

ವಿಜಯವಾಣಿ ಸುದ್ದಿಜಾಲ ತುಮಕೂರು
ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿ ಪ್ರವಾಹದ ತುರ್ತು ಪರಿಸ್ಥಿತಿ ಉಂಟಾದ ಸಂದರ್ಭದಲ್ಲಿ ಅಲ್ಲಿನ ಜನರನ್ನು ರಕ್ಷಿಸುವ ಬಗ್ಗೆ ಮಹಾನಗರಪಾಲಿಕೆ ಮತ್ತು ಅಗ್ನಿಶಾಮಕ ದಳದಿಂದ ನಗರದ ಅಮಾನಿಕೆರೆ ಕೋಡಿಹಳ್ಳದ ಬಳಿ ಮಂಗಳವಾರ ಅಣಕು ಪ್ರದರ್ಶನ ನೀಡಲಾಯಿತು.
ನಗರದ ಕೋಡಿಹಳ್ಳದ ಬಳಿ 22ಕ್ಕೂ ಹೆಚ್ಚು ಮನೆಗಳಿಗೆ 2021ರಲ್ಲಿ ಅಮಾನಿಕೆರೆ ಕೋಡಿ ಹರಿದು ನೀರು ನುಗ್ಗಿತ್ತು. ಆ ಸಂದರ್ಭದಲ್ಲಿ ಪ್ರವಾಹದಲ್ಲಿ ಸಿಲುಕಿದ ಜನರನ್ನು ನಗರದ ಪೂರ್ಣಯ್ಯ ಛತ್ರ, ಬಟವಾಡಿ ಸಮುದಾಯ ಭವನಗಳಿಗೆ ಸ್ಥಳಾಂತರಿಸಲಾಗಿತ್ತು.
ಈ ವರ್ಷವೂ ಸತತ ಮಳೆಯಾಗುತ್ತಿದ್ದು, ಪ್ರವಾಹ ಸ್ಥಿತಿ ಏನಾದರೂ ಎದುರಾದಲ್ಲಿ ಪ್ರವಾಹದಲ್ಲಿ ಸಿಲುಕಿದ ಜನರನ್ನು ರಕ್ಷಿಸುವ ಬಗ್ಗೆ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಕ್ರಮವಹಿಸಲಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ತಿಳಿಸಿದರು.
ಅಣಕು ಪ್ರದರ್ಶನ ವೀಕ್ಷಿಸಿ ಮಾತನಾಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ಎದುರಿಸಲು ಜಿಲ್ಲಾಡಳಿತ, ಪೊಲೀಸ್, ಅಗ್ನಿಶಾಮಕ ದಳ, ಸ್ಥಳಿಯ ಸಂಸ್ಥೆಗಳಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು. ಸಾರ್ವಜನಿಕರು ಮಳೆಯಿಂದಾಗಿ ತೊಂದರೆಗೆ ಸಿಲುಕಿದ್ದಲ್ಲಿ ತುರ್ತು ಸಹಾಯವಾಣಿ ಸಂಖ್ಯೆ 101, 112 ಮತ್ತು ಸ್ಮಾರ್ಟ್ ಸಿಟಿ ಕಂಟ್ರೋಲ್ ರೂಂ ಸಂಖ್ಯೆ: 73049 75519ಕ್ಕೆ ಕರೆ ಮಾಡಬಹುದು. ದಿನದ 24 ಗಂಟೆಯೂ ಸಹಾಯವಾಣಿ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.
ಪ್ರವಾಹದಲ್ಲಿ ಸಿಲುಕಿದವರನ್ನು ಲೈಫ್ ಜಾಕೇಟ್, ರೋಪ್ ನೆರವಿನಿಂದ ಜನರನ್ನು ರಕ್ಷಿಸುವ ಬಗ್ಗೆ ಅಗ್ನಿಶಾಮಕ ದಳ ಹಾಗೂ ಮಹಾನಗರಪಾಲಿಕೆ ಸಿಬ್ಬಂದಿಯಿಂದ ಅಣಕು ಪ್ರದರ್ಶನ ನೀಡಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಪಿ.ಶಶಿಧರ್ ಇದ್ದರು.
ಆ.7ರವರೆಗೂ ಮಳೆ ಸಾಧ್ಯತೆ: ತುಮಕೂರು ಜಿಲ್ಲೆಯಲ್ಲಿಯೂ ಆ.7ರವರೆಗೆ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ತಿಪಟೂರು ತಾಲೂಕು ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ಟಕ ಮಾಹಿತಿ ನೀಡಿದೆ. ಮುಂದಿನ 5 ದಿನಗಳ ಕಾಲ ಮೋಡ ಕವಿದ ವಾತಾವಣವಿರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಆ.5 ಮತ್ತು 7ರಂದು ಜಿಲ್ಲೆಯ 10 ತಾಲೂಕುಗಳಲ್ಲಿಯೂ ಹೆಚ್ಚಿನ ಮಳೆ ಬೀಳಬಹುದು. ಆ.3ರಂದು ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 11.6ಮಿಮೀ, ಗುಬ್ಬಿ 2.7, ಕೊರಟಗೆರೆ 1.3, ಕುಣಿಗಲ್ 1.6, ಮಧುಗಿರಿ 3.1, ಪಾವಗಡ 5.3, ಶಿರಾ 8.9, ತಿಪಟೂರು 7.3, ತುಮಕೂರು 2.1, ತುರುವೇಕೆರೆ 2.8ಮಿಮೀ ಮಳೆಯಾಗುವ ಸಾಧ್ಯತೆಯಿದೆ. ಆಗಸ್ಟ್ ತಿಂಗಳಲ್ಲಿ ರಾಗಿ ಬಿತ್ತನೆಗೆ ಅವಕಾಶವಿದ್ದು, ಜಿಪಿಯು 45, 66, 48, 26, ಕೆಎಂಆರ್ 316, 340, 630 ಎಂಎಲ್ 365, 322 ಸೂಕ್ತ ಆಯ್ಕೆಯಾಗಿವೆ. ಬಿತ್ತನೆಗೆ ಮುನ್ನ ಪ್ರತಿ ಕೆಜಿ ರಾಗಿಗೆ 2ಗ್ರಾಂ ಕಾರ್ಬನೈಜಿಂನಿಂದ ಬೀಜೋಪಚಾರ ಮಾಡಲು ತಜ್ಞರು ಸಲಹೆ ನೀಡಿದ್ದಾರೆ.