಚ್ಚುವರಿಯಾಗಿ ಸ್ಥಾಪಿಸಲಾಗಿದೆ, ಇವುಗಳಲ್ಲಿ 6 ಅತಿಸೂಕ್ಷ್ಮ ಹಾಗೂ 64 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು ಬಿಗಿ ಪೊಲೀಸ್ ವ್ಯವಸ್ಥೆ ಕೈಗೊಳ್ಳಲಾಗಿದೆ, ಮತದಾನ ಪ್ರಕ್ರಿಯೆಯಲ್ಲಿ 1588 ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ವಿವರಿಸಿದರು.

ಎಲ್ಲ ಮತಗಟ್ಟೆಗಳಲ್ಲಿ ಸ್ಯಾನಿಟೈಸ್ ಮಾಡಲಾಗಿದ್ದು ಮತದಾರರು ಧೈರ್ಯವಾಗಿ ಮತದಾನ ಮಾಡಬಹುದು, ಜನದಟ್ಟನೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ, ಶಿರಾ ತಾಲೂಕು ವೈದ್ಯಾಧಿಕಾರಿ ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದರು.

ಎಂ-3 ಇವಿಎಂ ಬಳಕೆ: ಉಪಚುನಾವಣೆಯಲ್ಲಿ ಎಂ3 ಇವಿಎಂ ಬಳಸಲಾಗುತ್ತಿದೆ, ಈಗಾಗಲೇ ಬಿಯು-462, ಸಿಯು 462 ಮತ್ತು 495 ವಿವಿ ಪ್ಯಾಟ್‌ಗಳನ್ನು ಹಂಚಿಕೆ ಮಾಡಲಾಗಿದೆ, ಇವಿಎಂ ಹಾಗೂ ವಿವಿ ಪ್ಯಾಟ್ ಕಾರ್ಯ ಮೇಲ್ವಿಚಾರಣೆಗಾಗಿ ನಾಲ್ವರು ಬಿಇಎಲ್ ಇಂಜಿನಿಯರ್‌ಗಳನ್ನು ನಿಯೋಜಿಸಲಾಗಿದೆ. ಭದ್ರತೆಗೆ ಇಬ್ಬರು ಡಿಸಿಪಿ, 5 ಪಿಐ, 21 ಪಿಎಸ್‌ಐ, 19 ಎಎಸ್‌ಐ, 208 ಎಚ್‌ಸಿ, 561 ಪಿಸಿ, 50 ಹೋಂ ಗಾರ್ಡ್ ಸೇರಿ ಒಟ್ಟು 866 ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಸಿಎಪಿಎ್ ನ್ನ 3 ತುಕ್ಕಡಿಯ 270 ಸಿಬ್ಬಂದಿ ಇರಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಒ ಶುಭಾ ಕಲ್ಯಾಣ, ಎಸ್ಪಿ ಡಾ.ವಂಶಿಕೃಷ್ಣ, ಎಡಿಸಿ ಚನ್ನಬಸಪ್ಪ ಇದ್ದರು.

ತುಮಕೂರಿನಲ್ಲಿ ಮತ ಎಣಿಕೆ: ಶಿರಾ ತಾಲೂಕಿನಲ್ಲಿ ಮತ ಎಣಿಕೆಗೆ ಸೂಕ್ತ ಜಾಗದ ಅಭಾವದ ಕಾರಣಕ್ಕೆ ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ 2ನೇ ಕೊಠಡಿಯಲ್ಲಿ ನ.10ರಂದು ಮತ ಎಣಿಕೆ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ. ಒಂದು ಕೊಠಡಿಯಲ್ಲಿ 7 ಟೇಬಲ್ ಮಾತ್ರ ಅಳವಡಿಸಲು ಚುನಾವಣಾ ಆಯೋಗ ಸೂಚಿಸಿರುವ ಹಿನ್ನೆಲೆಯಲ್ಲಿ ಪಾಲಿಟೆಕ್ನಿಕ್ ಕಾಲೇಜಿನ ಕೊಠಡಿಗಳಲ್ಲಿ ಮತ ಎಣಿಕೆ ನಡೆಯಲಿದೆ. ಅಂಚೆ ಮತಗಳ ಸಂಖ್ಯೆಯೂ 4,821 ಇದ್ದು ಅವುಗಳ ಎಣಿಕೆಯೂ ಸ್ಥಳಾವಕಾಶ ಜಾಸ್ತಿ ಬೇಕಿದೆ. 14 ಟೇಬಲ್‌ನಲ್ಲಿ ಇವಿಎಂ ಮತ ಎಣಿಕೆ ಹಾಗೂ ಮತ್ತೊಂದು ಕೊಠಡಿಯ ಮೂರು ಟೇಬಲ್‌ನಲ್ಲಿ ಅಂಚೆ ಮತ ಎಣಿಕೆ ನಡೆಯಲಿದೆ.

4,821 ಅಂಚೆ ಮತಗಳು..: ಶಿರಾ ಉಪಸಮರದಲ್ಲಿ ದಾಖಲೆಯ ಬರೋಬ್ಬರಿ 4,821 ಅಂಚೆ ಮತಗಳು ಚಲಾವಣೆಯಾಗಿದ್ದು ಚುನಾವಣಾ ಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಕೆಲವು ಕಡೆ ಹೆಚ್ಚು ಹಣ ಕೊಟ್ಟು ಅಂಚೆ ಮತಗಳ ಖರೀದಿಸಿವೆ ಎಂಬ ದೂರುಗಳು ಸಾರ್ವತ್ರಿಕವಾಗಿಯೇ ಇದೆ. ಕರೊನಾ ಕಾರಣಕ್ಕೆ 80 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರಿಗೆ ಅಂಚೆ ಮತದಾನ ಮಾಡಲು ಚುನಾವಣಾ ಆಯೋಗ ವಿಶೇಷ ಅವಕಾಶ ನೀಡಿತ್ತು. ನೋಂದಣಿಯಾದ 5,100 ಮತದಾರರ ಪೈಕಿ 4,821 ಮಾತ್ರ ಸಲ್ಲಿಕೆಯಾಗಿದ್ದು ಉಳಿದವರು ಮತಗಟ್ಟೆಯಲ್ಲಿ ಮತ ಸಲ್ಲಿಸಲು ಮಾತ್ರ ಅವಕಾಶವಿದೆ.

ಪಕ್ಷಗಳಿಗೆ ಎ್ಐಆರ್ ಬಿಸಿ: ಕೋವಿಡ್19 ನೀತಿ ಸಂಹಿತೆ ಉಲ್ಲಂಘನೆ ಹಾಗೂ ಇತರ ಕಾರಣಕ್ಕೆ ರಾಜಕೀಯ ಪಕ್ಷಗಳ ವಿರುದ್ಧ 19 ಪ್ರಕರಣಗಳು ದಾಖಲಾಗಿದ್ದು ಈ ಪೈಕಿ 8 ಎ್ಐಆರ್ ಆಗಿದೆ. ಬಿಜೆಪಿ 6, ಕಾಂಗ್ರೆಸ್ 1 ಹಾಗೂ ಕೆಆರ್‌ಎಸ್ ವಿರುದ್ಧ 1 ಎ್ಐಆರ್ ಆಗಿದೆ. 11 ಎನ್‌ಸಿಆರ್ ಪೈಕಿ ಕಾಂಗ್ರೆಸ್ 4, ಜೆಡಿಎಸ್ 3, ಬಿಜೆಪಿ ವಿರುದ್ಧ 4 ದಾಖಲಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದ್ದು ಕ್ಷೇತ್ರದಲ್ಲಿ ಮತದಾರರಿಗೆ ಆಮಿಷದ ಹೊಳೆಯೇ ಹರಿಯುತ್ತಿದ್ದರೂ ಚುನಾವಣಾ ಆಯೋಗ ಜಾಣಮೌನವಾಗಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net