

ವಿಕ್ರಮ ನಾಡಿಗೇರ ಧಾರವಾಡ
ಗಣೇಶ ಚತುರ್ಥಿ ಸಮಯದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳ ಮಾರಾಟ ನಿಷೇಧ ಎಂಬ ಆದೇಶಗಳು ಸಾಮಾನ್ಯ. ಆದರೆ ಆದೇಶ ಮಾತ್ರ ಕಾರ್ಯ ರೂಪಕ್ಕೆ ಬರುತ್ತಲೇ ಇಲ್ಲ. ಇದೇ ಕಾರಣಕ್ಕೆ ಪಿಒಪಿ ಮೂರ್ತಿಗಳ ಮಾರಾಟ ಪ್ರತಿ ವರ್ಷ ಸದ್ದಿಲ್ಲದೆ ನಡೆಯುತ್ತವೆ.
ಹಬ್ಬದ ಒಂದು ತಿಂಗಳ ಪೂರ್ವ ಜಿಲ್ಲಾಡಳಿತ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಪಿಒಪಿ ಮೂರ್ತಿ ಜಿಲ್ಲೆ ಪ್ರವೇಶಿಸದಂತೆ ಹಾಗೂ ಮಾರಾಟ ಮಾಡದಂತೆ ಕ್ರಮವಾಗಬೇಕು. ಮಾರಾಟ ಮಾಡುತ್ತಿದ್ದರೆ ಸೀಜ್ ಎಂದು ಸೂಚಿಸುತ್ತದೆ. ಆದರೆ ಈ ಬಾರಿ ಜಿಲ್ಲಾಧಿಕಾರಿಯೇ ಪಿಒಪಿ ಬ್ಯಾನ್ಗೆ ಮುತುವರ್ಜಿ ವಹಿಸಿರುವುದು ಕೊಂಚ ಸಮಾಧಾನದ ಸಂಗತಿ.
ಕೆಲ ದಿನಗಳ ಹಿಂದಷ್ಟೇ ಮುಂಜಾಗೃತಾ ಸಭೆ ನಡೆಸಿದ್ದು, ಪಿಒಪಿ ಮೂರ್ತಿಗಳ ಮಾರಾಟ ತಡೆಗೆ ಕಾರ್ಯಪಡೆ ರಚಿಸಿದ್ದಾರೆ. ಇದಲ್ಲದೆ ಹೊರ ರಾಜ್ಯ, ಜಿಲ್ಲೆಗಳಿಂದ ಆಗಮಿಸುವ
ಮೂರ್ತಿಗಳ ಪರಿಶೀಲನೆಗೆ ಚೆಕ್ಪೋಸ್ಟ್ ತೆರೆಯಲೂ ಸೂಚಿಸಿದ್ದಾರೆ. ಇದು ಹೊಸ ಪ್ರಯೋಗದ ಜತೆಗೆ ಬರೀ ಆದೇಶದಲ್ಲಿದ್ದ ಸೂಚನೆಯನ್ನು ಕಾರ್ಯ ರೂಪಕ್ಕೆ ತರುವ ಪ್ರಯತ್ನ ಇದಾಗಿದೆ. ಇದರಿಂದ ಕಲಾವಿದರು ಹಾಗೂ ಪರಿಸರ ಪ್ರೇಮಿಗಳಲ್ಲಿ ಮಂದಹಾಸ ಮೂಡಿದೆ.
ಬರೀ ಹೊರ ರಾಜ್ಯಗಳಿಂದ ಆಗಮಿಸುವ ಮೂರ್ತಿಗಳನ್ನು ಪರಿಶೀಲಿಸಿದರೆ ಸಾಲದು. ನಗರದಲ್ಲಿ ಸಿದ್ಧವಾಗುತ್ತಿರುವ ಪ್ರತಿ ಮೂರ್ತಿಗಳ ತಪಾಸಣೆ ನಡೆಯಬೇಕು. ಅಂದಾಗಲೇ ಪಿಒಪಿ ಸಂಪೂರ್ಣ ನಿಷೇಧ ಸಾಧ್ಯ. ಪಿಒಪಿ ಮೂತಿರ್ಗಳನ್ನು ಕೆರೆ, ಬಾವಿ ಸೇರಿ ಇತರ ಜಲ ಮೂಲಗಳಲ್ಲಿ ವಿಸರ್ಜಿಸಿದರೆ ನೀರು ಹಾಳಾಗುತ್ತದೆ ಅಲ್ಲದೇ, ಪರಿಸರವೂ ನಾಶವಾಗುತ್ತದೆ. ಹೀಗಾಗಿ ಮಣ್ಣಿನ ಮೂರ್ತಿಗಳಿಗೆ ಮಾತ್ರ ಅವಕಾಶ ನೀಡಬೇಕು ಎಂಬುದು ಪರಿಸರವಾದಿಗಳ ವಾದ.
ಇಷ್ಟೆಲ್ಲ ಪ್ರಯತ್ನಗಳ ನಡುವೆ ಈ ಬಾರಿ ಕೈಗೊಂಡ ಕ್ರಮಗಳಾದರೂ ಫಲಪ್ರದವಾಗಿ ಪಿಒಪಿ ಗಣೇಶ ಮೂರ್ತಿಗಳು ಸಂಪೂರ್ಣ ನಿಷೇಧ ಆಗುವುದೇ ಎಂಬುದನ್ನು ಕಾದು ನೋಡಬೇಕಿದೆ.
ಜನರ ಸಹಕಾರವೂ ಮುಖ್ಯ: ಪಿಒಪಿ ಮೂರ್ತಿಗಳ ನಿಷೇಧಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂಬುದು ಸರಿ. ಆದರೆ ಇದಕ್ಕೆ ಜನರ ಸಹಕಾರವೂ ಅತ್ಯಂತ ಮುಖ್ಯ. ನಾವು ಪಿಒಪಿ ಮೂರ್ತಿ ಬಿಟ್ಟು ಮಣ್ಣಿನ ಮೂರ್ತಿ ಮಾತ್ರ ಪ್ರತಿಷ್ಠಾಪಿಸುತ್ತೇವೆ ಎಂದು ನಿರ್ಧರಿಸಬೇಕು. ಅಂದಾಗ ಅಧಿಕಾರಿಗಳು ಕ್ರಮಕ್ಕೆ ಮುಂದಾಗದಿದ್ದರೂ ಪಿಒಪಿ ಮೂರ್ತಿಗಳು ತನ್ನಷ್ಟಕ್ಕೆ ತಾನೇ ನಿಷೇಧವಾಗುತ್ತದೆ. ಇಂತಹ ಮೂರ್ತಿಗಳ ಮಾರಾಟಗಾರರು, ತಯಾರಕರೂ ಮಣ್ಣಿನ ಮೂತಿರ್ಗಳ ತಯಾರಿಕೆಗೆ ಮುಂದಾಗುತ್ತಾರೆ. ಇಂತಹ ನಿರ್ಧಾರವನ್ನು ಜನರು ಈ ವರ್ಷವೇ ಮಾಡಿದರೆ, ಮುಂದಿನ ವರ್ಷಕ್ಕಾದರೂ ಪಿಒಪಿ ರ್ಪೂಣ ನಿಷೇಧ ಆಗಬಹುದು. ಈ ಬಾರಿ ಪಿಒಪಿ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟ ಮಾಡುವವರ ಮಾಹಿತಿ ನೀಡಲು ಜಿಲ್ಲಾಡಳಿತ ಸಹಾಯವಾಣಿ ಆರಂಭಿಸಿದೆ. ಮಾಹಿತಿ ನೀಡಿದವರ ಮಾಹಿತಿಯನ್ನೂ ಗೌಪ್ಯವಾಗಿ ಇಡಲಿದ್ದಾರೆ. ಹೀಗಾಗಿ ಜನರು ನಿರ್ಭಯವಾಗಿ ಮಾಹಿತಿ ನೀಡಿ ಪಿಒಪಿ ನಿಷೇಧಕ್ಕೆ ಕೈ ಜೋಡಿಸಲಿ.
ಪಿಒಪಿ ಮೂರ್ತಿಗಳನ್ನು ಸಂಪೂರ್ಣ ನಿಷೇಧಿಸಲು ಅವಳಿನಗರದಲ್ಲಿ ಪ್ರತಿ ವಾರ್ಡ್ ಹಾಗೂ ಜಿಲ್ಲೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಕಾರ್ಯಪಡೆ ರಚನೆ ಮಾಡಲಾಗುವುದು. ಜನರು ಮಾಹಿತಿ ನೀಡಲು ಸಹಾಯವಾಣಿ ಸಹ ಆರಂಭಿಸಲಾಗಿದೆ. ಇವುಗಳ ಹೊರತಾಗಿ ಚೆಕ್ಪೋಸ್ಟ್ ಸ್ಥಾಪಿಸಿ ಸಮಗ್ರ ಪರಿಶೀಲನೆಗೆ ಕ್ರಮವಹಿಸಲಾಗಿದೆ.ದಿವ್ಯ ಪ್ರಭು, ಜಿಲ್ಲಾಧಿಕಾರಿ