ದೀಪಾವಳಿ ಜಾತ್ರಾಗೆ ಭರದ ಸಿದ್ಧತೆ

16 HANUR 2 C
ಭಕ್ತರಿಗೆ ನೆರಳು ಒದಗಿಸುವ ಕಾರ್ಯ ಭರದಿಂದ ಸಾಗಿರುವುದು.
Published on

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಅ.18 ರಿಂದ 5 ದಿನ ನಡೆಯಲಿರುವ ದೀಪಾವಳಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಕಲ ಸಿದ್ಧತೆ ಕೈಗೊಂಡಿದೆ.

ಅ.18ರಂದು ಮಾದಪ್ಪನ ಸನ್ನಿಧಿಯಲ್ಲಿ ಮಾದಪ್ಪನಿಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ದೀಪಾವಳಿ ಜಾತ್ರೆ ಆರಂಭವಾಗಲಿದೆ. 19 ರಂದು ಸ್ವಾಮಿಗೆ ಎಣ್ಣೆಮಜ್ಜನ ಸೇವೆ, ವಿವಿಧ ಉತ್ಸಾವಾದಿಗಳು, 20ರಂದು ನರಕ ಚತುರ್ದಶಿ ಪ್ರಯುಕ್ತ ವಿಶೇಷ ಉತ್ಸಾವಾಧಿಗಳು ನಡೆಯಲಿದೆ. 21ರಂದು ಅಮಾವಾಸ್ಯೆ ಹಿನ್ನೆಲೆಯಲ್ಲಿ 101 ಹೆಣ್ಣು ಮಕ್ಕಳಿಂದ ಹಾಲರುವೆ ಉತ್ಸವ ನೆರವೇರಲಿದೆ. ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. 22ರಂದು ಬೆಳಗ್ಗೆ 9.15 ರಿಂದ 9.55 ಗಂಟೆಯೊಳಗೆ ಸಲ್ಲುವ ಶುಭ ಲಗ್ನದಲ್ಲಿ ಮಹಾ ರಥೋತ್ಸವ ನಡೆಯಲಿದೆ. ಬಳಿಕ ಶ್ರೀಗಳ ಸಾನ್ನಿಧ್ಯದಲ್ಲಿ ದೇಗುಲದ ಸುತ್ತ ಗುರು ಬ್ರಹ್ಮೋತ್ಸವ ಹಾಗೂ ದೇಗುಲದ ಒಳಾಂಗಣದಲ್ಲಿ ಅನ್ನ ಬ್ರಹ್ಮೋತ್ಸವ, ರಾತ್ರಿ 9ರ ಬಳಿಕ ತೆಪ್ಪೋತ್ಸವ ನಡೆಯಲಿದೆ.

ಜಾತ್ರಾ ಮಹೋತ್ಸವಕ್ಕೆ ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ. ಈಗಾಗಲೇ ಚಾಮರಾಜನಗರ ಸೇರಿದಂತೆ ಮೈಸೂರು, ಮಂಡ್ಯ ಇತರ ಕಡೆಗಳಿಂದ ಸಾವಿರಾರು ಭಕ್ತರು ಕಾಲ್ನಡಿಗೆ ಮೂಲಕ ತೆರಳುತ್ತಿದ್ದು, ತಾಳುಬೆಟ್ಟದಲ್ಲಿ ತಂಗುವ ಮೂಲಕ ಮ.ಬೆಟ್ಟಕ್ಕೆ ಆಗಮಿಸಿ ಬೀಡುಬಿಟ್ಟಿದ್ದಾರೆ. ಬೆಟ್ಟದಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವುದರ ಜತೆಗೆ ಭಕ್ತರಿಗೆ ಅಗತ್ಯ ಸೌಕರ್ಯ ಕೊರತೆಯಾಗದಂತೆ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಮುತುವರ್ಜಿ ವಹಿಸಿದ್ದಾರೆ. ಪ್ರಾಧಿಕಾರದ ಉಪಾಧ್ಯಕ್ಷ ಸಚಿವ ಕೆ.ವೆಂಕಟೇಶ್, ಶಾಸಕ ಎಂ.ಆರ್ ಮಂಜುನಾಥ್, ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಅವರು ನೀಡಿರುವ ಸಲಹೆ, ಸೂಚನೆ ಮೇರೆಗೆ ಜಾತ್ರೆ ಸುಸೂತ್ರವಾಗಿ ನೆರವೇರಲು ಈಗಾಗಲೇ ನೌಕರರ ಸಭೆ ನಡೆಸಿ ಜವಾಬ್ದಾರಿ ನೀಡಲಾಗಿದೆ.

ಪ್ರಾಧಿಕಾರದಿಂದ ಸಕಲ ಸಿದ್ಧತೆ: ಜಾತ್ರೆ ಹಿನ್ನೆಲೆಯಲ್ಲಿ ವಿವಿಧ ಘಟಕಗಳಿಂದ 350 ಹೆಚ್ಚುವರಿ ಕೆಎಸ್‌ಆರ್‌ಟಿಸಿ ಹಾಗೂ 50 ತಮಿಳುನಾಡು ಬಸ್ ವ್ಯವಸ್ಥೆ ಮಾಡಲಾಗಿದೆ. ಕಾಲ್ನಡಿಗೆಯಲ್ಲಿ ಆಗಮಿಸುವ ಭಕ್ತರಿಗೆ ತಾಳುಬೆಟ್ಟದಿಂದ ಮ.ಬೆಟ್ಟದವರೆಗೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮಾಸ್ಟರ್ ಪ್ಲಾೃನ್ ಆವರಣದಲ್ಲಿ 8 ಕಡೆಗಳಲ್ಲಿ ನಿರ್ಮಿಸಿರುವ ಘಟಕಗಳಿಗೆ ಶುದ್ಧ ಕುಡಿವ ನೀರು ಪೂರೈಕೆ ಮಾಡಲಾಗಿದೆ. ಭಕ್ತರು ಪರ ಮಾಡುವ ಸ್ಥಳಗಳಲ್ಲಿ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜಗೋಪುರದ ಮುಂಭಾಗದ 2 ಹಾಗೂ ಇತರ ಕಡೆಯಲ್ಲಿ ಭಕ್ತರು ತಂಗಲು, ದೇವರ ದರ್ಶನ ಪಡೆಯಲು ತೆರಳುವ ಸರತಿ ಸಾಲು ಹಾಗೂ ವಿಶೇಷ ದಾಸೋಹದಲ್ಲಿ ಶಾಮಿಯಾನ ಅಳವಡಿಸಲಾಗಿದೆ.

ನಿರಂತರ ದಾಸೋಹಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಾದಯಾತ್ರಿಗಳು, ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ದೇವರ ದರ್ಶನಕ್ಕೆಂದು ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಸುಸಜ್ಜಿತ ಶೌಚಗೃಹ ನಿರ್ಮಾಣ ಕೆಲಸ ಭರದಿಂದ ಸಾಗುತ್ತಿದೆ. ದೇಗುಲ ಸೇರಿದಂತೆ ವಿವಿಧೆಡೆ ವಿದ್ಯುತ್ ದೀಪಾಲಂಕಾರ, ದೇಗುಲಕ್ಕೆ ವಿವಿಧ ಬಗೆಯ ಹೂವಿನ ಅಲಂಕಾರ ಮಾಡುವ ಸಿದ್ಧತೆ ನಡೆದಿದೆ.

ಸ್ವಚ್ಛತೆಗೆ ಹೆಚ್ಚಿನ ಒತ್ತು: ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಸ್ವಚ್ಛತೆ ಕಾಪಾಡುವುದು ಪ್ರಾಧಿಕಾರಕ್ಕೆ ಸವಾಲಿನ ಕೆಲಸವಾಗಿದೆ. ಹಾಗಾಗಿ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಿತ್ಯ ಬ್ಲೀಚಿಂಗ್ ಪೌಡರ್, ಫಿನಾಯಿಲ್ ಸಿಂಪಡಿಸಲಾಗುತ್ತಿದೆ. ವೈದ್ಯ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪರ ಮಾಡುವ ಸ್ಥಳದಲ್ಲಿ ಆಹಾರ ಪರೀಕ್ಷೆ, ನೀರಿನ ಗುಣಮಟ್ಟ ಪರೀಕ್ಷೆ, ಪ್ರಥಮ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ತಾಳುಬೆಟ್ಟದಲ್ಲಿ ತಾತ್ಕಾಲಿಕ ಆಸ್ಪತ್ರೆ ಕಾರ್ಯ ನಿರ್ವಹಿಸಲಿದೆ.

ಹಸಿರು ದೀಪಾವಳಿ ಆಚರಿಸಿ: ಮ.ಬೆಟ್ಟವನ್ನು ಈಗಾಗಲೇ ಪ್ಲಾಸ್ಟಿಕ್‌ಮುಕ್ತ ಪ್ರದೇಶವಾಗಿ ಘೋಷಿಸಲಾಗಿದೆ. ಈ ಬಗ್ಗೆ ಭಕ್ತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಭಕ್ತರು ಪ್ಲಾಸ್ಟಿಕ್ ಬಳಕೆಯನ್ನು ಮಾತ್ರ ಬಿಟ್ಟಿಲ್ಲ. ಭಕ್ತರು ಈ ಬಗ್ಗೆ ಮನಗಂಡು ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡದಂತೆ ಶ್ರೀ ಕ್ಷೇತ್ರದಲ್ಲಿ ಹಸಿರು ದೀಪಾವಳಿ ಆಚರಿಸುವಂತೆ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು ಮನವಿ ಮಾಡಿದ್ದಾರೆ.

ಪೊಲೀಸ್ ಬಂದೋಬಸ್ತ್: ಭಕ್ತರ ಸುಗಮ ಸಂಚಾರದ ದೃಷ್ಟಿಯಿಂದ ವಾಹನಗಳ ಏಕಮುಖ ಸಂಚಾರ, ನಿಬರ್ಂಧಿತ ಸ್ಥಳಗಳಿಗೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ದ್ವಿಚಕ್ರ ಹಾಗೂ ತ್ರಿಚಕ್ರ ವಾಹನವನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಕೌದಳ್ಳಿಯಿಂದ ಮ.ಬೆಟ್ಟಕ್ಕೆ ಸಾರಿಗೆ ಬಸ್ ಸೌಕರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ತಾಳುಬೆಟ್ಟ ಹಾಗೂ ಪಾಲರ್‌ನಲ್ಲಿ ತಪಾಸಣಾ ಕೇಂದ್ರ ತೆರೆಯಲಾಗಿದ್ದು, ಅಕ್ರಮ ಮದ್ಯ, ಪ್ಲಾಸ್ಟಿಕ್ ವಸ್ತುಗಳ ಸಾಗಣೆ ಮೇಲೆ ನಿಗಾ ವಹಿಸಲಾಗಿದೆ. ಒಬ್ಬರು ಡಿವೈಎಸ್ಪಿ, 7 ಇನ್ಸ್‌ಪಕ್ಟರ್, 24 ಸಬ್ ಇನ್ಸ್‌ಪೆಕ್ಟರ್, 44 ಎಎಸೈ, 363 ಪುರುಷ ಪೊಲೀಸರು, 43 ಮಹಿಳಾ ಪೊಲೀಸರು, 40 ಗೃಹ ರಕ್ಷಕ ದಳ ಸಿಬ್ಬಂದಿ, 5 ಡಿಆರ್ ವಾಹನ ಹಾಗೂ 2 ಕೆಎಸ್‌ಆರ್‌ಪಿ ತುಕಡಿಯನ್ನು ಜಾತ್ರೆಗೆ ನಿಯೋಜಿಸಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಬಂದೋಬಸ್ತ್‌ನಲ್ಲಿ ಹೆಚ್ಚಳ ಕಂಡಿದೆ.

5 ಲಕ್ಷ ಲಾಡು ತಯಾರಿಕೆ: ಜಾತ್ರಾ ವೇಳೆ ಲಕ್ಷಾಂತರ ಲಾಡು ಮಾರಾಟವಾಗುತ್ತದೆ. ಕಳೆದ ದೀಪಾವಳಿಯಲ್ಲಿ 3.75 ಲಕ್ಷ ಲಾಡು ಮಾರಾಟವಾಗಿತ್ತು. ಹಾಗಾಗಿ 5 ಲಕ್ಷ ಲಾಡು ತಯಾರಿಸಲು ನಿರ್ಧರಿಸಲಾಗಿದೆ. ಈಗಾಗಲೇ 2 ಲಕ್ಷ ಲಾಡು ತಯಾರಿಸಿದ್ದು, ಈ ಕಾರ್ಯ ಮುಂದುವರಿದಿದೆ.

ದೀಪಾವಳಿ ಜಾತ್ರೆಯಲ್ಲಿ ಸುಮಾರು 7 ಲಕ್ಷ ಭಕ್ತರು ಭಾಗಿಯಾಗುವ ನಿರೀಕ್ಷೆ ಇದೆ. ಹಾಗಾಗಿ ನಿರಂತರ ದಾಸೋಹ, ಶೌಚಗೃಹ, ಕುಡಿಯುವ ನೀರು, ನೆರಳು, ಸುಸೂತ್ರ ದೇವರ ದರ್ಶನ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪೊಲೀಸ್ ಬಂದೋಬಸ್ತ್, ಸಾರಿಗೆ ವ್ಯವಸ್ಥೆ ಒದಗಿಸಲಾಗಿದ್ದು, ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜರುಗುವ ಹಾಲರಿವೆ ಉತ್ಸವ, ಮಹಾ ರಥೋತ್ಸವ ಹಾಗೂ ತೆಪ್ರೋತ್ಸವಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಯಶಸ್ವಿ ಜಾತ್ರೆಗೆ ಅಗತ್ಯ ಮುತುವರ್ಜಿ ವಹಿಸಲಾಗಿದೆ.

ಎ.ಈ.ರಘು, ಕಾರ್ಯದರ್ಶಿ, ಶ್ರೀಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಮ.ಬೆಟ್ಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net