

ಹಾಸನ; ಶ್ರವಣಬೆಳಗೊಳಕ್ಕೆ ನ.9 ರಂದು ಉಪ ರಾಷ್ಟ್ರಪತಿ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಅಗತ್ಯ ಸಿದ್ಧತೆಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಲತಾಕುಮಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಶ್ರವಣಬೆಳಗೊಳದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಯಾವುದೇ ಲೋಪಕ್ಕೆ ಅವಕಾಶ ನೀಡದಂತೆ ಅಧಿಕಾರಿಗಳು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಲು ಸೂಚಿಸಿದರಲ್ಲದೆ, ಅಧಿಕಾರಿಗಳು ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾಡಿಕೊಂಡಿರುವ ತಯಾರಿ ಬಗ್ಗೆ ವರದಿ ನೀಡುವಂತೆ ತಿಳಿಸಿದರು.
ಮಾರ್ಗಸೂಚಿಯಂತೆ ವೇದಿಕೆ ಮೇಲೆ ಎಲ್ಲ ಕುರ್ಚಿಗಳು ಒಂದೇ ರೀತಿ ಇರಬೇಕು. ಪ್ರತಿಯೊಬ್ಬರು ತಮ್ಮ ತಮ್ಮ ಜವಾಬ್ದಾರಿಯನ್ನು ಎಚ್ಚರಿಕೆಯಿಂದ ನಿರ್ವಹಿಸಿ ಎಂದು ತಿಳಿಸಿದರಲ್ಲದೆ, ಎಸ್ಕಾರ್ಟ್ಸ್ ವಾಹನಗಳ ಸಂಖ್ಯೆ, ಯಾವ ಮಾದರಿ ವಾಹನ ಹಾಗೂ ವಾಹನ ಚಾಲಕರ ಮೊಬೈಲ್ ನಂಬರ್ ಪಡೆದುಕೊಳ್ಳಬೇಕು. ನಿರಂತರವಾಗಿ ವಿದ್ಯುತ್ ಸಂಪರ್ಕ ಇರುವಂತೆ ನೋಡಿಕೊಳ್ಳಬೇಕು. ಕಾರ್ಯಕ್ರಮದ ಸ್ಥಳದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸುವಂತೆ ಸೂಚನೆ ನೀಡಿದರು.
ರಸ್ತೆಗಳ ಅಕ್ಕಪಕ್ಕದಲ್ಲಿ ಸ್ವಚ್ಛತೆಗೆ ಕ್ರಮ, ಕಾರ್ಯಕ್ರಮದ ದಿನದಂದು ತಾತ್ಕಾಲಿಕವಾಗಿ ಮಟನ್, ಚಿಕನ್ ಅಂಗಡಿಗಳನ್ನು ಮುಚ್ಚಲು ಕ್ರಮವಹಿಸಿ ಎಂದರಲ್ಲದೆ, ಬೀದಿ ನಾಯಿಗಳ ಹಾವಳಿ ತಡೆಗೆ ಕೂಡ ಕ್ರಮವಹಿಸುವಂತೆ ತಿಳಿಸಿದರಲ್ಲದೆ, ಸೈನೇಜ್ ಬೋರ್ಡ್ ಹಾಕುವಂತೆ ಸೂಚಿಸಿದರು.
ಸುಸಜ್ಜಿತ ಆ್ಯಂಬುಲೆನ್ಸ್‌ನೊಂದಿಗೆ ನುರಿತ ಆರೋಗ್ಯ ಸಿಬ್ಬಂದಿಯನ್ನು ನೇಮಿಸಬೇಕು. ಸಾರ್ವಜನಿಕರಿಗೆ ಒಂದು ಆ್ಯಬುಲೆನ್ಸ್ ಪ್ರತ್ಯೇಕವಾಗಿರಬೇಕು. ಆಹಾರ ಸುರಕ್ಷತೆ ನಿಟ್ಟಿನಲ್ಲಿ ಪರಿಶೀಲಿಸಿ ನೀಡಲು ಕ್ರಮವಹಿಸುವಂತೆ ತಿಳಿಸಿದರು. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಹಸಿರು ಕೊಠಡಿಯಲ್ಲಿ ಗಣ್ಯರಿಗೆ ತಾತ್ಕಾಲಿಕ ಶೌಚಗೃಹ ವ್ಯವಸ್ಥೆಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹೆಲಿಪ್ಯಾಡ್ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಅಗ್ನಿಶಾಮಕ ದಳ ಪ್ರತ್ಯೇಕ ವಾಹನಗಳನ್ನು ಇರಿಸಲು ಕ್ರಮವಹಿಸಬೇಕು. ಸಣ್ಣ ಸಣ್ಣ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ನಿರ್ದೇಶನ ನೀಡಿದರು.
ಶ್ರವಣಬೆಳಗೊಳಕ್ಕೆ ಆಗಿಂದ್ದಾಗ್ಗೆ ಗಣ್ಯರು ಆಗಮಿಸುವುದರಿಂದ ಹೆಲಿಪ್ಯಾಡ್‌ಗೆ ಶಾಶ್ವತವಾಗಿ ಒಂದು ನಿಗದಿತ ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಮಂಜುನಾಥ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಾಬು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಿಲ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕರಾದ ಅಭಿಯಂತರ ರಾಜು, ಚನ್ನರಾಯಪಟ್ಟಣದ ಸಹಾಯಕ ಕಾರ್ಯಪಾಲಕ ಅಭಿಯಂತರ ರುಕ್ಮಿಣಿ, ಚನ್ನರಾಯಪಟ್ಟಣದ ತಹಸೀಲ್ದಾರ್ ಶಂಕರ್, ಅರಸೀಕೆರೆ ತಾಲೂಕು ತಹಸೀಲ್ದಾರ್ ಸಂತೋಷ್ ಇದ್ದರು.
ಸ್ಥಳ ಪರಿಶೀಲನೆ: ಸಭೆಗೂ ಮುನ್ನ ಜಿಲ್ಲಾಧಿಕಾರಿ ಲತಾಕುಮಾರಿ ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ಹೆಲಿಪ್ಯಾಡ್‌ಗೆ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು. ನಂತರ ಮಠಕ್ಕೆ ಆಗಮಿಸಿ ಸ್ವತ್ತಿಶ್ರೀ ಚಾರುಕೀರ್ತಿ ಪಂಡಿತಾ ಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಕಾರ್ಯಕ್ರಮ ಕುರಿತು ಚರ್ಚಿಸಿದರು.
ನಂತರ ಮಾತನಾಡಿದ ಸ್ವಾಮೀಜಿ, ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನಾ ಚರಣ ಪಾದುಕೆ ಸ್ಥಾಪನೆ ಹಾಗೂ ಬೆಟ್ಟಕ್ಕೆ ಪದನಾಮ ಅನಾವರಣ ಮತ್ತು ಶಾಂತಿ ಸಾಗರ ಮಹಾರಾಜರ ಜೀವನ ಚರಿತ್ರೆಯರ ಬೃಹತ್ ಶಿಲಾಶಾಸನ ಲೋಕಾರ್ಪಾಣೆ ಆಗಲಿದೆ. ಏ.24 ಕ್ಕೆ ಚಂದ್ರಗಿರಿ ಮಹೋತ್ಸವ ನಡೆಯಲಿದೆ. ಆಗ ರಾಷ್ಟ್ರಪತಿಗಳು ಆಗಮಿಸುತ್ತಾರೆ. ಆ ಸಂದರ್ಭದಲ್ಲಿಯೇ 2030ರಲ್ಲಿ ನಡೆಯುವ ಮಹಾ ಮಸ್ತಕಾಭಿಷೇಕದ ದಿನಾಂಕ ಘೋಷಣೆ ಮಾಡಲಾಗುವುದು. ಶ್ರವಣಬೆಳಗೊಳದಲ್ಲಿ ಶಾಶ್ವತವಾಗಿ ಒಂದು ಹೆಲಿಪ್ಯಾಡ್ ನಿರ್ಮಾಣ ಆಗಬೇಕು. ಇಲ್ಲಿಗೆ ತುಂಬಾ ಅಗತ್ಯವಿದೆ ಎಂದು ತಿಳಿಸಿದರು.
ಶಾಸಕ ಸಿ.ಎನ್. ಬಾಲಕೃಷ್ಣ, ಅಪರ ಜಿಲ್ಲಾಧಿಕಾರಿ ಮಂಜುನಾಥ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಾಬು, ಉಪ ವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.