

ಮಡಿಕೇರಿ:
ಕಳೆದ ಮಳೆಗಾಲದಲ್ಲಿ ವಾಡಿಕೆಯ ಮಳೆಯಾಗದೆ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿರುವ ಕೊಡಗಿನಲ್ಲಿ ಈ ವರ್ಷ ಉತ್ತಮ ಮುಂಗಾರಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಹವಾಮಾನ ತಜ್ಞರು ಕೂಡ ಇದಕ್ಕೆ ಪೂರಕವಾದ ಹವಾಮಾನ ಮುನ್ಸೂಚನೆಯನ್ನು ನೀಡಿದ್ದು, ಜನರಲ್ಲಿ ದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ. ಈ ಬೆನ್ನಲ್ಲೇ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಮಳೆಗಾಲವನ್ನು ಎದುರಿಸಲು ಬೇಕಾದ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು, ಕೂಲಿ ಕಾರ್ಮಿಕರ ಅಭಾವದ ಮಧ್ಯೆ ಆಯಾಯ ಮನೆಯವರೇ ಸಿದ್ಧತಾ ಕಾರ್ಯಕ್ಕೆ ಇಳಿದಿರುವುದು ಕಾಣಬಹುದು.
ಸಾಮಾನ್ಯವಾಗಿ ಮೇ ಅಂತ್ಯ ಅಥವಾ ಜೂನ್ ಮೊದಲ ವಾರ ಮಳೆಗಾಲ ಶುರುವಾಗುತ್ತದೆ. ಕೊಡಗಿನಲ್ಲಿ ಒಮ್ಮೆ ಮಳೆ ಹಿಡಿದುಕೊಂಡರೆ ಅಕ್ಟೋಬರ್ ತನಕವೂ ಬಿಡುವುದಿಲ್ಲ. ಹಾಗಾಗಿ ಸುಮಾರು ೫ ತಿಂಗಳ ಕಾಲ ಮಳೆಯನ್ನು ಎದುರಿಸಲು ಬೇಕಾದ ಸಿದ್ಧತೆಯನ್ನು ಈಗಿನಿಂದಲೇ ಮಾಡಿಕೊಳ್ಳಲಾಗುತ್ತದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಈ ಸಂಬಂಧ ಚಟುವಟಿಕೆಗಳು ಭರದಿಂದ ನಡೆಯುತ್ತಿವೆ. ಕಟ್ಟಿಗೆ ಸಂಗ್ರಹ, ಅಕ್ಕಿ ಮಾಡಿಸುವುದು, ದೀರ್ಘಕಾಲ ಕೆಡದಿರುವ ಆಹಾರ ಪದಾರ್ಥಗಳ ಶೇಖರಣೆ ಹೀಗೆ ಒಂದಿಲ್ಲೊಂದು ಕೆಲಸಗಳು ಬಿಸಿಲಿನ ತಾಪದ ಮಧ್ಯೆಯೇ ನಡೆಯುತ್ತಿದೆ.
ಬೆಟ್ಟ ಗುಡ್ಡಗಳಿಂದ ಕೂಡಿರುವ ಮಲೆನಾಡಿನ ಜಿಲ್ಲೆ ಕೊಡಗಿನಲ್ಲಿ ಮಡಿಕೇರಿ ತಾಲೂಕಿನ ಭಾಗಮಂಡಲ ಹೋಬಳಿ ವ್ಯಾಪ್ತಿಯ ಪ್ರದೇಶಗಳು, ನಾಪೋಕ್ಲು ಹೋಬಳಿಯ ಕಕ್ಕಬ್ಬೆ ಸುತ್ತಮುತ್ತಲಿನ ಗ್ರಾಮಗಳು, ಹಚ್ಚಿನಾಡು, ಹಮ್ಮಿಯಾಲ, ಮುಟ್ಲು, ಮುಕ್ಕೋಡ್ಲು, ಕಾಲೂರು, ಗಾಳಿಬೀಡು, ಸೋಮವಾರಪೇಟೆ ತಾಲೂಕಿನ ಗರ್ವಾಲೆ, ಸೂರ್ಲಬ್ಬಿ, ಶಾಂತಳ್ಳಿ ಆಸುಪಾಸಿನ ಹಳ್ಳಿಗಳು, ವಿರಾಜಪೇಟೆ ತಾಲೂಕಿನಲ್ಲಿ ಕೇರಳ ಗಡಿಯಂಚಿನಲ್ಲಿ ಇರುವ ಬಹುತೇಕ ಗ್ರಾಮಗಳು ಮಳೆಗಾಲದ ಅವಧಿಯಲ್ಲಿ ಸಾಕಷ್ಟು ತೊಂದರೆಗೆ ಒಳಗಾಗುವುದು ಸಾಮಾನ್ಯ.
ಕೊಡಗಿನ ದುರ್ಗಮ ಸ್ಥಳಗಳಲ್ಲಿ ಇರುವ ಕೆಲವು ಪ್ರದೇಶಗಳಂತೂ ಮಳೆಗಾಲದಲ್ಲಿ ಹೊರಜಗತ್ತಿನೊಂದಿಗೆ ತಿಂಗಳುಗಟ್ಟಲೆ ಸಂಪರ್ಕ ಕಡಿದುಕೊಂಡು ಬಿಡುತ್ತವೆ. ವಿದ್ಯುತ್, ದೂರವಾಣಿ ಸಂಪರ್ಕವೂ ಇರುವುದಿಲ್ಲ. ದಿನಸಿ ಸಾಮಗ್ರಿ ಸೇರಿದಂತೆ ಮನೆ ಬಳಕೆಯ ದೈನಂದಿನ ಅಗತ್ಯಗಳಿಗೆ ಬೇಕಾದ ವಸ್ತುಗಳು ಕೂಡ ಸಿಗದಂತಹ ಪರಿಸ್ಥಿತಿ ನಿರ್ಮಾಣ ಆಗಿಬಿಡುತ್ತದೆ. ಈ ಹಿನ್ನೆಲೆಯಲ್ಲಿ ಮಳೆಗಾಲವನ್ನು ಎದುರಿಸಲು ಬೇಸಿಗೆಯ ಏಪ್ರಿಲ್, ಮೇ ತಿಂಗಳಿನಲ್ಲಿ ಇಂತಹ ದುರ್ಗಮ ಪ್ರದೇಶಗಳಲ್ಲಿ ಸಿದ್ಧತೆ ನಡೆಸಲಾಗುತ್ತದೆ. ಜಗತ್ತಿನಲ್ಲಿ ಏನೇ ನಡೆಯುತ್ತಿದ್ದರೂ ಈ ತಮ್ಮ ಕರ್ತವ್ಯವನ್ನು ಮಾತ್ರ ಗ್ರಾಮೀಣರು ಮರೆಯುವುದಿಲ್ಲ.
ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನವರು ಅಡುಗೆಗೆ ಈಗಲೂ ಕಟ್ಟಿಗೆ ಒಲೆ ಬಳಸುತ್ತಾರೆ. ಕಟ್ಟಿಗೆಯ ಒಲೆ ಉರಿಯುವುದರಿಂದ ಮನೆಯೂ ಬೆಚ್ಚಗೆ ಇರುತ್ತದೆ ಎನ್ನುವ ಕಾರಣಕ್ಕೆ ಕಟ್ಟಿಗೆ ಬಳಕೆ ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಳೆಗಾಲಕ್ಕೆ ಬೇಕಾದ ಕಟ್ಟಿಗೆ ಸಂಗ್ರಹಕ್ಕೆ ಈ ಸಮಯದಲ್ಲಿ ಆದ್ಯತೆ ಕೊಡಲಾಗುತ್ತದೆ. ತೋಟದಲ್ಲಿನ ಒಣ ಮರಗಳನ್ನು ಗುರುತಿಸಿ, ಅವುಗಳನ್ನು ತುಂಡರಿಸಿ, ಚಿಕ್ಕ ಚಿಕ್ಕ ಭಾಗಗಳನ್ನಾಗಿ ಮಾಡಿ ಮನೆಯ ಬಳಿ ಸಂಗ್ರಹಿಸಿ ಇಡಲಾಗುತ್ತದೆ. ತೋಟ ಇಲ್ಲದವರು ಬೇರೆಯವರ ಬಳಿ ಖರೀದಿಸಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ಚೆನ್ನಾಗಿ ಒಣಗಿದ, ಉರಿಯುವಾಗ ಹೊಗೆ ಬಾರದ ಮರದ ಕಟ್ಟಿಗೆಗಳಿಗೆ ಬೇಡಿಕೆ ಹೆಚ್ಚು.
ದುರ್ಗಮ ಪ್ರದೇಶದಲ್ಲಿ ವಾಸ ಮಾಡುವ ಜನರಿಗೆ ಮಳೆಗಾಲದ ಅವಧಿಯಲ್ಲಿ ಪೇಟೆ, ಪಟ್ಟಣಗಳಿಗೆ ಹೋಗಿ ದೈನಂದಿನ ಬಳಕೆಯ ವಸ್ತುಗಳನ್ನು ಖರೀದಿಸಿ ತರಲು ಸಾಧ್ಯವಾಗದ ಪರಿಸ್ಥಿತಿ ಇರುತ್ತದೆ. ರಸ್ತೆ ಮೇಲೆ ಪ್ರವಾಹದ ನೀರು ಬರುವುದು, ಸೇತುವೆ ಮುಳುಗಡೆ, ಬರೆ ಕುಸಿತ.. ಹೀಗೆ ಅನೇಕ ಕಾರಣಗಳಿಂದ ಸಂಚಾರ ದುಸ್ಥರವಾಗಿರುವುದರಿಂದ ೪-೫ ತಿಂಗಳಿಗೆ ಅಗತ್ಯವಾದ ದಿನಸಿ ಮತ್ತು ದಿನ ಬಳಕೆ ವಸ್ತುಗಳನ್ನು ಖರೀದಿಸಿ ಶೇಖರಿಸಿ ಇಟ್ಟುಕೊಳ್ಳಲಾಗುತ್ತದೆ.
ಮನೆ ಮತ್ತು ತೋಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ದುರಸ್ತಿ, ಕಾಫಿ ತೋಟದ ನಿರ್ವಹಣಾ ಕೆಲಸಗಳು, ತೋಟದ ಬೇಲಿ ದುರಸ್ತಿ, ಭತ್ತದ ಗದ್ದೆಗಳಿಗೆ ನೀರಿನ ವ್ಯವಸ್ಥೆ, ಉಳುಮೆಯ ಸಿದ್ಧತೆ, ನೈಸರ್ಗಿಕ ಮೂಲಗಳಿಂದ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಗಳು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುವುದು, ತೋಟ, ಭತ್ತದ ಗದ್ದೆಗಳಿಗೆ ಅಗತ್ಯವಿರುವ ರಸಗೊಬ್ಬರ ಸಂಗ್ರಹ, ಮನೆಗಳ ಛಾವಣಿ ದುರಸ್ತಿ ಇಂತಹ ಮಳೆಗಾಲಕ್ಕೆ ಅಗತ್ಯವಿರುವ ಅನೇಕ ಸಿದ್ಧತೆಗಳನ್ನು ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ತಿಂಗಳುಗಳಲ್ಲಿ ಮಾಡಿ ಮುಗಿಸದಿದ್ದರೆ ಮಳೆಗಾಲದಲ್ಲಿ ಪರದಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಎರಡು ತಿಂಗಳು ಎಂಥಹದ್ದೇ ಕಾರ್ಯಕ್ರಮವಿದ್ದರೂ ಕೊಡಗಿನ ಗ್ರಾಮೀಣರು ಮಳೆಗಾಲದ ಸಿದ್ಧತೆ ಮಾಡಿಕೊಳ್ಳುವುದನ್ನು ಮರೆಯುವುದಿಲ್ಲ.
ಈ ವರ್ಷ ಮುಂಗಾರು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಸಾಮಾನ್ಯ ಮುಂಗಾರು ಎಂದರೂ ಕೊಡಗಿನಲ್ಲಿ ಮಳೆಯ ಅಬ್ಬರ ಹೆಚ್ಚೇ ಇರುತ್ತದೆ. ಕಳೆದ ಮಳೆಗಾಲದಲ್ಲಿ ವಾಡಿಕಡಯ ಮಳೆಯಾಗದ ಕಾರಣ ಈ ವರ್ಷದ ಮುಂಗಾರಿನಲ್ಲಿ ಹೆಚ್ಚು ಮಳೆ ಸುರಿಯುವ ನಿರೀಕ್ಷೆ ಹೊಂದಲಾಗಿದೆ. ಜಿಲ್ಲೆಯ ಹಲವೆಡೆ ಮಳೆಯಾಗುತ್ತಿದ್ದು, ಹಗಲಿನಲ್ಲಿ ಬಿರುಬಿಸಿಲಿನ ವಾತಾವರಣ ಇದೆ. ಇದಕ್ಕೆ ಹೆದರಿ ಅಗತ್ಯ ಕರ್ತವ್ಯ ಮರೆತರೆ ಮಳೆಗಾಲದ ಕಳೆಯುವುದು ಕಷ್ಟವಾಗಲಿದೆ. ಹಾಗಾಗಿ ಈ ತಿಂಗಳು ಮುಗಿಯುವದರ ಒಳಗೆ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿ ಗ್ರಾಮೀಣರು ಇದ್ದಾರೆ.
ಪ್ರತಿ ಮಳೆಗಾಲದಲ್ಲೂ ದ್ವೀಪದಂತಾಗಿ ಹೊತಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಳ್ಳುತ್ತಿದ್ದ ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲ ಜನತೆಗೆ ಈ ವರ್ಷ ಆ ಭಯ ಇಲ್ಲ. ಕೊಡಗಿನ ಮೊದಲ ಫೈಓವರ್ ಹೆಗ್ಗಳಿಕೆಯ ಭಾಗಮಂಡಲದ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಇದೀಗ ಸಂಚಾರಕ್ಕೆ ಮುಕ್ತವಾಗಿದೆ. ಚುನಾವಣಾ ನೀತಿ ಸಂಹಿತೆ ಕಾರಣಕ್ಕೆ ಅಧಿಕೃತವಾಗಿ ಉದ್ಘಾಟನೆ ಆಗದಿದ್ದರೂ ಸಾರ್ವಜನಿಕ ಬಳಕೆಗೆ ಮುಕ್ತ ಮಾಡಲಾಗಿದೆ. ಕಾವೇರಿ ನೀರಾವರಿ ನಿಗಮ ಮೂಲಕ ನಿರ್ಮಾಣಗೊಂಡಿರುವ ೨೮ ಕೋಟಿ ರೂ. ವೆಚ್ಚದ ಈ ಮೇಲ್ಸೇತುವೆ ಕಾಮಗಾರಿಗೆ ೨೦೧೮ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಂಜೂರಾತಿ ಕೊಟ್ಟಿತ್ತು. ಆದರೆ ಭೂಸ್ವಾಧೀನ, ಸೆಸ್ಕ್ ಸಂಬಂಧಿ ಸಮಸ್ಯೆ, ಮರಗಳ ತೆರವು, ಕೋವಿಡ್-೧೯, ಅತಿವೃಷ್ಠಿ ಮತ್ತಿತರ ಕಾರಣಗಳಿಂದ ಕಾಮಗಾರಿ ಆಮೆಗತಿಯಲ್ಲಿ ನಡೆದಿತ್ತು.
೩೬ ಪಿಲ್ಲರ್‌ಗಳನ್ನು ಒಳಗೊಂಡ ೮೮೦ ಮೀಟರ್ ಉದ್ದದ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗಿರುವುದರಿಂದ ಭಾಗಮಂಡಲ-ತಲಕಾವೇರಿ ಮತ್ತು ಭಾಗಮಂಡಲ-ನಾಪೋಕ್ಲು ಕಡೆಗೆ ಹೋಗುವವರು ಮಳೆಗಾಲದಲ್ಲೂ ಸುರಕ್ಷಿತವಾಗಿ ಓಡಾಡಬಹುದಾಗಿದೆ. ವೇಗದ ಮಿತಿ ೪೦ ಕಿಮೀ ನಿಗದಿಪಡಿಸಲಾಗಿದ್ದು, ೬೦ ಟನ್ ತನಕದ ಭಾರದ ವಾಹನಗಳು ಸಂಚರಿಸಹುದಾದ ಸಾಮರ್ಥ್ಯ ಹೊಂದಿದೆ. ಇನ್ನು ಮುಂದೆ ಮಳೆಗಾಲದಲ್ಲಿ ಭಾಗಮಂಡಲ, ತಲಕಾವೇರಿ, ಕೋರಂಗಾಲ, ಚೇರಂಗಾಲ ಸುತ್ತಮುತ್ತಲಿನ ಗ್ರಾಮಸ್ಥರು ಕಾವೇರಿ ಮತ್ತು ಕನ್ನಿಕೆ ನದಿಯಲ್ಲಿ ಎಷ್ಟು ನೀರು ಬಂದರೂ ಸರಾಗವಾಗಿ ಓಡಾಡಬಹುದಾಗಿದೆ.
ಭಾಗಮಂಡಲ ಎಂದರೆ ನೆನಪಾಗುವುದೇ ಮಳೆ. ಇಲ್ಲಿ ಒಮ್ಮೆ ಮಳೆಗಾಲ ಶುರುವಾಯಿತೆಂದರೆ ಮತ್ತೆ ಬಿಸಿಲು ಕಾಣಲು ೬ ತಿಂಗಳು ಬೇಕು. ಒಮ್ಮೊಮ್ಮೆ ವಿದ್ಯುತ್ ಕೈ ಕೊಟ್ಟರೆ ವಾರಗಟ್ಟಲೆ ಬರುವುದೇ ಇಲ್ಲ. ಈ ಭಾಗದಲ್ಲಿ ಅಡುಗೆಗೆ, ಸ್ನಾನಕ್ಕೆ ನೀರು ಬಿಸಿ ಮಾಡಲು ಕಟ್ಟಿಗೆ ಒಲೆ ಬಳಸುವುದು ಸಾಮಾನ್ಯ. ಹಾಗಾಗಿ ಮಳೆಗಾಲಕ್ಕೆ ಉತ್ತಮವಾದ ಒಣಗಿದ ಕಟ್ಟಿಗೆ ಬೇಕಾಗುತ್ತದೆ. ಇದನ್ನು ಸಂಗ್ರಿಸುವ ಕೆಲಸ ಏಪ್ರಿಲ್‌ನಿಂದಲೇ ನಡೆದಿರುತ್ತದೆ.
ಜೆ.ಬಿ. ರವಿಶಂಕರ, ಭಾಗಮಂಡಲ
ಮಳೆಗಾಲ ಬಂತೆಂದರೆ ಸಾಕು ನಮಗೆಲ್ಲಾ ಹೊರಜಗತ್ತನೊಂದಿಗೆ ಸಂಪರ್ಕ ಕಳೆದುಕೊಳ್ಳುವ ಆತಂಕ ಆಗುತ್ತಿತ್ತು. ಆದರೆ ಈ ವರ್ಷ ಆ ಭಯ ಇಲ್ಲ. ನಮ್ಮೂರಿನಲ್ಲಿ ಫ್ಲೈಓವರ್ ಕಾಮಗಾರಿ ಮುಗಿದಿದ್ದು, ವಾಹನಗಳು ಮತ್ತು ಜನರ ಓಡಾಟಕ್ಕೆ ಸಿಕ್ಕಿರುವುದರಿಂದ ಅನುಕೂಲವಾಗಿದೆ. ಇದರಿಂದಾಗಿ ಮಲೆಗಾಲದಲ್ಲಿ ಸ್ಥಳೀಯರು, ಶಾಲಾ-ಕಾಲೇಜು ಮಕ್ಕಳು ಪಡುತ್ತಿದ್ದ ಕಷ್ಟವೂ ದೂರವಾದಂತೆ ಆಗಿದೆ.
ಕುದುಕುಳಿ ಶಬರೀಶ್, ಭಾಗಮಂಡಲ