ಮುಂಗಾರು ಹಂಗಾಮಿಗೆ ಭರದ ಸಿದ್ಧತೆ

Preparations in full swing for the monsoon season
ರಬಕವಿ-ಯರಗಟ್ಟಿ ರಸ್ತೆಯ ಪಕ್ಕದ ಜಮೀನೊಂದರಲ್ಲಿ ಟ್ರಾೃಕ್ಟರ್ ಮೂಲಕ ಭೂಮಿ ಹದಗೊಳಿಸುತ್ತಿರುವುದು.
Published on

ರಬಕವಿ-ಬನಹಟ್ಟಿ : ಮುಂಗಾರು ಪೂರ್ವ ಮಳೆ ಅಬ್ಬರ ಜೋರಾಗಿದ್ದು, ರೈತರು ಮುಂಗಾರು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ.

ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿತ್ತು. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ ಇಳೆಗೆ ತಂಪೆರೆದಿದೆ. ಮುಂಬರುವ ಮಳೆ ನಂಬಿ ತಾಲೂಕಿನಾದ್ಯಂತ ರೈತರು ಮುಂಗಾರು ಬಿತ್ತನೆಗೆ ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಭೂಮಿ ಹದಗೊಳಿಸುವ ಜತೆಗೆ ಕೃಷಿ ಪರಿಕರಗಳ ದುರಸ್ತಿ ಹಾಗೂ ಭೂಮಿ ಸ್ವಚ್ಛತೆಯಲ್ಲಿ ನಿರತರಾಗಿದ್ದಾರೆ. ಸೋಯಾಬಿನ್, ಉದ್ದು, ಹೆಸರು, ಹುರಳಿ, ಕಬ್ಬು ಬಿತ್ತನೆಗೆ ತಯಾರಿ ನಡೆಸುತ್ತಿದ್ದಾರೆ.

ಬಿತ್ತನೆ ಗುರಿ: ತಾಲೂಕಿನಲ್ಲಿ ಈ ಬಾರಿ ಮುಂಗಾರು ಹಂಗಾಮಿಗೆ ಗೋವಿನ ಜೋಳ 8,900 ಹೆಕ್ಟೇರ್ ಪ್ರದೇಶ, ತೊಗರಿ 1ಸಾವಿರ ಹೆಕ್ಟೇರ್ ಪ್ರದೇಶ, ಹುರುಳಿ 10 ಹೆಕ್ಟೇರ್, ಹೆಸರು 800 ಹೆಕ್ಟೇರ್, ಉದ್ದು 300 ಹೆಕ್ಟೇರ್, ಅವರೆ 20 ಹೆಕ್ಟೇರ್, ಶೇಂಗಾ 100 ಹೆಕ್ಟೇರ್, ಸೂರ್ಯಕಾಂತಿ 500 ಹೆಕ್ಟೇರ್, ಸೋಯಾಬಿನ್ 200 ಹೆಕ್ಟೇರ್, ಕಬ್ಬು ಪಿ 3,750 ಹೆಕ್ಟೇರ್, ಕಬ್ಬು ಎಚ್ 12,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದೆರಡು ದಿನಗಳಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಕೃಷಿ ಚಟುವಟಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ತಾಲೂಕಿನ ಎಲ್ಲ ಬೀಜ ವಿತರಣಾ ಕೇಂದ್ರದಲ್ಲಿ ಬೀಜ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೇ 24 ಅಥವಾ 25 ರಂದು ಬೀಜ ವಿತರಣೆ ಆರಂಭಿಸಲಾಗುವುದು. -ಸಿದ್ದಪ್ಪ ಪಟ್ಟಿಹಾಳ, ಸಹಾಯಕ ಕೃಷಿ ನಿರ್ದೇಶಕ, ಜಮಖಂಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net