

ಮೈಸೂರು: ಬಸಣ್ಣನವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಯೋಜಿಸಲು ಕ್ರಮಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ತಿಳಿಸಿದರು.
ಬಸವ ಜಯಂತಿ ಆಚರಣೆ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮಹಾನುಭವರ ಆಚಾರ-ವಿಚಾರ ಸಂದೇಶಗಳನ್ನು ಸಮಾಜಕ್ಕೆ ತಲುಪಿಸಲು ಬಸವಣ್ಣನವರ ಜಯಂತಿ ಆಚರಣೆ ಅಗತ್ಯ. ಜಯಂತಿಯನ್ನು ಅರ್ಥಪೂರ್ಣವಾಗಿ ಹಾಗೂ ಮಹಾನುಭವರ, ಸಾಧಕರ ಸಂದೇಶಗಳನ್ನು ಜೀವನ ಮೌಲ್ಯಗಳನ್ನು ಸಮಾಜಕ್ಕೆ ನೀಡುವ ಕೆಲಸವಾಗಬೇಕು ಎಂದು ಹೇಳಿದರು.
ಏ.30 ರಂದು ಬೆಳಗ್ಗೆ 10ಕ್ಕೆ ನಗರದ ಡಾ.ಶ್ರೀ ಶಿವರಾತ್ರೀಶ್ವರ ವೃತ್ತದಲ್ಲಿರುವ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡಲಾಗುವುದು. ನಂತರ ಮೆರವಣಿಗೆಯಲ್ಲಿ ಕರ್ನಾಟಕ ಕಲಾ ಮಂದಿರಕ್ಕೆ ತೆರಳಿ ಸಭಾ ಕಾರ್ಯಕ್ರಮ ಆಯೋಜಿಸಲಾಗುವುದು. ಬಸವೇಶ್ವರರ ಪ್ರತಿಮೆ ಸ್ಥಳದ ಆವರಣದಲ್ಲಿ ಶಾಮಿಯಾನ, ಸ್ವಚ್ಛತೆ, ಆಸನಗಳ ವ್ಯವಸ್ಥೆ ಹಾಗೂ ಜಯಂತಿ ನಡೆಯುವ ಸ್ಥಳದ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ತಳಿರು ತೋರಣ ವ್ಯವಸ್ಥೆಯನ್ನು ನಗರಪಾಲಿಕೆಯಿಂದ ವ್ಯವಸ್ಥೆಗೊಳಿಸಬೇಕು ಎಂದು ತಿಳಿಸಿದರು.
ಸಮುದಾಯದ ಮುಖಂಡರು ತಮ್ಮ ತಮ್ಮ ಸಮುದಾಯದ ಬಡವರಿಗೆ ಸಹಾಯ ಮಾಡಬೇಕು. ಸಮುದಾಯದ ಮಕ್ಕಳಿಗೆ ಶೈಕ್ಷಣಿಕ ಸಹಾಯ ಮಾಡಬೇಕು. ಜಯಂತಿಗಳನ್ನು ಆಚರಣೆ ಮಾಡುವುದು ಅವರ ಆಚಾರ ವಿಚಾರಧಾರೆಗಳನ್ನು ಯುವ ಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಜಯಂತಿಗಳನ್ನು ಆಚರಣೆ ಮಾಡಿದಕ್ಕೆ ಒಂದು ಅರ್ಥ ಬರುತ್ತದೆ ಎಂದು ತಿಳಿಸಿದರು.
ಜಯಂತಿ ಆಚರಣೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ಎಲ್ಲ ಸಮುದಾಯದವರು ಸೇರಿ ಜಯಂತಿಗಳ ಆಚರಣೆ ಮಾಡಬೇಕು. ಜಯಂತಿಗಳ ಆಚರಣೆಯ ಉದ್ದೇಶ ಮಹನೀಯರ ಆದರ್ಶಗಳನ್ನು ಪಾಲನೆ ಮಾಡುವುದು ಆಗಿದೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ಸುದರ್ಶನ್ ಮಾತನಾಡಿ, ಜಯಂತಿ ಆಚರಣೆಗೆ ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಿಸಿ ಜನಪ್ರತಿನಿಧಿಗಳು, ಮುಖಂಡರಿಗೆ ಆಹ್ವಾನ ನೀಡಲಾಗುವುದು. ಕಲಾಮಂದಿರದಲ್ಲಿ ವಚನ ಗಾಯನ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಬಸವಣ್ಣನವರ ಜಯಂತಿ ಆಚರಣೆಯ ಸಾನ್ನಿಧ್ಯಕ್ಕೆ ಸಮುದಾಯದ ಸ್ವಾಮೀಜಿ ಹೆಸರನ್ನು ಆಯ್ಕೆ ಮಾಡಿ ಒಂದೆರಡು ದಿನಗಳಲ್ಲಿ ನೀಡಲಾಗುವುದು. ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಸಮುದಾಯದ ಮುಖಂಡರು ಸಭೆಗೆ ಮಾಹಿತಿ ನೀಡಿದರು.
ಮುಖಂಡರಾದ ಕೆ.ಎನ್.ಪುಟ್ಟಬುದ್ಧಿ, ಮೂಗೂರು ನಂಜುಂಡಸ್ವಾಮಿ, ಬಿ ಕೆ ನಾಗರಾಜ್, ಬಾಬು, ಶಿವಶಂಕರ್, ಭಾನುಮೋಹನ್, ಚಿನ್ನಸ್ವಾಮಿ ಇತರರು ಇದ್ದರು.