

ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾ ಉತ್ಸವಾಚರಣೆಗೆ ಪೂರ್ವಭಾವಿಯಾಗಿ ಸಾಂಪ್ರದಾಯದಂತೆ ನಗರದ ಪೇಟೆ ಶ್ರೀರಾಮಮಂದಿರದಲ್ಲಿ ನಗರದ ದಸರಾ ಸಮಿತಿಯಿಂದ ವಿಶೇಷ ಪೂಜೆ ಸಲ್ಲಿಸುವ ಮೂಲಕ ಉತ್ಸವದ ಸಿದ್ಧತಾ ಕಾರ್ಯಗಳಿಗೆ ಚಾಲನೆ ದೊರಕಿತು.
ಇತಿಹಾಸ ಪ್ರಸಿದ್ಧ ಪೇಟೆ ಶ್ರೀ ರಾಮ ಮಂದಿರದಲ್ಲಿ ದಸರಾ ಆಚರಣೆಗೂ ಮುನ್ನ ಪೂಜೆ ಸಲ್ಲಿಸುವುದು ವಾಡಿಕೆ. ಅದರಂತೆ ಈ ಬಾರಿಯೂ ಪೇಟೆ ಶ್ರೀ ರಾಮಮಂದಿರ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಮೊದಲ ಹಂತದ ಕಾರ್ಯಕ್ರಮಕ್ಕೆ ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಮೈಸೂರಿನಲ್ಲಿ ದಸರಾದಲ್ಲಿ ಜಂಬೂ ಸವಾರಿ ಪ್ರಮುಖ ಆಕರ್ಷಣೆಯಾದರೆ ಮಡಿಕೇರಿಯಲ್ಲಿ ದಸರಾದಲ್ಲಿ ದಶ ಮಂಟಪಗಳ ಶೋಭಾಯಾತ್ರೆ ಪ್ರಮುಖ ಆಕರ್ಷಣೆಯಾಗಿದೆ. ಹೀಗಾಗಿ ಈ ಬಾರಿಯ ದಸರಾವನ್ನು ಬಹಳ ಅದ್ಧೂರಿಯಾಗಿ ಮಾಡಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮೊದಲ ಹಂತವಾಗಿ ಇಂದು ಪೂಜೆ ಸಲ್ಲಿಸಲಾಗಿದೆ. ಇನ್ನು ಮುಂದೆ ದಸರಾದ ವಿವಿಧ ಕಾರ್ಯಚಟುವಟಿಕೆಗಳು ಆರಂಭವಾಗಲಿದೆ ಎಂದು ತಿಳಿಸಿದರು.
ಕಳೆದ ಬಾರಿ ಅದ್ಧೂರಿಯಗಿ ದಸರಾ ನಡೆದಿದೆ. ಈಬಾರಿಯೂ ಅದ್ಧೂರಿ ದಸರಾ ನಡೆಯಲು ಎಲ್ಲರ ಸಹಕಾರ ಅಗತ್ಯ ಎಂದರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅರುಣ್ ಶೆಟ್ಟಿ, ರಾಜೇಶ್ ಯಲ್ಲಪ್ಪ, ಹರೀಶ್ ಆಚಾರ್ಯ, ಕಾನೆಹಿತ್ಲು ಮೊಣ್ಣಪ್ಪ, ಎಚ್.ಟಿ.ಅನಿಲ್ ಹಾಗೂ ಸೇರಿದಂತೆ ನಗರಸಭೆ ಸದಸ್ಯರು, ದಶಮಂಟಪ ಸಮಿತಿಯ ಪದಾಧಿಕಾರಿಗಳು, ದಸರಾ ಉತ್ಸವ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.