

ವಿಜಯವಾಣಿ ಸುದ್ದಿಜಾಲ ಧಾರವಾಡ
ಪದವಿ ಹಂತದಲ್ಲೇ ಯುವಕರು ಐಎಎಸ್, ಐಪಿಎಸ್ನಂತಹ ಪರೀಕ್ಷೆಗಳಿಗೆ ಸಿದ್ಧತೆ ಆರಂಭಿಸಬೇಕು. ವಿವಿಧ ಇಲಾಖೆಗಳ ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳು ಯುವ ಚೇತನದಲ್ಲಿ ಭಾಗವಹಿಸಿ ಸಾಧಿಸುವ ಛಲದಿಂದ ಪ್ರತಿಜ್ಞೆ ಮಾಡಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ನಗರದ ಸೃಜನಾ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಯುವ ಚೇತನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿ ತಿಂಗಳು ಯುವ ಚೇತನ ಕಾರ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ವಿಷಯ ತಜ್ಞರು, ತರಬೇತುದಾರರು, ಹಿರಿಯ ಅಧಿಕಾರಿಗಳು ವಿಶೇಷ ಉಪನ್ಯಾಸಗಳ ಮೂಲಕ ಮಾಹಿತಿ ನೀಡಲಿದ್ದಾರೆ. ವಸತಿ ನಿಲಯಗಳಲ್ಲಿ ಬಡ, ಮಧ್ಯಮ ಕುಟುಂಬದ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡಲು ಉಚಿತವಾಗಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಪದವಿ ಶಿಕ್ಷಣದ ಹಂತ ಜೀವನದಲ್ಲಿ ಬಹು ಮುಖ್ಯ ಘಟ್ಟ. ವಿದ್ಯಾರ್ಥಿಗಳು ಓದು, ಸಾಧನೆ ಬಿಟ್ಟು ಬೇರೆಡೆ ಚಿಂತಿಸಬಾರದು. ಜೀವನದ ಗುರಿ ತಲುಪಿದಾಗ ನೆಮ್ಮದಿ ಸಿಗುತ್ತದೆ. ಮುನ್ನುಗ್ಗುವ, ಸಾಧನೆ ಮಾಡುವ ಹಠ, ಛಲ ಇರಬೇಕು ಎಂದರು.
ಜಿಪಂ ಸಿಇಒ ಭುವನೇಶ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯರ್ಥಿಗಳು ಸ್ವಯಂ ನಿರ್ಧಾರ ಮತ್ತು ದೃಢತೆಯಿಂದ ಸಿದ್ಧರಾಗಬೇಕು. ಪರೀಕ್ಷೆ ಸಿದ್ಧತೆ ಆರಂಭದಿಂದ ವ್ಯವಸ್ಥಿವಾಗಿ ಆಗಬೇಕು. ಇನ್ನೊಬ್ಬರನ್ನು ನೋಡಿ, ಬರಿ ಆಸೆ ಪಟ್ಟು ಬರೆಯುವ ಪರೀಕ್ಷೆ ಅಲ್ಲ. ಆತ್ಮ ವಿಶ್ವಾಸ ಮತ್ತು ಕಠಿಣ ಪರಿಶ್ರಮ ಮುಖ್ಯ ಎಂದರು.
ಪ್ರದಿಪ ಆಚಾರ್ಯ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿದಾರ ಗುರುರಾಜ ಬುಲಬಲೆ ವಿಶೇಷ ಉಪನ್ಯಾಸ ನೀಡಿದರು. ವಿವಿಧ ಇಲಾಖೆಗಳ ವಸತಿ ನಿಲಯಗಳ ವಿದ್ಯಾರ್ಥಿಗಳು, ನಿಲಯಪಾಲಕರು ಭಾಗವಹಿಸಿದ್ದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭ ಪಿ. ಸ್ವಾಗತಿಸಿದರು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಗೋಪಾಲ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಗಂಗಾಧರ ದೊಡ್ಡಮನಿ ವಂದಿಸಿದರು.