

ಅವಿನಾಶ್ ಜೈನಹಳ್ಳಿ ಮೈಸೂರು
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಮೀಪಿಸುತ್ತಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ. ನಗರದೆಲ್ಲೆಡೆ ದಸರಾ ಸಂಭ್ರಮ ಗರಿಗೆದರತೊಡಗಿದೆ. ವಿಶೇಷವಾಗಿ ಅರಮನೆಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ನಾಡಹಬ್ಬ ದಸರಾ ಉತ್ಸವಕ್ಕೆ ಅಂಬಾವಿಲಾಸ ಅರಮನೆ ಸಜ್ಜುಗೊಳ್ಳುತ್ತಿದ್ದು, ದೀಪಾಲಂಕಾರ ವ್ಯವಸ್ಥೆಯ ದುರಸ್ತಿ ಕೆಲಸ ಚುರುಕಿನಿಂದ ಸಾಗಿದೆ.
ಅರಮನೆಗೆ ಶಾಶ್ವತವಾಗಿ ದೀಪಾಲಂಕಾರ ಮಾಡಿದ್ದು, ಅಳವಡಿಸಿರುವ ವಿದ್ಯುತ್ ಬಲ್ಬ್ಗಳಲ್ಲಿ ಹಾಳಾಗಿದ್ದ 23 ಸಾವಿರ ಬಲ್ಬ್ಗಳನ್ನು ಬದಲಿಸುವ ಕಾರ್ಯ ಹಲವು ದಿನಗಳಿಂದ ನಡೆಯುತ್ತಿದೆ. ಅರಮನೆ ಸಿಬ್ಬಂದಿ ಒಳಗೊಂಡಂತೆ ಎಲೆಕ್ಟ್ರೀಷಿಯನ್‌ಗಳು ಎರಡು ವಾರಗಳಿಂದ ಕೆಲಸದಲ್ಲಿ ತೊಡಗಿದ್ದಾರೆ. ಇನ್ನೂ ಒಂದು ವಾರ ಕೆಲಸ ನಡೆಯಲಿದೆ.ಅರಮನೆಯ ಮುಖ್ಯಕಟ್ಟಡ, ಪ್ರವೇಶದ್ವಾರ, ವಿವಿಧ ಗೋಡೆಗಳ ಮೇಲೆ ಅಳವಡಿಸಿರುವುದೂ ಸೇರಿದಂತೆ ಒಟ್ಟು 1 ಲಕ್ಷ ಬಲ್ಬ್ಗಳ ಬೆಳಕು ಝಗಮಗಿಸಿ ಅರಮನೆಯ ಸೌಂದರ್ಯವನ್ನು ವೃದ್ಧಿಸುತ್ತದೆ. ಆದರೆ, ಪ್ರತಿದಿನ ಪಾರಿವಾಳಗಳು ಹಾರಾಡುವಾಗ, ಜೋರಾಗಿ ಗಾಳಿ ಬೀಸಿದಾಗ, ದೀಪಾಲಂಕಾರ ವೇಳೆ ಮಳೆ ಬಂದಾಗ ಕೆಲವು ಲೈಟ್‌ಗಳು ಸಿಡಿದುಹೋಗುತ್ತವೆ.
ಇದರಿಂದ ಪ್ರತಿ ವರ್ಷ ದಸರಾ ವೇಳೆ 15 ರಿಂದ 20 ಸಾವಿರ ಬಲ್ಬ್ಗಳು ಹಾನಿಗೀಡಾಗುವುದು ಮಾಮೂಲಿ. ಹೀಗಾಗಿ, ದೀಪಗಳ ಸಾಲುಗಳನ್ನು ಪರಿಶೀಲಿಸಿ ಕೆಟ್ಟಿರುವ ಬಲ್ಬ್ಗಳನ್ನು ಗುರುತಿಸಲಾಗಿತ್ತು. ಇದಕ್ಕಾಗಿ ದೆಹಲಿ, ಕೋಲ್ಕತ್ತದಲ್ಲಿ ವಿಶೇಷವಾಗಿ ತಯಾರಾಗುವ ಬಲ್ಬ್ಗಳನ್ನು ತರಿಸಲಾಗಿದೆ. ದೇಶದಲ್ಲಿ ಎಲ್ಲ ಕಡೆ ಎಲ್‌ಇಡಿ ದೀಪಗಳೇ ಹೆಚ್ಚಾಗಿವೆ. ಆದರೂ ಪಾರಂಪರಿಕ ಸೌಂದರ್ಯ ಕಾಯ್ದುಕೊಳ್ಳಲು ಮೈಸೂರು ಅರಮನೆಗೆ ಇಂದಿಗೂ ಸಾಮಾನ್ಯ ಬಲ್ಬ್ಗಳನ್ನೇ ಬಳಸಲಾಗುತ್ತಿದೆ. ಸ್ವರ್ಣ ಬಣ್ಣದಿಂದ ಬೆಳಗಲಿರುವ ಈ ಬಲ್ಬ್ಗಳು ಅರಮನೆ ಅಂದಕ್ಕೆ ಮತ್ತಷ್ಟು ಮೆರುಗು ನೀಡುತ್ತವೆ.
ಸುಣ್ಣ-ಬಣ್ಣ ಬಳಿಯುತ್ತಿರುವ ಕಾರ್ಮಿಕರು:
ದಸರಾದ ಪ್ರಮುಖ ಆಕರ್ಷಣೆ ಅರಮನೆ. ಮೈಸೂರಿಗೆ ಬರುವ ಪ್ರತಿ ಪ್ರವಾಸಿಗ ಅರಮನೆಯನ್ನು ನೋಡದೆ ಹಿಂದಿರುಗುವುದಿಲ್ಲ. ಹಾಗಾಗಿ, ಅರಮನೆಯನ್ನು ದಸರಾ ಸಮಯದಲ್ಲಿ ಮದುವಣಗಿತ್ತಿಯಂತೆ ಸಿಂಗರಿಸುವುದು ಪ್ರತಿ ವರ್ಷದ ವಾಡಿಕೆ. ಅಂತೆಯೆ, ಈ ಬಾರಿ ಅರಮನೆಯ ಆಕರ್ಷಣೆ ಹೆಚ್ಚಿಸಲು ಅರಮನೆ ಮಂಡಳಿ ಮುಂದಾಗಿದೆ.
ಈ ಸಂಬಂಧ ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದೆ. ಅಂಬಾವಿಲಾಸ ಅರಮನೆಯಲ್ಲಿ ಮಂಗಳವಾರ ವಿವಿಧ ಸಿದ್ಧತೆಗಳು ಭರದಿಂದ ನಡೆದಿವೆ. ಅರಮನೆಯ ಜಯಮಾರ್ತಾಂಡ ದ್ವಾರದ ಪಕ್ಕದಲ್ಲಿರುವ ತ್ರಿನೇಶ್ವರ ದೇಗುಲಕ್ಕೆ ಸುಣ್ಣ-ಬಣ್ಣ ಬಳಿಯುವಲ್ಲಿ ಕಾರ್ಮಿಕರು ನಿರತರಾಗಿದ್ದರು. ಅರಮನೆಗೆ ಭೇಟಿ ನೀಡಿದ್ದ ಪ್ರವಾಸಿಗರು, ಅರಮನೆ ವೀಕ್ಷಣೆಯ ಜತೆಗೆ ದಸರಾ ಸಿದ್ಧತಾ ಕೆಲಸಗಳನ್ನೂ ನೋಡಿ ಖುಷಿಪಟ್ಟರು. ತಮ್ಮ ಮೊಬೈಲ್‌ಗಳಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು.
50 ಕಾರ್ಮಿಕರಿಂದ ಸಿದ್ಧತೆ:
ಅರಮನೆ ಮಂಡಳಿ 50ಕ್ಕೂ ಹೆಚ್ಚಿನ ಕಾರ್ಮಿಕರಿಂದ ಅರಮನೆ ಆವರಣವನ್ನು ಸಿದ್ಧಗೊಳಿಸುತ್ತಿದೆ. ಆವರಣದ ಸ್ವಚ್ಛತೆ, ಸುಣ್ಣ-ಬಣ್ಣ ಬಳಿಯುವುದು, ಪಾರ್ಕ್ ನಿರ್ವಹಣೆ ಸೇರಿದಂತೆ ಎಲ್ಲ ರೀತಿಯ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ 30ಕ್ಕೂ ಹೆಚ್ಚು ಕಾರ್ಮಿಕರು ಅರಮನೆ ಆವರಣದ ಪಾರ್ಕ್‌ಗೆ ಹೊಸ ರೂಪ ನೀಡುವ ಕೆಲಸ ಮಾಡುತ್ತಿದ್ದಾರೆ. 12ಕ್ಕೂ ಹೆಚ್ಚು ಕಾರ್ಮಿಕರು ಅರಮನೆಯ ದೀಪಾಲಂಕಾರ ವ್ಯವಸ್ಥೆಯ ದುರಸ್ತಿ ಕೆಲಸ ಮಾಡುತ್ತಿದ್ದಾರೆ.
ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಅರಮನೆಯಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅರಮನೆಯ ದೀಪಾಲಂಕಾರ ವ್ಯವಸ್ಥೆಯ ದುರಸ್ತಿ ಕೆಲಸ ಚುರುಕಿನಿಂದ ಸಾಗಿದೆ. ಹಾಳಾಗಿದ್ದ ಬಲ್ಬ್ಗಳನ್ನು ಬದಲಿಸುವ ಕಾರ್ಯ ಹಲವು ದಿನಗಳಿಂದ ನಡೆಯುತ್ತಿದೆ. ಸ್ವಚ್ಛತೆ, ಸುಣ್ಣ-ಬಣ್ಣ ಬಳಿಯುವುದು ಸೇರಿದಂತೆ ಎಲ್ಲ ಕೆಲಸಗಳು ಭರದಿಂದ ಸಾಗಿವೆ.ಟಿ.ಎಸ್.ಸುಬ್ರಹ್ಮಣ್ಯ, ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕಮೈಸೂರು ಅರಮನೆಗೆ ಅನೇಕ ಸಲ ಭೇಟಿ ನೀಡಿದ್ದೇನೆ. ಆದರೆ ಈ ಬಾರಿಯ ಭೇಟಿ ವಿಶೇಷ ಅನುಭವ ನೀಡಿತು. ಅರಮನೆ ದೀಪಾಲಂಕಾರದ ಬಲ್ಬ್ ಬದಲಾಯಿಸುವುದನ್ನು ಹತ್ತಿರದಿಂದ ನೋಡಿದೆ. ಅರಮನೆಗೆ ಬಣ್ಣ ಬಳಿಯುವುದನ್ನು ನೋಡಿ ಖುಷಿ ಆಯಿತು.ರಮೇಶ್, ಪ್ರವಾಸಿಗ