ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅವರ ಪುನಾ ಒಪ್ಪಂದ ದಿನವಾದ ಸೆ.24ರಂದು ಮಹಿಷ ಧಮ್ಮೋತ್ಸವ ಆಚರಿಸಲಾಗುವುದು ಎಂದು ಮಹಿಷ ದಸರಾ ಸಮಿತಿ ಅಧ್ಯಕ್ಷರೂ ಆದ ಮಾಜಿ ಮೇಯರ್ ಪುರುಷೋತ್ತಮ್ ಹೇಳಿದರು.
ಈ ಬಾರಿಯೂ ಮಹಿಷ ದಸರಾವನ್ನು ಆಚರಿಸಲಾಗುತ್ತಿದ್ದು, ಅಂದು ಬೆಳಗ್ಗೆ 10.30ಕ್ಕೆ ಪುರಭವನದ ಆವರಣದಿಂದ ಚಾಮುಂಡಿಬೆಟ್ಟಕ್ಕೆ ಬೈಕ್ ರ‌್ಯಾಲಿ ಹೊರಟು ಬೆಟ್ಟದ ಮೇಲಿರುವ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಾಮುಂಡಿಬೆಟ್ಟದಿಂದ ಮರಳಿ ಪುರಭವನ ಆವರಣಕ್ಕೆ ಆಗಮಿಸಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುನಾ ಒಪ್ಪಂದ ಮತ್ತು ಮಹಿಷಾಸುರನ ವಿಚಾರಗಳ ಬಗ್ಗೆ ವೇದಿಕೆ ಕಾರ್ಯಕ್ರಮ ಆಯೋಜಿಸಲಿದ್ದು, ಸುಮಾರು 5 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಉರಿಲಿಂಗಿ ಪೆದ್ದಿ ಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ, ಸಾಹಿತಿಗಳಾದ ವಿಠಲ್ ವಿಗ್ಗಾನ್, ಪ್ರೊ.ಕೆ.ಎಸ್.ಭಗವಾನ್, ಇತಿಹಾಸ ತಜ್ಞ ಪ್ರೊ.ನಂಜರಾಜ ಅರಸ್, ಸಿದ್ದಸ್ವಾಮಿ ಇತರರು ವಿಚಾರ ಮಂಡಿಸಲಿದ್ದಾರೆ ಎಂದರು.
ಮಹಿಷ ದಸರಾಗೆ ನಿಷೇಧಾಜ್ಞೆ ಜಾರಿ ಮಾಡಿದರೆ, ದಸರಾ ಮಹೋತ್ಸವಕ್ಕೂ ಮುಂದೆ ಜಾರಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘಟನೆಯ ಪ್ರೊ.ಕೆ.ಎಸ್.ಭಗವಾನ್, ಸೋಮಯ್ಯ ಮಲೆಯೂರು, ಶಿವಣ್ಣ, ಪುಟ್ಟರಾಜು, ವಿಷಕಂಠ, ವಿಶ್ವನಾಥ್ ಇತರರು ಇದ್ದರು.