

ಹಳೇಬೀಡು: ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಜ. 4 ಮತ್ತು 5 ರಂದು ಆಯೋಜಿಸಿರುವ ಪುಷ್ಪಗಿರಿ ರಾಷ್ಟ್ರೀಯ ಉತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.
ಶನಿವಾರ ಮತ್ತು ಭಾನುವಾರ ಹಮ್ಮಿಕೊಂಡಿರುವ ಉತ್ಸವಕ್ಕೆ ವಾರದಿಂದಲೇ ತಯಾರಿ ನಡೆಯುತ್ತಿದ್ದು, ಬಹಳಷ್ಟು ಕೆಲಸಗಳು ಪೂರ್ಣಗೊಂಡಿವೆ. ಹಳೇಬೀಡಿನ ಎಲ್ಲೆಡೆ ಕೇಸರಿ ಬಾವುಟ, ಬಂಟಿಂಗ್ಸ್ ರಾರಾಜಿಸುತ್ತಿದ್ದು ಡಿಸೆಂಬರ್ ತಿಂಗಳ ಮೊದಲ ವಾರದಿಂದಲೇ ಪ್ರಚಾರ ಕೈಗೊಳ್ಳಲಾಗಿದೆ. ಉತ್ಸವದ ಯಶಸ್ಸಿಗಾಗಿ ವಿವಿಧ ಜಿಲ್ಲೆಗಳಲ್ಲಿ ಪುಷ್ಪಗಿರಿ ಪ್ರಚಾರ ರಥ ಸಂಚರಿಸಿ ಬಂದಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಮಠದ ಸ್ವಾಮೀಜಿಗಳು ಉತ್ಸವಕ್ಕೆ ಆಗಮಿಸಲಿದ್ದು, ಸಚಿವರು ಹಾಗೂ ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಯೋಜನೆ ಉದ್ಘಾಟನೆ: ಶನಿವಾರ ಪುಷ್ಪಗಿರಿ ಉತ್ಸವ ಆರಂಭವಾಗಲಿದ್ದು ಮಧ್ಯಾಹ್ನ 2 ಗಂಟೆಗೆ ನೂರಾರು ಜಾನಪದ ಕಲಾತಂಡಗಳ ಮೆರವಣಿಗೆ ನಡೆಯಲಿದೆ. ವಿವಿಧ ರಾಜ್ಯ ಹಾಗೂ ಜಿಲ್ಲೆಗಳಿಂದ ಕಲಾತಂಡಗಳು ಆಗಮಿಸಲಿದ್ದು ಜಾನಪದ ಲೋಕವೇ ಸೃಷ್ಟಿಯಾಗುವ ನಿರೀಕ್ಷೆಯಿದೆ.
4 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಳೇಬೀಡಿಗೆ ಬರಲಿದ್ದು ಮೆರವಣಿಗೆ ಮೂಲಕ ಪ್ರಧಾನ ವೇದಿಕೆಗೆ ಅವರನ್ನು ಕರೆತರಲಾಗುತ್ತದೆ. ಅಂದು ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಯೋಜನೆಯನ್ನು ಸಿಎಂ ಉದ್ಘಾಟಿಸಲಿದ್ದು ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಮುಖ್ಯ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ. ವೇದಿಕೆ ಕಾರ್ಯಕ್ರಮದ ಬಳಿಕ ಹಳೇಬೀಡಿನಿಂದ ಪುಷ್ಪಗಿರಿಯ ಬಯಲು ರಂಗಮಂದಿರದವರೆಗೆ ಕಲಾತಂಡಗಳು ಸಾಗಲಿದ್ದು ಸಂಜೆ 6 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಉದ್ಘಾಟನೆಗೆ ಪವರ್ ಸ್ಟಾರ್
ಸಿಎಂ ಯಡಿಯೂರಪ್ಪ ಜತೆಗೆ ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಕಲಾತಂಡಗಳೊಂದಿಗೆ ಹೆಜ್ಜೆ ಹಾಕಲಿದ್ದಾರೆ. ಗ್ರಾಮೀಣ ಸೊಗಡನ್ನು ಬಿಂಬಿಸುವ ಸಲುವಾಗಿ ಎತ್ತಿನಗಾಡಿಯಲ್ಲಿ ಮೆರವಣಿಗೆ ನಡೆಯಲಿದ್ದು ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ರೈತರು ಬರಲಿದ್ದಾರೆ. ಹಳೇಬೀಡಿನ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ವಿವಿಧ ಕಾರ್ಯಕ್ರಮಗಳು
ಜ. 4 ರಂದು ಕಲಾತಂಡಗಳ ಮೆರವಣಿಗೆ ಬಳಿಕ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಯೋಜನೆಯನ್ನು ಸಿಎಂ ಉದ್ಘಾಟಿಸಿದ್ದು, ನಟ ಪುನೀತ್ ರಾಜ್‌ಕುಮಾರ್ ಭಾಗವಹಿಸಲಿದ್ದಾರೆ. ಪುಷ್ಪಗಿರಿ ಬಯಲು ರಂಗಮಂದಿರದಲ್ಲಿ ಮುಂದುವರಿಯುವ ಕಾರ್ಯಕ್ರಮಕ್ಕೆ ಬಿಎಸ್‌ವೈ ಪುತ್ರ ವಿಜಯೇಂದ್ರ ಆಗಮಿಸಲಿದ್ದು, ಸರ್ಕಾರದ ವಿವಿಧ ಸಚಿವರು ಶಾಸಕರು ಪಾಲ್ಗೊಳ್ಳಲಿದ್ದಾರೆ. ಅಂದು ಸ್ವಾಮೀಜಿಯ ದಶಮಾನೋತ್ಸವ ಕಾರ್ಯಕ್ರಮ ಜರುಗಲಿದ್ದು ಭಕ್ತರು ಗುರುವಂದನೆ ಸಲ್ಲಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಪ್ರಧಾನ ಆಕರ್ಷಣೆಯಾಗಿ ಖ್ಯಾತ ಸುಗಮಸಂಗೀತ ಕಲಾವಿದ ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡದವರು ಭಾವಗೀತೆಗಳ ಮಾಧುರ್ಯವನ್ನು ಉಣಬಡಿಸಲಿದ್ದಾರೆ. ಸಮಾರೋಪ ಸಮಾರಂಭಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬರಲಿದ್ದು ಪ್ರಧಾನ ಭಾಷಣ ಮಾಡಲಿದ್ದಾರೆ. ದ್ವಾರಸಮುದ್ರ ಕೆರೆಗೆ ನೀರು ಹರಿದುಬಂದ ಸಂತಸಕ್ಕೆ ರೈತರೊಂದಿಗೆ ನೀರಾವರಿ ಸಂಭ್ರಮ ಎಂಬ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.
ಪುಷ್ಪಗಿರಿ ರಾಷ್ಟ್ರೀಯ ಉತ್ಸವವನ್ನು ಕೇವಲ ಸಾಂಸ್ಕೃತಿಕ ಅಥವಾ ಧಾರ್ಮಿಕ ಕಾರ್ಯಕ್ರವನ್ನಾಗಿ ನಾವು ರೂಪಿಸುತ್ತಿಲ್ಲ. ಜಿಲ್ಲೆಯಲ್ಲಿ ಪ್ರತಿವರ್ಷ ಹೊಯ್ಸಳ ಮಹೋತ್ಸವ ನಡೆಯಬೇಕಿತ್ತು. ಅದು ಕಾಲಕಾಲಕ್ಕೆ ಆಯೋಜನೆಯಾಗುತ್ತಿಲ್ಲ. ಹಾಗಾಗಿ ಸಾಮಾಜಿಕ ಕಳಕಳಿಯಿಂದ ಮತ್ತು ಜನರಿಂದಲೇ ಉತ್ಸವಗಳು ನಡೆಯಬೇಕು ಎಂದು ಆಲೋಚಿಸಿ ಈ ಮಹೋತ್ಸವಕ್ಕೆ ಚಾಲನೆ ನೀಡಿದ್ದೇವೆ. ಸಮಾಜದಲ್ಲಿ ಸಾಮರಸ್ಯ, ಸಹಬಾಳ್ವೆ ಹಾಗೂ ಧರ್ಮ ಜಾಗೃತಿ ಮೂಡಿಸಿವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ
ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ
ಪುಷ್ಪಗಿರಿ ಮಠ.
ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಆಯೋಜಿಸಿರುವ ಪುಷ್ಪಗಿರಿ ಉತ್ಸವಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದೇವೆ. ಸ್ವಾಮೀಜಿ ಅವರೇ ಸ್ವತಃ ಎಲ್ಲವನ್ನೂ ಅತ್ಯಂತ ಹೊಣೆಗಾರಿಕೆಯಿಂದ ನಿರ್ವಹಿಸುತ್ತಿದ್ದಾರೆ. ಒಂದು ತಿಂಗಳಿಂದ ಪ್ರಚಾರ ರಥವು ಉತ್ತರಕರ್ನಾಟಕದಿಂದ ಆರಂಭಿಸಿ ಹಳೇಬೀಡುವರೆಗೆ ಸಂಚರಿಸಿ ಬಂದಿದೆ.
ಕೆ.ಎಸ್.ಲಿಂಗೇಶ್
ಶಾಸಕ. ಬೇಲೂರು ಕ್ಷೇತ್ರ