ದಶ ವೈಭವದಲ್ಲಿ ಮಂಗಳೂರು ದಸರಾ ಆಚರಣೆಗೆ ಸಿದ್ಧತೆ

ಮಂಗಳೂರು ದಸರಾ ಮಹೋತ್ಸವ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಪದ್ಮರಾಜ್ ಆರ್. , ಹರಿಕೃಷ್ಣ ಬಂಟ್ವಾಳ್ ,ಜೈರಾಜ್ ಎಚ್. ಸೋಮ್‌ಸುಂದರ್, ಟ್ರಸ್ಟಿಗಳಾದ ಸಂತೋಷ್ ಜೆ. ಪೂಜಾರಿ, ಕೃತಿನ್ ಡಿ. ಅಮೀನ್ ಉಪಸ್ಥಿತರಿದ್ದರು.
ಮಂಗಳೂರು ದಸರಾ ಮಹೋತ್ಸವ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಪದ್ಮರಾಜ್ ಆರ್. , ಹರಿಕೃಷ್ಣ ಬಂಟ್ವಾಳ್ ,ಜೈರಾಜ್ ಎಚ್. ಸೋಮ್‌ಸುಂದರ್, ಟ್ರಸ್ಟಿಗಳಾದ ಸಂತೋಷ್ ಜೆ. ಪೂಜಾರಿ, ಕೃತಿನ್ ಡಿ. ಅಮೀನ್ ಉಪಸ್ಥಿತರಿದ್ದರು.
Published on
ಮಂಗಳೂರು: ಮಂಗಳೂರು ದಸರಾವನ್ನು ದಶ ವೈಭವದ ಕಾರ್ಯಕ್ರಮಗಳೊಂದಿಗೆ ವಿಭಿನ್ನವಾಗಿ ಆಚರಿಸಲು ಆಡಳಿತ ಮಂಡಳಿ ಹಾಗೂ ಅಭಿವೃದ್ಧಿ ಸಮಿತಿ ನಿರ್ಧರಿಸಿದೆ. ಈ ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಲು ಎಲ್ಲರ ಸಹಕಾರವೂ ಅಗತ್ಯವಾಗಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ಹೇಳಿದರು.
 ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ಮಂಗಳೂರು ದಸರಾ ಮಹೋತ್ಸವ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಹಾಗೂ ಮಂಗಳೂರು ದಸರಾ ಮಹೋತ್ಸವ ರೂವಾರಿಗಳಾದ ಬಿ. ಜನಾರ್ದನ ಪೂಜಾರಿ ಅವರ ಆಶಯದಂತೆ ಈ ಬಾರಿಯ ಮಂಗಳೂರು ದಸರಾ ಮಹೋತ್ಸವವನ್ನು ವೈಭವಯುತವಾಗಿ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕಿನ್ನಿಪಿಲಿ ಪಂಥ, ಮುದ್ದು ಶಾರದೆ, ಮಕ್ಕಳ ದಸರಾ, ಕಾಲೇಜು ಮಟ್ಟದ ಜನಪದ ಸ್ಪರ್ಧೆ, ಕವಿಗೋಷ್ಠಿ, ಮ್ಯಾರಥಾನ್, ರುದ್ರತಾಂಡವ ನೃತ್ಯ, ಮಹಿಳಾ ದಸರಾ ಸೇರಿದಂತೆ 10ವಿಭಿನ್ನ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ದಸರಾ ಸಂದರ್ಭ ಪ್ರತಿನಿತ್ಯ ಅಕ್ಷರಾಭ್ಯಾಸ, ಚಂಡಿಕಾಹೋಮ ನಡೆಯಲಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಅ.16ರಂದು ಕೃಷ್ಣವೇಷ ಸ್ಪರ್ಧೆ, ಆ.28ರಂದು ನಾರಾಯಣ ಗುರುಪೂಜೆ ಮತ್ತು ವರಮಹಾಲಕ್ಷ್ಮೀ ಪೂಜೆ ನಡೆಯಲಿದೆ. ಅಸಾಮಾನ್ಯ ಸೀ ಗೌರವಾರ್ಪಣೆ, ವಿವಿಧ ಕ್ಷೇತ್ರದ ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ. ಅದೇ ರೀತಿ ದಸರಾ ಮಹೋತ್ಸವದಲ್ಲಿ ಒಂದೊಂದು ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಲು ಈಗಾಗಲೇ ಸಂಸ್ಥೆಗಳು ಮುಂದೆ ಬಂದಿದ್ದು, ಡೈಮಂಡ್, ಗೋಲ್ಡನ್, ಸಿಲ್ವರ್, ಬ್ರಾಂಜ್ ಕಾರ್ಡ್ ಆಧಾರದಲ್ಲಿ ಅವರಿಗೆ ಅವಕಾಶ ನೀಡಲಾಗುವುದು. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಕ್ಷೇತ್ರದ ಸಮೀಪದಲ್ಲೇ 5.5 ಸೆಂಟ್ಸ್ ಹೆಚ್ಚುವರಿ ಜಾಗ ಖರೀದಿಸಲಾಗಿದೆ. ಕ್ಷೇತ್ರದ ಅನ್ನ ಸಭಾಗೃಹದ ಹವಾನಿಯಂತ್ರಣ ವ್ಯವಸ್ಥೆಯನ್ನು ಸಂಪೂರ್ಣ ಆಧುನೀಕರಣಗೊಳಿಸಲಾಗುತ್ತಿದೆ, ಪಾಕಶಾಲೆಯನ್ನು ನವಿಕರಣಗೊಳಿಸಲು ರೂಪುರೇಷೆ ರಚಿಸಲಾಗಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ಕ್ಷೇತ್ರದ ಅಭಿವೃದ್ಧಿ ಸಮಿತಿ ಸದಸ್ಯ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಮಂಗಳೂರು ದಸರಾ ಉಳಿದೆಡೆ ಇರುವಂತೆ ಕೇವಲ ಸಾಂಸ್ಕೃತಿಕ ದಸರಾವಲ್ಲ, ಧಾರ್ಮಿಕ ಉತ್ಸವವಾಗಿದೆ. ವಿಶ್ವದಾದ್ಯಂತ ಕ್ಷೇತ್ರಕ್ಕೆ ಭಕ್ತಾದಿಗಳ ದಂಡು ಬರುತ್ತಿದ್ದು, ಮಂಗಳೂರು ದಸರಾ ಮಹೋತ್ಸವವನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸೋಣ. ಮಂಗಳೂರು ದಸರಾ ಮಹೋತ್ಸವಕ್ಕೆ ರಾಜ್ಯ ಸರಕಾರದ ಸಹಕಾರವೂ ಅಗತ್ಯವಿದೆ ಎಂದರು.
ಈ ಸಂದರ್ಭ ಕ್ಷೇತ್ರದ ಅಧ್ಯಕ್ಷರಾದ ಜೈರಾಜ್ ಎಚ್. ಸೋಮ್‌ಸುಂದರ್, ಟ್ರಸ್ಟಿಗಳಾದ ಸಂತೋಷ್ ಜೆ. ಪೂಜಾರಿ, ಕೃತಿನ್ ಡಿ. ಅಮೀನ್, ಕಿಶೋರ್ ಕುಮಾರ್ ದಂಡೆಕೇರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ದೇವೇಂದ್ರ ಪೂಜಾರಿ, ಉಪಾಧ್ಯಕ್ಷರಾದ ಡಾ.ಬಿ.ಜಿ. ಸುವರ್ಣ, ಸದಸ್ಯರಾದ ಹರೀಶ್ ಕುಮಾರ್, ಸೂರ್ಯಕಾಂತ್ ಜೆ. ಸುವರ್ಣ, ವಾಸುದೇವ ಕೋಟ್ಯಾನ್, ವಸಂತ ಕಾರಂದೂರು, ಲತೀಶ್ ಕೋಟ್ಯಾನ್, ಗೌರವಿ ರಾಜಶೇಖರ್, ಶೈಲೇಂದ್ರ ವೈ. ಸುವರ್ಣ, ರಾಧಾಕೃಷ್ಣ, ಲೀಲಾಕ್ಷ ಕರ್ಕೇರಾ ಉಪಸ್ಥಿತರಿದ್ದರು.
ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net