ಗಣರಾಜ್ಯೋತ್ಸವ ಆಚರಣೆಗೆ ಸಿದ್ಧತೆ

3 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಗಣರಾಜ್ಯೋತ್ಸವವನ್ನು ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಪೊಲೀಸ್​, ಶಿಕ್ಷಣ ಹಾಗೂ ಇತರ ಇಲಾಖೆಗಳು ತಮಗೆ ವಹಿಸಿದ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಗಣರಾಜ್ಯೋತ್ಸವದಂದು ಬೆಳಗ್ಗೆ 7.30ಕ್ಕೆ ಶಾಲಾ-ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಿ 8.30ಕ್ಕೆ ಆರ್​.ಎನ್​. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕರು, ಸರ್ಕಾರಿ ನೌಕರರು ಸೇರಬೇಕು. 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸುವರು ಎಂದರು.

ಕ್ರೀಡಾಂಗಣ ಸಿದ್ಧತೆ ಸೇರಿ ವಿವಿಧ ಕಾರ್ಯಗಳನ್ನು ಇಲಾಖೆಗಳಿಗೆ ಹಂಚಲಾಗಿದ್ದು, ಎಲ್ಲರೂ ಅಚ್ಚುಕಟ್ಟಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದರು.

ಎಎಸ್​ಪಿ ನಾರಾಯಣ ಭರಮನಿ ಮಾತನಾಡಿದರು. ಜಿಪಂ ಉಪ ಕಾರ್ಯದರ್ಶಿ ಬಿ. ಎಸ್​. ಮುಗನೂರಮಠ, ಸಹಾಯಕ ಪೊಲೀಸ್​ ಆಯುಕ್ತ ವಿಜಯಕುಮಾರ್​ ಟಿ., ಪ್ರಶಾಂತ ಸಿದ್ದನಗೌಡರ, ಲೋಕೋಪಯೋಗಿ, ಮಹಾನಗರ ಪಾಲಿಕೆ, ಶಾಲಾ ಶಿಕ್ಷಣ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net