ಸರ್ಕಾರ ಎರಡು ವರ್ಷ ಪೂರೈಸಿದ ಸಾಧನಾ ಸಮಾವೇಶಕ್ಕೆ ಪೂರ್ವಭಾವಿ ಸಭೆ

14
Published on

ಮೈಸೂರು: ರಾಜ್ಯ ಸರ್ಕಾರದಿಂದ ನಗರ ವ್ಯಾಪ್ತಿಯಲ್ಲಿ ಜು.19ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ಸಾಧನಾ ಸಮಾವೇಶ ಆಯೋಜಿಸಲಾಗಿದೆ ಎಂದು ವಿಧಾನ ಪರಿಷತ್ತಿನ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಸಮಾವೇಶ ಕುರಿತು ರಾಮಕೃಷ್ಣನಗರದ ಸ್ವಗೃಹದಲ್ಲಿ ಬುಧವಾರ ಆಯೋಜಿಸಿದ್ದ ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಅವರು ಮಾತನಾಡಿ, ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶದಲ್ಲಿ ಮೈಸೂರು ನಗರಕ್ಕೆ ನೀಡಿದ ಅಪಾರ ಕೊಡುಗೆಗಳನ್ನು ಮೆಲುಕು ಹಾಕುವ ಜತೆಗೆ, ಹಲವು ಐತಿಹಾಸಿಕ ಯೋಜನೆಗಳಿಗೆ ಶಂಕುಸ್ಥಾಪನೆ ನಡೆಸಲಾಗುವುದು ಎಂದು ತಿಳಿಸಿದರು.

ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿರುವ ಕಾಂಗ್ರೆಸ್ ಸರ್ಕಾರ ಈಗಾಗಲೇ ಮೂರ್ನಾಲ್ಕು ಭಾಗಗಳಲ್ಲಿ ಸಾಧನ ಸಮೇವೇಶವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಅದೇ ರೀತಿ ಮೈಸೂರು ಭಾಗಕ್ಕೆ ಸಂಬಂಧಿಸಿದಂತೆ ಸಮಾವೇಶ ಆಯೋಜಿಸಲಾಗಿದೆ. ನಗರದ ಜನತೆಯ ಬೇಡಿಕೆ ಹಾಗೂ ಜನಕಲ್ಯಾಣ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ, ಇತರ ಇಲಾಖೆ ಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮೈಸೂರು ನಗರ ಭಾಗದ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು, ಜನರು ಭಾಗವಹಿಸಲಿದ್ದು ವರುಣ ವಿಧಾನಸಭಾ ಕ್ಷೇತ್ರದಿಂದ ಆಗಮಿಸುವಂತೆ ಮಾಡಬೇಕು ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಮಾತನಾಡಿ, ಮೈಸೂರು ನಗರ ಹಾಗೂ ಜಿಲ್ಲೆಯ ಶಾಸಕರ ಸಭೆ ಕರೆದು ವ್ಯವಸ್ಥಿತ ಸಿದ್ಧತೆ ಮಾಡಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ಜನಪ್ರತಿನಿಧಿಗಳ ಸಭೆ ಕರೆಯಲಾಗಿದ್ದು, ಸಮಾವೇಶ ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಮೈಸೂರು ಜಿಲ್ಲೆ ಹಾಗೂ ನಗರ ವ್ಯಾಪ್ತಿಯ ಶಾಸಕರು, ಸಂಸದರು ಹಾಗೂ ಮಾಜಿ ಶಾಸಕರ ಸಭೆ ಕರೆಯಲಾಗಿದೆ. ಇದು ಸೀಮಿತವಾಗಿ ಮೈಸೂರು ನಗರ ವ್ಯಾಪ್ತಿಗೆ ಸಂಬಂಧಿಸಿದ ಸರ್ಕಾರದ ಸಾಧನಾ ಸಮಾವೇಶ ಮಾತ್ರವೇ ವಿನಾ ರಾಜ್ಯದ ಎರಡು ವರ್ಷದ ಸಾಧನಾ ಸಮಾವೇಶವಲ್ಲ. ಈ ಸರ್ಕಾರದ ಸಮಾವೇಶದಲ್ಲಿ ಮೈಸೂರು ನಗರ ಹಾಗೂ ಜಿಲ್ಲೆ ವ್ಯಾಪ್ತಿಯ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಲು ವಿನಂತಿಸಿದರು.

ಬಹಳಷ್ಟು ವರ್ಷಗಳಿಂದ ಹಾಗೇಯೇ ಉಳಿದಿರುವ ಶ್ರೀಮತಿ ಇಂದಿರಾ ಗಾಂಧಿ ಕಾಂಗ್ರೆಸ್ ಭವನದ ಭೂಮಿಪೂಜೆಯನ್ನು ಇದೇ ತಿಂಗಳ ಕೊನೆಯ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೆರವೇರಿಸಲಿದ್ದಾರೆ. ಹಾಗಾಗಿ ಮುಂಬರುವ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಬೂತ್ ಮಟ್ಟದಲ್ಲಿ ಸಿದ್ಧತೆ ಆರಂಭಿಸಬೇಕು ಎಂದು ತಿಳಿಸಿದರು.

ನಂಜನಗೂಡು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಗಡೂರು ರಂಗಸ್ವಾಮಿ, ವರುಣ ವಿಧಾನಸಭಾ ಕ್ಷೇತ್ರ ವಿವಿಧ ಮುಖಂಡರು, ಜನಪ್ರತಿನಿಧಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net