

ವಿಜಯವಾಣಿ ಸುದ್ದಿಜಾಲ ಉಡುಪಿ
ಭಾವಿ ಪರ್ಯಾಯ ಶಿರೂರು ಮಠದ ಸ್ವಾಗತ ಸಮಿತಿಯ ಪದಾಧಿಕಾರಿಗಳು ಸ್ವಾಗತ ಸಮಿತಿಯ ಗೌರವ ಅಧ್ಯಕ್ಷರಾದ ರಾಜಶ್ರೀ ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಧರ್ಮಸ್ಥಳದಲ್ಲಿ ಭೇಟಿಯಾದರು. ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಈವರೆಗೆ ನಡೆದ ಸಿದ್ಧತೆ ಹಾಗೂ ಮುಂದಿನ ಕಾರ್ಯ ಯೋಜನೆಯ ಕುರಿತಂತೆ ಹೆಗ್ಗಡೆ ಅವರಲ್ಲಿ ಸಮಾಲೋಚನೆ ನಡೆಸಿದರು.
ಶಿರೂರು ಪರ್ಯಾಯ ಸ್ವಾಗತ ಸಮಿತಿಯ ಆಧ್ಯಕ್ಷ, ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಶಿರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವವನ್ನು ಭಕ್ತರ ಸಹಕಾರದೊಂದಿಗೆ ಉಡುಪಿಯ ನಾಡಹಬ್ಬದಂತೆ ಅತ್ಯಂತ ವೈಭವದಿಂದ ನಡೆಸಲು ಸಂಕಲ್ಪ ಮಾಡಿದ್ದೇವೆ. ಪರ್ಯಾಯ ಮಹೋತ್ಸವದ ಯಶಸ್ಸಿಗೆ ಅಗತ್ಯ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನ ನೀಡಬೇಕು ಎಂದು ವಿನಂತಿಸಿದರು.
ಬಳಿಕ ವೀರೇಂದ್ರ ಹೆಗ್ಗಡೆ ಮಾತನಾಡಿ, ಸಂಪೂರ್ಣ ಸಹಕಾರದ ಭರವಸೆ ನೀಡಿದರು. ನ.7ರಂದು ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ಉಡುಪಿಯ ಶಿರೂರು ಮಠದಲ್ಲಿ ಸ್ವಾಗತ ಸಮಿತಿಯ ಸಭೆ ನಡೆಸಲು ನಿರ್ಧರಿಸಲಾಯಿತು. ಬಳಿಕ ಡಿ.ಹರ್ಷೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಲಾಯಿತು.
ಶ್ರೀಮಠದ ದಿವಾನ ಉದಯಕುಮಾರ್ ಸರಳತ್ತಾಯ, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಕಾರ್ಯಾಧ್ಯಕ್ಷ ಕಟೀಲು ಗೋಪಾಲಕೃಷ್ಣ ಅಸ್ರಣ್ಣ, ಕೋಶಾಧಿಕಾರಿ, ಜಯಪ್ರಕಾಶ ಕೆದ್ಲಾಯ, ಸಂಚಾಲಕರಾದ ವಿಷ್ಣುಮೂರ್ತಿ ಆಚಾರ್ಯ, ಶ್ರೀಧರ ಭಟ್ ಉಚ್ಚಿಲ, ಕಾರ್ಯದರ್ಶಿ ಮೋಹನ್ ಭಟ್, ಪ್ರಚಾರ ಸಮಿತಿಯ ನಂದನ್ ಜೈನ ಉಪಸ್ಥಿತರಿದ್ದರು.