

ಕುಶಾಲನಗರ: ನಂಜರಾಯಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರ ಉಳಿಸಿಕೊಳ್ಳುವ ಸಂಬಂಧ ದೊಡ್ಡ ಮಟ್ಟದ ಪ್ರತಿಭಟನೆಗೆ ಸಿದ್ಧತೆ ನಡೆಸಿರುವುದಾಗಿ ನಂಜರಾಯಪಟ್ಟಣ ಗ್ರಾ.ಪಂ. ಅಧ್ಯಕ್ಷ ಸಿ.ಎಲ್.ವಿಶ್ವ ತಿಳಿಸಿದರು. ನಂಜರಾಯಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಜಾಗ ಅರಣ್ಯ ಇಲಾಖೆಗೆ ಸೇರಿದ್ದು, ಜಾಗ ಒತ್ತುವರಿ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆಗೆ ಅರಣ್ಯ ಇಲಾಖೆ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಸೋಮವಾರ ನಡೆಸಲಾದ ಆರೋಗ್ಯ ರಕ್ಷಾ ಸಮಿತಿಯ ಸಭೆಯಲ್ಲಿ ಮಾತನಾಡಿದರು.
ಅರಣ್ಯ ಇಲಾಖೆಯಿಂದ ನಿರಂತರವಾಗಿ ಆರೋಗ್ಯ ಇಲಾಖೆಗೆ ನೋಟಿಸ್ ನೀಡಲಾಗುತ್ತಿದೆ. ಗ್ರಾಮದ ಸರ್ವೇ ನಂಬರ್ 10/1 ರ ಪೈಸಾರಿ ಜಾಗದಲ್ಲಿ 1984ರಲ್ಲಿ ಸ್ಥಾಪನೆಯಾದ ಆಸ್ಪತ್ರೆ ಉಳಿಸಿಕೊಳ್ಳಲು ಹೋರಾಟದ ಅಗತ್ಯ ಇದೆ. ಜಾಗ ದಾಖಲಾತಿ ನೋಂದಣಿಯಲ್ಲಿ ಲೋಪದೋಷ ಉಂಟಾದ ಪರಿಣಾಮ ಅರಣ್ಯ ಇಲಾಖೆ ಇದು ತಮಗೆ ಸೇರಿದ ಜಾಗ ಎಂದು ವಾದಿಸುತ್ತಿದೆ. ಈ ಬಗ್ಗೆ ಸಂಸದರು, ಶಾಸಕರ ಗಮನಕ್ಕೆ ತಂದು ಅವರ ಮೂಲಕ ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಇತ್ಯರ್ಥಕ್ಕೆ ಗ್ರಾಮಸ್ಥರು ಒಗ್ಗೂಡಿ ಕಾರ್ಯ ನಿರ್ವಹಿಸಬೇಕಿದೆ ಎಂದರು.
ಈ ಸಂಬಂಧ ಗ್ರಾಮಸ್ಥರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರುವುದು, ಸೂಕ್ತ ದಾಖಲಾತಿಗಳ ಸಂಗ್ರಹ, ಕ್ಷೇತ್ರದ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಜನಸಂಪರ್ಕ ಸಭೆ ಹಮ್ಮಿಕೊಳ್ಳುವುದು ಸೇರಿದಂತೆ ಆಸ್ಪತ್ರೆ ಉಳಿಸಿಕೊಳ್ಳಲು ಹೋರಾಟ ರೂಪಿಸುವ ಬಗ್ಗೆ ಚರ್ಚೆ ನಡೆಯಿತು.
ಸಂಬಂಧಿಸಿದವರು ಸೂಕ್ತವಾಗಿ ಸ್ಪಂದಿಸದಿದ್ದರೆ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ಮಾಡಲಾಗುವುದು ಎಂದು ಇದೇ ವೇಳೆ ವಿಶ್ವ ತಿಳಿಸಿದರು.
ಗ್ರಾಪಂ ಉಪಾಧ್ಯಕ್ಷೆ ಕುಸುಮಾ, ಸದಸ್ಯ ಆರ್.ಕೆ. ಚಂದ್ರ, ರಕ್ಷಾ ಸಮಿತಿ ಸದಸ್ಯ ಕೆ.ವಿ. ಪ್ರೇಮಾನಂದ, ಗೌಡ ಸಮಾಜದ ಸೂರ್ಯ ಕುಮಾರ್, ಕೊಡವ ಸಮಾಜದ ಪೊನ್ನಪ್ಪ, ಎಸ್‌ಎನ್‌ಡಿಪಿಯ ನವೀನ್, ವೀರಶೈವ ಸಮಾಜದ ರತೀಶ್, ಪರಿಶಿಷ್ಟ ಜಾತಿ, ಪಂಗಡದ ಪ್ರಮುಖರಾದ ಶಾಂತಕುಮಾರ್, ಕಾಳಿಂಗ, ಮುಸ್ಲಿಂ ಕಮಿಟಿಯ ಅಬ್ಬಾಸ್, ಮುಸ್ತಾಫ, ವಿದ್ಯಾ ಸಂಘದ ಯತೀಶ್, ಗುಳಿಗ ಗಣಪತಿ ದೇವಾಲಯ ಸಮಿತಿಯ ಭುವನ್, ವೈದ್ಯಾಧಿಕಾರಿ ಡಾ.ಪ್ರತಾಪ್ ಸಾಗರ್ ಸೇರಿದಂತೆ ಸಂಘ- ಸಂಸ್ಥೆಗಳ ಪ್ರಮುಖರು, ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.