

ವಿಜಯವಾಣಿ ಸುದ್ದಿಜಾಲ ಉಡುಪಿ
ಪ್ರಕೃತಿ ಮತ್ತು ಮನುಷ್ಯನ ಬಾಂಧವ್ಯದ ಸಂಕೇತವಾಗಿ ಕರಾವಳಿ ಜಿಲ್ಲೆಗಳಲ್ಲಿ ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ನಾಗರಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಹಬ್ಬಗಳ ಸಾಲಿಗೆ ನಾಗರಪಂಚಮಿ ನಾಂದಿಯಾಗಿದ್ದು ಹಿಂದುಗಳು ಶ್ರದ್ಧಾ-ಭಕ್ತಿಯಿಂದ ಹಬ್ಬ ಆಚರಿಸಲು ಸಿದ್ಧರಾಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ನಾಗಬನಗಳಲ್ಲಿರುವ ಮೂಲ ನಾಗನಿಗೆ ತನು ತಂಬಿಲ ಅರ್ಪಿಸುವುದು ಈ ದಿನದ ವಿಶೇಷತೆ. ನಾಗರಕಲ್ಲುಗಳಿಗೆ ಸೀಂಯಾಳ, ಕ್ಷೀರ, ಹಿಂಗಾರ, ಅರಿಷಿನ ಸಮರ್ಪಿಸಿ ಬದುಕಿನಲ್ಲಿ ಎದುರಾಗುವ ಕಷ್ಟ, ಜಂಜಡಗಳನ್ನೆಲ್ಲ ನಿವಾರಿಸು ಎಂದು ಮನೆಯವರೆಲ್ಲ ಸೇರಿ ಪ್ರಾರ್ಥಿಸುವುದು ವಾಡಿಕೆ.
ಉಡುಪಿಯಲ್ಲಿರುವ ಸಾವಿರಾರು ನಾಗಬನಗಳಲ್ಲಿ ನಾಗನ ಆರಾಧನೆ ನಡೆಯಲಿದ್ದು, ಹೂವು-ಹಣ್ಣು, ಎಳನೀರು ಖರೀದಿಗೆ ಮಾರುಕಟ್ಟೆಗೆ ಬಂದ ಜನರಿಗೆ ದರ ಏರಿಕೆಯ ಬಿಸಿ ತಟ್ಟಿತು. ಎಲ್ಲ ಹೂವುಗಳ ದರವೂ ಎರಡುಪಟ್ಟು ಹೆಚ್ಚಾಗಿದ್ದು, ಹಣ್ಣುಗಳ ಬೆಲೆಯಲ್ಲೂ ಏರಿಕೆಯಾಗಿದೆ. ತೆಂಗಿನಕಾಯಿ ದರವೂ ಸಹ ಕಿಲೋಗೆ ಭರ್ತಿ 100 ರೂ. ಆಗಿದೆ. ಮಳೆಗಾಲವಾಗಿದ್ದರಿಂದ ಬೇಡಿಕೆಯಷ್ಟು ಬಾಲೆಹಣ್ಣು ಪೂರೈಕೆಯಾಗದ್ದರಿಂದ ಕಿಲೋಗೆ 80 ರೂ. ಇದ್ದ ದರ ಪಂಚಮಿ ಹಿನ್ನೆಲೆಯಲ್ಲಿ 100 ರೂ. ಆಗುವ ಸಾಧ್ಯತೆ ಇದೆ. ಹಬ್ಬ ಆಚರಿಸುವವರ ಜೇಬಿಗೆ ಕತ್ತರಿ ಬೀಳುವಂತಾಗಿದೆ.
ಉಡುಪಿ ಎಪಿಎಂಸಿಯಲ್ಲಿ ಹಣ್ಣುಗಳ ಹೋಲ್ಸೇಲ್ ದರದಲ್ಲೂ ಸಹ ಏರಿಕೆಯಾಗಿದೆ. ದಾಳಿಂಬೆ ಕಿಲೋಗೆ 60-150ರೂ., ಸೇಬು 160-210 ರೂ., ಮಾವಿನಹಣ್ಣು 30-110ರೂ., ಮೂಸಂಬಿ 30-50 ರೂ., ಪಪ್ಪಾಯ 17-20ರೂ, ಅನಾನಾಸ್ 35-50 ರೂ. ಬಾಳೆಹಣ್ಣು 30-60ರೂ. ದರವಿದ್ದು. ಮಾರುಕಟ್ಟೆಯಲ್ಲಿ ಈ ಎಲ್ಲ ಹಣ್ಣುಗಳ ದರ ಮತ್ತೆ ಕಿಲೋಗೆ 50-80ರೂ.ಗೆ ಹೆಚ್ಚಿನ ದರ ನಿಗದಿಯಾಗಿ ಮಾರಾಟವಾಗುತ್ತಿದೆ.
ಮಣಿಪಾಲದ ಟೈಗರ್ ಸರ್ಕಲ್ನಲ್ಲಿ ಹಾಸನದ ವ್ಯಾಪಾರಿಗಳು ಹೂವು ಮಾರಾಟ ಮಾಡುತ್ತಿದ್ದು, ಒಂದು ಮಾರು ಸೇವಂತಿಗೆ 200 ರೂ., ಗುಲಾಬಿ 250 ರೂ., ಡೇರೆ 200ರೂ. ಇದೆ. ಮೊಳಕ್ಕೆ 50 ರೂ. ದರವಿದೆ.
ಉಡುಪಿ ಜಿಲ್ಲೆಯ ಪ್ರಮುಖ ನಾಗಕ್ಷೇತ್ರಗಳಾದ ಶ್ರೀಕೃಷ್ಣ ಮಠದ ಸುಬ್ರಹ್ಮಣ್ಯ ಗುಡಿ, ಕುಡುಪು ಅನಂತಪದ್ಮನಾಭ ದೇವಸ್ಥಾನ, ಮಣಿಪಾಲದ ಪ್ರಸನ್ನ ಗಣಪತಿ ದೇವಸ್ಥಾನ, ನಾಲ್ಕು ಸ್ಕಂದಾಲಯಗಳಾದ ಮುಚ್ಚಲಕೋಡು, ಮಾಂಗೋಡು, ತಾಂಗೋಡು, ಅರಿತೋಡು ಸುಬ್ರಹ್ಮಣ್ಯ ದೇವಸ್ಥಾನ, ಕರಂಬಳ್ಳಿಯ ವೆಂಕಟರಮಣ ದೇವಸ್ಥಾನ, ಗುಂಡಿಬೈಲು ಸುಬ್ರಹ್ಮಣ್ಯ ದೇವಸ್ಥಾನ, ಕಿನ್ನಿಮೂಲ್ಕಿಯ ಕನ್ನರ್ಪಾಡಿ ದೇವಸ್ಥಾನದ ಬಳಿಯ ನಾಗಸನ್ನಿಧಿ, ಸಗ್ರಿ ವಾಸುಕಿ ಅನಂತಪದ್ಮನಾಭ ದೇವಸ್ಥಾನ, ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನ, ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನ, ಮಠದಬೆಟ್ಟುವಿನ ಸಪರಿವಾರ ಶ್ರೀ ನಾಗಬ್ರಹ್ಮಸ್ಥಾನ ಮೊದಲಾದ ದೇಗುಲಗಳಲ್ಲಿ ವಿಶೇಷ ತನು ಸಮರ್ಪಣೆ ನಡೆಯಲಿದೆ.
ಮಾರುಕಟ್ಟೆಯಲ್ಲಿ ಎಳನೀರು ಈ ಮೊದಲೇ ದರ ಏರಿಕೆಯಿದ್ದು, ನಾಗನಿಗೆ ಎಳನೀರು ಅಭಿಷೇಕ ಮಾಡುವುದರಿಂದ ಮತ್ತಷ್ಟು ಬೆಲೆ ಏರಿದೆ. 50 ರೂ. ಇದ್ದ ಎಳನೀರು 60-70 ರೂ. ಹಾಗೂ ಕೆಂದಾಳೆ ಎಳನೀರು 70ರಿಂದ 80 ರೂ.ಗೆ ಏರಿದೆ.