ಹುಬ್ಬಳ್ಳಿ ಹೊರವಲಯದಲ್ಲಿ ಪೂರ್ಣ ರಿಂಗ್​ರೋಡ್​ಗೆ ಸಿದ್ಧತೆ

Ring Road
Published on

ಆನಂದ ಅಂಗಡಿ ಹುಬ್ಬಳ್ಳಿ

ಹುಬ್ಬಳ್ಳಿ ಹೊರವಲಯದಲ್ಲಿರುವ ಈಗಿನ ಅರ್ಧ ವರ್ತಳ ರಸ್ತೆ (ಹಾಫ್ ರಿಂಗ್​ರೋಡ್)ಯನ್ನು ಪೂರ್ಣ ವರ್ತಳ ರಸ್ತೆಯನ್ನಾಗಿ ನಿರ್ವಿುಸಲು ಸಿದ್ಧತೆ ಆರಂಭಗೊಂಡಿವೆ.

ಸದ್ಯ ಹುಬ್ಬಳ್ಳಿ ಹೊರವಲಯದ ಕುಸುಗಲ್ಲ, ಗಬ್ಬೂರ ಕ್ರಾಸ್ ಹಾಗೂ ಅಂಚಟಗೇರಿ ಮಾರ್ಗವಾಗಿ ಕಾರವಾರ - ಬೆಂಗಳೂರು - ಗದಗ- ವಿಜಯಪುರ ರಸ್ತೆ ಸಂರ್ಪಸುವ ಅರ್ಧ ವರ್ತಳ ರಸ್ತೆ ನಿರ್ವಿುಸಲಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್​ಎಚ್​ಎಐ) ಹಾಗೂ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ಘಟಕಗಳು ಪ್ರತ್ಯೇಕವಾಗಿ ಈ 10.8 ಕಿಮೀ ಉದ್ದದ ರಸ್ತೆಯನ್ನು 278.32 ರೂ. ವೆಚ್ಚದಲ್ಲಿ ನಿರ್ವಿುಸಿವೆ.

ಇದೀಗ ಈ ರಸ್ತೆಯನ್ನು ಪೂರ್ಣ ವರ್ತಳ ರಸ್ತೆಯನ್ನಾಗಿ ನಿರ್ವಿುಸುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ಘಟಕ ಮೂರು ಪ್ರತ್ಯೇಕ ಮಾರ್ಗಗಳ (ಅಲೈನ್ಮೆಂಟ್) ನೀಲಿ ನಕಾಶೆ ಸಿದ್ಧಪಡಿಸಿದೆ. ಅಷ್ಟೇ ಅಲ್ಲ, ಕಳೆದ ಡಿಸೆಂಬರ್​ನಲ್ಲಿ ಮೂರೂ ಪ್ರತ್ಯೇಕ ಅಲೈನ್ಮೆಂಟ್​ಗಳನ್ನು ಬೆಂಗಳೂರಿನಲ್ಲಿರುವ ಭೂಸಾರಿಗೆ ಸಚಿವಾಲಯದ ಪ್ರಾದೇಶಿಕ ಕಚೇರಿಗೂ ಕಳುಹಿಸಿದ್ದು, ಅಲ್ಲಿಂದ ಅಂತಿಮ ಅನುಮೋದನೆಗಾಗಿ ದೆಹಲಿಯ ಭೂಸಾರಿಗೆ ಸಚಿವಾಲಯಕ್ಕೆ ಕಳುಹಿಸಬೇಕಿದೆ. ಮೂರು ಅಲೈನ್ಮೆಂಟ್​ಗಳಲ್ಲಿ ಅಂತಿಮಗೊಳ್ಳುವ ಮಾರ್ಗದಲ್ಲಿ ಇನ್ನುಳಿದ ಅರ್ಧ ವರ್ತಳ ರಸ್ತೆ ನಿರ್ವಣಗೊಳ್ಳಲಿದೆ.

ಲೋಕೋಪಯೋಗಿ ಇಲಾಖೆ ಸಚಿವಾಲಯ ಅಲೈನ್ಮೆಂಟ್ ಅಂತಿಮಗೊಳಿಸಿದ ನಂತರ ವಿಸõತ ಯೋಜನಾ ವರದಿ ಸಿದ್ಧಗೊಳ್ಳುತ್ತದೆ. ನಂತರವಷ್ಟೇ, ಬಾಕಿ ಅರ್ಧ ವರ್ತಳ ರಸ್ತೆಗೆ ಬೇಕಾದ ರಸ್ತೆಯ ಸರ್ವೆ, ಭೂಮಿ ವಶಪಡಿಸಿಕೊಳ್ಳುವ ಕಾರ್ಯಕ್ಕೆ ಚಾಲನೆ ಸಿಗಲಿದೆ. ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ಘಟಕದ ಮೂಲಗಳ ಪ್ರಕಾರ, ಈ ವರ್ಷದಲ್ಲಿ ವಿಸõತ ಯೋಜನಾ ವರದಿ ಸಿದ್ಧಗೊಂಡು, ಭೂಮಿ ವಶಪಡಿಸಿಕೊಳ್ಳುವ ಕಾರ್ಯ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ.

ಬಾಕಿ ಅರ್ಧ ವರ್ತಳ ರಸ್ತೆ ಅಂದಾಜು 30 ಕಿಮೀ ಉದ್ದವಿರಲಿದೆ. ಈಗಿನ ವಿಜಯಪುರ ರಸ್ತೆಯೊಂದಿಗೆ ಧಾರವಾಡ-ಬೆಳಗಾವಿ ರಸ್ತೆ ಸಂಪರ್ಕಗೊಳ್ಳಲಿದೆ. ಅಂದರೆ, ಕುಸುಗಲ್ಲ ಗ್ರಾಮದಿಂದ ನರೇಂದ್ರ ಕ್ರಾಸ್​ವರೆಗಿನ ರಸ್ತೆಯನ್ನು ಬಾಕಿ ಅರ್ಧ ವರ್ತಳ ರಸ್ತೆ ಸಂರ್ಪಸಲಿದೆ.

ಧಾರವಾಡ, ಬೆಳಗಾವಿ, ಸವದತ್ತಿ ಹಾಗೂ ಗೋವಾ ಕಡೆಯಿಂದ ಬಂದು, ಕಾರವಾರ, ಬೆಂಗಳೂರು, ಗದಗ, ವಿಜಯಪುರದತ್ತ ಸಂಚರಿಸುವ ಸರಕು ಹಾಗೂ ಪ್ರಯಾಣಿಕರ ವಾಹನಗಳನ್ನು ಗಮನದಲ್ಲಿ ಇಟ್ಟುಕೊಂಡು ಇನ್ನುಳಿದ ಅರ್ಧ ವರ್ತಳ ರಸ್ತೆಯನ್ನು ನಿರ್ವಿುಸುವ ಯೋಜನೆ ಇದಾಗಿದೆ.

ಉಳಿದರ್ಧ ವರ್ತಳ ರಸ್ತೆ ನಿರ್ವಣಗೊಂಡರೆ ಹುಬ್ಬಳ್ಳಿ-ಧಾರವಾಡ ಹೊರಗಡೆ ಸಂಪೂರ್ಣ ರಿಂಗ್ ರೋಡ್ ನಿರ್ವಣಗೊಂಡಂತಾಗುತ್ತದೆ. ಇದರಿಂದ, ನಗರ ಪ್ರದೇಶದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಜತೆಗೆ, ಹೊರಗಿನಿಂದ ಸಂಚರಿಸುವವರಿಗೆ ಸಾಕಷ್ಟು ಸಮಯ ಉಳಿತಾಯದ ಜತೆಗೆ ಇಂಧನ ಉಳಿತಾಯವೂ ಆಗಲಿದೆ.

ಸುಳ್ಳ, ಶಿವಳ್ಳಿ, ಮರೆವಾಡ ಮೂಲಕ ಕೃಷಿ ವಿಶ್ವವಿದ್ಯಾಲಯದ ಹಿಂಭಾಗದಿಂದ ನರೇಂದ್ರ ಕ್ರಾಸ್​ವರೆಗೆ ಇನ್ನುಳಿದ ಅರ್ಧವರ್ತಳ ರಸ್ತೆ ನಿರ್ವಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಇನ್ನೊಂದು ಸೇರಿ ಒಟ್ಟು ಮೂರು ಪ್ರತ್ಯೇಕ ಮಾರ್ಗಗಳ ನೀಲಿನಕಾಶೆಯನ್ನು ಸಿದ್ಧಪಡಿಸಿರುವುದರಿಂದ ಖಚಿತವಾಗಿ ಇದೇ ಮಾರ್ಗವೆಂದು ಹೇಳಲು ಬರುವುದಿಲ್ಲ.

ಹುಬ್ಬಳ್ಳಿ-ಧಾರವಾಡ ಹೊರವಲಯದ ರಿಂಗ್​ರೋಡ್​ನ ಬಾಕಿ ಉಳಿದ ಕಾಮಗಾರಿಗೆ ಕೇಂದ್ರ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ. ಭೂಮಿ ವಶಪಡಿಸಿಕೊಳ್ಳುವುದು ಸೇರಿದಂತೆ ಇನ್ನುಳಿದ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ವೇಗ ನೀಡಬೇಕು. ಈ ಕಾಮಗಾರಿಗೆ ಬೇಕಾದ ಎಲ್ಲ ಸಹಕಾರವನ್ನು ಕೇಂದ್ರ ಸರ್ಕಾರ ನೀಡಲಿದೆ. ಪ್ರಲ್ಹಾದ ಜೋಶಿ, ಕೇಂದ್ರ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net