

ವಿಜಯಪುರ: ಕರ್ನಾಟಕ ಸುವರ್ಣ ಸಂಭ್ರಮ-50ರ ಅದ್ದೂರಿಯಾಗಿ ಆಚರಣೆಯೊಂದಿಗೆ ಸಂಭ್ರಮವನ್ನು ವೈಶಿಷ್ಟ ಪೂರ್ಣವಾಗಿ ಆಯೋಜಿಸಲಾಗುವುದು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ಸುವರ್ಣ ಸಂಭ್ರಮ-50ರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಅಂಗವಾಗಿ ಹೊರನಾಡಿನಲ್ಲಿ ಆಯೋಜಿಸುವ ಕಾರ್ಯಕ್ರಮ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದ ವಿಜಯಪುರ ಸೇರಿದಂತೆ ರಾಯಚೂರ, ಮಂಗಳೂರು, ಮೈಸೂರು ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿಜಯಪುರ ಜಿಲ್ಲೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮ ಬೆಳಗಾವಿ ವಿಭಾಗದ ಪ್ರಥಮ ಕಾರ್ಯಕ್ರಮವಾಗಿದೆ ಎಂದರು.
ಜಿಲ್ಲೆಯಲ್ಲಿ ಆಯೋಜಿಸುವ ಕಾರ್ಯಕ್ರಮವನ್ನು ಅತ್ಯಂತ ವೈಶಿಷ್ಟಪೂರ್ಣವಾಗಿ ಹಮ್ಮಿಕೊಂಡಿದ್ದು, ಜಿಲ್ಲೆಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಗುಡ್ಡಾಪುರ ಶ್ರೀ ದಾನಮ್ಮದೇವಿ ದೇವಸ್ಥಾನದ ಆವರಣದಲ್ಲಿ ಆ. 28 ರಂದು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ನಾಡೋಜ ಡಾ. ಕಯ್ಯರ ಕಿಞಣ್ಣ ರೈ, ಡಾ. ಚನ್ನಬಸವ ಪಟ್ಟದೇವರು, ಡಾ.ಜಯದೇವಿ ತಾಯಿ ಲಿಗಾಡೆ ಅವರ ಹೆಸರಿನಲ್ಲಿ ಸ್ಥಾಪಿಸಲಾದ ಗಡಿನಾಡ ಚೇತನ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಕೂಡ ನೆರವೇರಲಿದೆ ಎಂದರು.
ಕಾರ್ಯಕ್ರಮ ಅಚ್ಚು ಕಟ್ಟಾಗಿ ಹಾಗೂ ವಿಜೃಂಭಣೆಯಿಂದ ಆಯೋಜಿಸಲು ಈಗಾಗಲೇ ದಾನಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿಯ ದೇವಸ್ಥಾನ ಟ್ರಸ್ಟ್‌ನ ಸದಸ್ಯರೊಂದಿಗೆ ಸಭೆ ನಡೆಸಿ ಎಲ್ಲ ರೀತಿಯ ಸಹಾಯ ಸಹಕಾರ ಕೋರಲಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನಲ್ಲಿ ದೇವಸ್ಥಾನ ಇರುವುದರಿಂದ ಸಾಂಗ್ಲಿಯ ಜಿಲ್ಲಾಡಳಿದ ಸಹಕಾರ ಕೋರಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹಾಗೂ ಎಲ್ಲ ಚುನಾಯಿತ ಜನ ಪ್ರತಿನಿದಿಗಳ ಸಹಕಾರದೊಂದಿಗೆ ಅದ್ದೂರಿಯಾಗಿ ಸಂಭ್ರಮದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಅಂದು ಸ್ಥಳೀಯ ಕಲಾವಿದರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಇದರೊಂದಿಗೆ ಗಡಿ ಬಾಗದ ಸಮಸ್ಯೆಗಳ ಕುರಿತು ವಿಚಾರ ವಿನಿಮಯ ನಡೆಯಲಿದೆ ಎಂದರು.
ಜಿಲ್ಲಾಧಿಕಾರಿ ಟಿ.ಬೂಬಾಲನ್, ಬಾಲ ವಿಕಾಸ ಮಂಡಳಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಪ್ರಕಾಶ ಮತ್ತೀಹಳ್ಳಿ, ಸಂಜೀವಕುಮಾರ ಅತಿವಾಳೆ, ಅಶೋಕ ಚಂದರಗಿ, ಡಾ.ಎಂ.ಎಸ್. ಮಧಬಾವಿ, ಭಗತ್‌ರಾಜ್, ಶಿವರೆಡ್ಡಿ ಖೇಡದ, ಜಿಪಂ ಸಿಇಒ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ ಚಲವಾದಿ, ಆಯುಕ್ತ ರಾಜಶೇಖರ ಡಂಬಳ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಎಎಸ್‌ಪಿ ಶಂಕರ ಮಾರಿಹಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಬೋವಿ, ದಾನಮ್ಮ ದೇವಿ, ಚಂದ್ರಶೇಖರ ಗೊಬ್ಬಿ, ನಿರ್ದೇಶಕ ಪ್ರಕಾಶ ಗಣಿ ಮತ್ತಿತರರಿದ್ದರು.