ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷಾ ಕಾರ್ಯ, 45 ದಿನ ಸಮಗ್ರ ಮಾಹಿತಿ ಸಂಗ್ರಹಕ್ಕೆ ಸಿದ್ಧತೆ

IMG_20250912_230902.jpg
Published on

ಚಿಕ್ಕಬಳ್ಳಾಪುರ: ಲಿಂಗತ್ವ ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಿ, ಪುನರ್ವಸತಿ ಕಲ್ಪಿಸಲು ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ನೇತೃತ್ವದಲ್ಲಿ ಸಮೀಕ್ಷಾ ಕಾರ್ಯ ನಿರ್ವಹಣೆಯ ಬಗ್ಗೆ ಚರ್ಚಿಸಲಾಯಿತು. ಸಮೀಕ್ಷೆ ಕುರಿತು ಪೋಸ್ಟರ್ ಗಳನ್ನು ಮತ್ತು ಸಮೀಕ್ಷಾ ಟ್ಯಾಬ್ ಗಳನ್ನು ಬಿಡುಗಡೆಗೊಳಿಸಲಾಯಿತು. 
ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಾದ್ಯಂತ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆಯನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕೈಗೊಳ್ಳುತ್ತಿದ್ದು ಈ ವಿಶೇಷ ವರ್ಗದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಿ, ಮುಂದಿನ ದಿನಗಳಲ್ಲಿ ಸರ್ಕಾರದಿಂದ ವಿಶೇಷ ಯೋಜನೆಗಳನ್ನು ರೂಪಿಸಲಾಗುತ್ತದೆ. ಹಾಗೆಯೇ ಸವಲತ್ತುಗಳನ್ನು ಒದಗಿಸಲಾಗುತ್ತದೆ.

*೪೫ ದಿನಗಳ ಸಮೀಕ್ಷೆ
ರಾಜ್ಯಾದ್ಯಂತ ಏಕ ಕಾಲದಲ್ಲಿ ಸೆ.15 ರಿಂದ ಸಮೀಕ್ಷೆಯನ್ನು ಪ್ರಾರಂಭಿಸುತ್ತಿದ್ದು (ಸರ್ಕಾರಿ ರಜೆಯನ್ನು ಹೊರತು ಪಡಿಸಿ) 45 ದಿನಗಳ ಕಾಲ ಪ್ರಕ್ರಿಯೆ ನಡೆಯಲಿದೆ. ಅದರಲ್ಲೂ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರೇ ಸಮೀಕ್ಷೆ ಕಾರ್ಯ ಕೈಗೊಳ್ಳುತ್ತಿರುವುದು ವಿಶೇಷವಾಗಿದೆ. ಜಿಲ್ಲೆಯಲ್ಲಿ ಸಮುದಾಯ ಆಧಾರಿತ ನಿಸರ್ಗ ಸಂಸ್ಥೆಯಲ್ಲಿನವರನ್ನು ಸಮೀಕ್ಷೆದಾರರನ್ನಾಗಿ ಆಯ್ಕೆ ಮಾಡಲಾಗಿದೆ. ಈಗಾಗಲೇ ವಿವಿಧ ಹಂತದ ತರಬೇತಿಯನ್ನು ನೀಡಲಾಗಿದೆ.
ಹೆಚ್ಚಿನ ಪ್ರಚಾರಕ್ಕಾಗಿ ಮಾಹಿತಿ ಶಿಕ್ಷಣ ಹಾಗೂ ಸಂವಹನಕ್ಕೆ ಸಂಬಂಧಿಸಿದಂತೆ ಪೋಸ್ಟರ್ ಹಾಗೂ ಹೋರ್ಡಿಂಗ್ ಗಳನ್ನು ಬಸ್‌ ಹಾಗೂ ರೈಲ್ವೇ ನಿಲ್ದಾಣ, ಆಸ್ಪತ್ರೆ ಆವರಣ, ಮಾರುಕಟ್ಟೆ ಪ್ರದೇಶ, ಕಾಲೇಜು ಆವರಣ, ತಾಲೂಕು ಕಚೇರಿ ಸ್ಥಳಗಳಲ್ಲಿ ಅಳವಡಿಸಲಾಗಿದೆ.

*೧೫೦ ಪ್ರಶ್ನಾವಳಿ
ಸಮೀಕ್ಷೆ ಕಾರ್ಯವನ್ನು Mobile App ನ “KARMANI Web Application” ಮೂಲಕ ಟ್ಯಾಬ್‌ ಗಳಲ್ಲಿ 150 ಪ್ರಶ್ನಾವಳಿಯನ್ನು ಕೇಳುವ ಮೂಲಕ ಕೈಗೊಳ್ಳಲಾಗುತ್ತದೆ. ಜಿಲ್ಲೆಯಲ್ಲಿನ ಜಿಲ್ಲಾ ಹಾಗೂ ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿನ ಸಮೀಕ್ಷೆಗೆ ಒಂದು ಕೊಠಡಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತರು ಆಯಾ ಆಸ್ಪತ್ರೆಗೆ ತೆರಳಿ, ಸಮೀಕ್ಷೆ ಹಾಗೂ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ‌
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆ, ಸಹಾಯವಾಣಿ ಸಂಖ್ಯೆ: 1800 5992025 ಅನ್ನು ಸಂಪರ್ಕಿಸಬಹುದು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net