ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ 14 ಮಕ್ಕಳ ವಿಚಾರಣೆ

PUBLIC EXAM
Published on

ಬೆಂಗಳೂರು: ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಗಣಿತ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಅಪ್ರಾಪ್ತ 14 ವಿದ್ಯಾರ್ಥಿಗಳನ್ನು ಉತ್ತರ ವಿಭಾಗದ ಸಿಇಎನ್ ಪೊಲೀಸರು ವಿಚಾರಣೆ ನಡೆಸಿದ್ದು, ಪ್ರಮುಖ ಆರೋಪಿಗಾಗಿ ಕಾರ್ಯಾಚರಣೆ ಮುಂದುವರಿದಿದೆ.

ಇವರು ಕೋಲಾರ ಮತ್ತು ಬಂಗಾರಪೇಟೆಯ 3 ಶಾಲೆಗಳ ವಿದ್ಯಾರ್ಥಿಗಳಾಗಿದ್ದು, ಈ ಬಗ್ಗೆ ಪಾಲಕರು ಮತ್ತು ಶಿಕ್ಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ. ಹಲೋ ಆಪ್​ನಲ್ಲಿ ಅಪ್​ಲೋಡ್ ಆಗಿದ್ದ ಗಣಿತ ಪ್ರಶ್ನೆಪತ್ರಿಕೆಯನ್ನು ಡೌನ್​ಲೋಡ್ ಮಾಡಿಕೊಂಡ ವಿದ್ಯಾರ್ಥಿಗಳು ಮುಖ್ಯಪರೀಕ್ಷೆ ಸಿದ್ಧತೆ ನಡೆಸಲು ವಾಟ್ಸ್​ಆಪ್ ಗ್ರೂಪ್​ನಲ್ಲಿ ಹಂಚಿಕೊಂಡಿದ್ದರು.

ಈ ಬಗ್ಗೆ ಫೆ.15ರಂದು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಅಧಿಕಾರಿಗಳು ಉತ್ತರ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವಿಶೇಷ ತಂಡ ಹಲೋ ಆಪ್ ಸುಳಿವಿನ ಮೇರೆಗೆ 14 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ, ಈ ವಿದ್ಯಾರ್ಥಿಗಳಿಗೆ ಹಲೋ ಆಪ್ ಬಗ್ಗೆ ತಿಳಿಸಿದ ಪ್ರಮುಖ ವ್ಯಕ್ತಿ ಯಾರೆಂಬುದು ಗೊತ್ತಾಗಿಲ್ಲ. ವಿದ್ಯಾರ್ಥಿಗಳ ಮೊಬೈಲ್​ಗಳನ್ನು ಸಿಐಡಿ ಸೈಬರ್ ಲ್ಯಾಬ್​ಗೆ ರವಾನಿಸಲಾಗಿದೆ.

ಮೊದಲು ಪ್ರಶ್ನೆ ಪತ್ರಿಕೆ ಅಪ್​ಲೋಡ್ ಮಾಡಿದವನ ಬಗ್ಗೆ ಹಲೋ ಆಪ್ ಅಭಿವೃದ್ಧಿ ಪಡಿಸಿದ ಕಂಪನಿ ಬಳಿ ಮಾಹಿತಿ ಕೇಳಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಸುದ್ದಿ ಹರಡುತ್ತಿದಂತೆ ಆಪ್ ಡಿಲೀಟ್ ಮಾಡಲಾಗಿದೆ. ರಾಕೇಶ್ 8105 ಐಡಿ ಯಿಂದ ಅಪ್​ಲೋಡ್ ಆಗಿರುವ ಸುಳಿವು ಸಿಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net