

ವಿಜಯವಾಣಿ ಸುದ್ದಿಜಾಲ ಧಾರವಾಡ
ಒಲವು, ಮೋಜು, ಮಸ್ತಿ ಎಲ್ಲದರ ಸಮ್ಮಿಲನವಾದ ಬಣ್ಣಗಳ ಹಬ್ಬ ಹೋಳಿಯ ಸಮಯದಲ್ಲಿ ಬಣ್ಣದ ಜತೆ ಬೆಸೆಯುವ ಮನಸ್ಸುಗಳು ಸಾವಿರಾರು. ನಂಬಿಕೆಗಳ ಜತೆ ಮಿಳಿತವಾಗಿರುವ ಹೋಳಿ ಭಾವದೋಕಳಿ ಆಡುತ್ತದೆ. ಈ ಹಿನ್ನೆಲೆಯಲ್ಲಿ ರಂಗು-ರಂಗಿನ ಹೋಳಿ ಹಬ್ಬಕ್ಕೆ ಧಾರವಾಡ ಜನ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಎಲ್ಲೆಡೆ ರತಿ- ಮನ್ಮಥರ ಪೂಜೆ ಹಾಗೂ ಕಾಮದಹನಕ್ಕೆ ತಯಾರಿ ನಡೆದಿದೆ.
ಧಾರವಾಡದ ಭೂಸಪೇಟೆ, ಹೊಸಯಲ್ಲಾಪುರ, ಬಸ್ತಿ ಓಣಿ, ಟಿಕಾರೆ ರಸ್ತೆ ಸೇರಿ ಇನ್ನೂ ಅನೇಕ ಬಡಾವಣೆಗಳಲ್ಲಿ ರತಿ-ಮನ್ಮಥರ ಮೂರ್ತಿ ಸ್ಥಾಪಿಸಲಾಗಿದೆ. ಶನಿವಾರ ಬೆಳಗಿನ ಜಾವ ಕಾಮದಹನ ನಡೆಯಲಿದೆ. ಇದಕ್ಕೆ ಪೂರಕವಾಗಿ ಮಾರುಕಟ್ಟೆಯಲ್ಲಿ ಈಗಾಗಲೇ ಖರೀದಿ ಭರಾಟೆ ಜೋರಾಗಿದೆ.
ಹೋಳಿ ನಿಮಿತ್ತ ಬಗೆಬಗೆಯ ಬಣ್ಣ, ಹಲಗೆ ಖರೀದಿ ಬಲು ಜೋರಾಗಿದೆ. ವಿವಿಧ ಕಡೆಗಳಲ್ಲಿ ಗಡಿಗೆ ಒಡೆಯುವ ಸ್ಪರ್ಧೆಗಳು ಸಹ ನಡೆಯಲಿದ್ದು, ಈಗಾಗಲೇ ಸಕಲ ಸಿದ್ಧತೆ ನಡೆದಿದೆ. ಹೋಳಿ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿರುವ ಪೊಲೀಸರು ಶಾಂತಿ ಸಭೆ ಸಹ ನಡೆಸಿದ್ದಾರೆ.