ಆ.15ರ ವೇಳೆಗೆ 5 ಪಾಲಿಕೆಗಳ ಕರಡು ರಚನೆಗೆ ಸಿದ್ಧತೆ

palike gba
Published on

ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ - 2024 ಅಡಿಯಲ್ಲಿ ಬಿಬಿಎಂಪಿಯ ಹಾಲಿ ಪ್ರದೇಶವನ್ನು ಒಳಗೊಂಡಂತೆ ಹೊಸದಾಗಿ 5 ಪಾಲಿಕೆಗಳನ್ನು ರಚಿಸುವ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಮುಂಬರುವ ಆ.15ರ ವೇಳೆಗೆ ಕರಡು ಸಿದ್ಧಪಡಿಸಲು ಗುರಿ ಹೊಂದಲಾಗಿದೆ.

ಬಿಬಿಎಂಪಿ ತನ್ನ ಮೂಲ ಅಸ್ತಿತ್ವ ಕಳೆದುಕೊಂಡು ‘ಗ್ರೇಟರ್ ಬೆಂಗಳೂರು’ ಆಗಿ ಕಳೆದ ಮೇ 15ರಂದು ವಿಧ್ಯುಕ್ತ ಆರಂಭ ಕಂಡಿದೆ. ಮಂಗಳವಾರ (ಜು.15) 2 ತಿಂಗಳು ಪೂರ್ಣಗೊಳ್ಳಲಿದ್ದು, ಪೂರ್ಣ ಪ್ರಮಾಣದಲ್ಲಿ ರೂಪುಗೊಳ್ಳಲು ಸೆ.15ರ ಗಡುವು ವಿಧಿಸಿಕೊಳ್ಳಲಾಗಿದೆ. ಆ ವೇಳೆಗೆ ಬಿಬಿಎಂಪಿಗೆ ಚುನಾವಣೆ ನಡೆದು 5 ವರ್ಷ ಪೂರ್ಣಗೊಳ್ಳುವ (2020ರ ಸೆ.10) ಕಾರಣ ಹೊಸ ಪಾಲಿಕೆಗಳನ್ನು ಅಸ್ತಿತ್ವಕ್ಕೆ ತಂದು ಚುನಾಯಿತ ಸರ್ಕಾರ ಸ್ಥಾಪಿಸುವ ಆಶಯವನ್ನು ಸರ್ಕಾರ ಹೊಂದಿದೆ.

ಇತ್ತೀಚಿಗೆ ಬೆಂಗಳೂರು ನಗರ ಅಭಿವೃದ್ಧಿ ಸಚಿವರೂ ಆದ ಡಿಸಿಎಂ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ 5 ಪಾಲಿಕೆಗಳನ್ನು ರಚಿಸಲು ನಿರ್ಧರಿಸಲಾಗಿತ್ತು. ಆಡಳಿತ ದೃಷ್ಟಿಯಿಂದ ಐದು ಪಾಲಿಕೆಗಳಿಗೆ ಸಮಾನ ಆದಾಯ, ಅನುದಾನ ಹಂಚಿಕೆ, ಸಂಪನ್ಮೂಲ ಕ್ರೋಡೀಕರಣ, ನಿರ್ವಹಣಾ ಹೊಣೆ ವಹಿಸಲು ಉನ್ನತಾಧಿಕಾರಿಗಳ ಸಮಿತಿ ರೂಪುರೇಷೆ ಸಿದ್ಧಪಡಿಸಬೇಕಿದೆ. ಮುಖ್ಯವಾಗಿ ಗ್ರೇಟರ್ ಬೆಂಗಳೂರು ಪ್ರದೇಶ (ಜಿಬಿಎ) ದಲ್ಲಿ ಬದಲಾವಣೆ ಆಗದ ಕಾರಣ ನೂತನ ಪಾಲಿಕೆಗಳನ್ನು ಜನಸಂಖ್ಯೆ ಆಧರಿಸಿ ವಾರ್ಡ್ ನಿಗದಿಪಡಿಸುವ ಕಸರತ್ತಿಗೂ ಚಾಲನೆ ದೊರೆತಿದೆ.

ಹಾಲಿ ಬಿಬಿಎಂಪಿ ವ್ಯಾಪ್ತಿಯಲ್ಲೇ ಹೊಸ ಕಾರ್ಪೊರೇಷನ್‌ಗಳನ್ನು ಪುನರ್ ವಿಂಗಡಿಸಲು ಹೆಚ್ಚಿನ ಕಷ್ಟವಾಗದು. ಕೆಲವೊಂದು ತಾಂತ್ರಿಕ ಹಾಗೂ ಹಣಕಾಸಿಗೆ ಸಂಬಂಧಿಸಿದ ತಗಾದೆ ಉಂಟಾದರೂ, ಅದನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುತ್ತದೆ. ಹಾಗಾಗಿ ಗಡಿಗಳನ್ನು ಗುರುತಿಸಿ ಕರಡು ಸಿದ್ಧಪಡಿಸಿ ಆ.15ರೊಳಗೆ ಸರ್ಕಾರಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಕರಡು ಪ್ರತಿಗೆ ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಿ ಅನುಷ್ಠಾನಯೋಗ್ಯ ಸಲಹೆಗಳನ್ನು ಸೇರ್ಪಡೆ ಮಾಡಿಕೊಂಡು ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ. ಇದಕ್ಕೂ ಮುನ್ನ ಸಮಿತಿ ನೀಡಲಿರುವ ವರದಿ ಆಧರಿಸಿ 5 ಪಾಲಿಕೆಗಳನ್ನು ಅಸ್ತಿತ್ವಕ್ಕೆ ತರಲು ಸಚಿವ ಸಂಪುಟದ ಅನುಮೋದನೆ ಪಡೆದುಕೊಳ್ಳಲಾಗುತ್ತದೆ.

ನಗರಕ್ಕೆ ಸ್ವಾತಂತ್ರೋತ್ಸವದ ಕೊಡುಗೆ?:

ಹೊಸ ಪಾಲಿಕೆಗಳ ರಚನೆಯ ಕರಡು ಸಿದ್ಧಗೊಳ್ಳಲು ಒಂದು ತಿಂಗಳು ಹಿಡಿಯಲಿದೆ. ಆ ವೇಳೆಗೆ ಬೆಂಗಳೂರು ನಗರಕ್ಕೆ ಹೆಚ್ಚಿನ ಮೂಲಸೌಕರ್ಯ ಒದಗಿಸಲು ಕೆಲವೊಂದು ಯೋಜನೆಗಳನ್ನು ಘೋಷಿಸಲು ಡಿಸಿಎಂ ಉದ್ದೇಶಿಸಿದ್ದಾರೆ. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಒಂದೆರಡು ಸುತ್ತಿನ ಚರ್ಚೆ ನಡೆಸಿದ್ದು, ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂಬುದನ್ನು ಶೀಘ್ರವೇ ನಿರ್ಧರಿಸಲಾಗುತ್ತದೆ. ಇದನ್ನಾಧರಿಸಿ ನಗರಾಭಿವೃದ್ಧಿ ಹಾಗೂ ಬಿಬಿಎಂಪಿ ಮಟ್ಟದಲ್ಲಿ ಪ್ರತ್ಯೇಕ ಸಭೆಗಳು ನಡೆದು ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಐದೂ ಪಾಲಿಕೆಗೆ ಬೆಂಗಳೂರು ಹೆಸರು:

ಗ್ರೇಟರ್ ಬೆಂಗಳೂರು ಕಾಯ್ದೆ ಅಡಿಯಲ್ಲಿ ರಚನೆಯಾಗಲಿರುವ ಐದು ಹೊಸ ಪಾಲಿಕೆಗಳು ಬೆಂಗಳೂರು ಹೆಸರನ್ನು ಹೊಂದಲಿವೆ. ಪ್ರತಿಪಕ್ಷ ಹಾಗೂ ಕೆಲ ಸಂಘಟನೆಗಳು ಬೆಂಗಳೂರನ್ನು ವಿಭಜಿಸಲಾಗುತ್ತಿದೆ ಎಂಬ ಆರೋಪದಿಂದ ಪಾರಾಗಲು ಸರ್ಕಾರ ಈ ಉಪಾಯ ಕಂಡುಕೊಂಡಿದೆ. ಹಾಗಾಗಿ ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಕೇಂದ್ರ - ಈ ಹೆಸರಿನಿಂದ ನೂತನ ಪಾಲಿಕೆಗಳನ್ನು ಗುರುತಿಸಲಾಗುತ್ತದೆ.

ಹೊಸ ಪಾಲಿಕೆಗಳ ಸಂಭಾವ್ಯ ಪ್ರದೇಶ:

ಬೆಂಗಳೂರು ನಗರದಲ್ಲಿರುವ 28 ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿಕೊಂಡು ಬಿಬಿಎಂಪಿ ರಚಿಸಲಾಗಿದೆ. ಈಗ ಗ್ರೇಟರ್ ಬೆಂಗಳೂರು ಆಗಿ ಬದಲಾಗಿದ್ದರೂ, ಪಾಲಿಕೆ ವ್ಯಾಪ್ತಿ ಹಿಂದಿನಂತೆ ಇರಲಿದೆ. ಹೊಸದಾಗಿ ರಚನೆಯಾಗಲಿರುವ ಕಾರ್ಪೊರೇಷನ್‌ಗಳ ಪ್ರದೇಶಗಳು ಐದೂ ಪಾಲಿಕೆಗಳಲ್ಲಿ ಹಂಚಲ್ಪಡುತ್ತದೆ. ನಗರದ ಹೊರವಲಯದಲ್ಲಿರುವ ಕೆಲ ವಿಧಾನಸಭಾ ಕ್ಷೇತ್ರಗಳು ವಿಸ್ತೀರ್ಣ ಹಾಗೂ ಜನಸಂಖ್ಯೆಯಲ್ಲಿ ಹೆಚ್ಚಿರುವ ಕಾರಣ ಅಂತಹವುಗಳು ಮಾತ್ರ ಸೇರ್ಪಡೆಗೊಳಿಸಲು ಸವಾಲು ಎದುರಾಗಬಹುದು.

ಯಾವ ಕ್ಷೇತ್ರ ಯಾವ ಪಾಲಿಕೆ ವ್ಯಾಪ್ತಿಗೆ?:

ಬೆಂಗಳೂರು ಉತ್ತರ - ಯಲಹಂಕ, ಬ್ಯಾಟರಾಯನಪುರ, ದಾಸರಹಳ್ಳಿ, ಯಶವಂತಪುರ, ಆರ್.ಆರ್.ನಗರ.

ಬೆಂಗಳೂರು ದಕ್ಷಿಣ - ಜಯನಗರ, ಚಿಕ್ಕಪೇಟೆ, ಶಾಂತಿನಗರ, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ.

ಬೆಂಗಳೂರು ಪೂರ್ವ - ಸರ್ವಜ್ಞನಗರ, ಸಿ.ವಿ.ರಾಮನ್ ನಗರ, ಕೆ.ಆರ್.ಪುರ, ಮಹದೇವಪುರ

ಬೆಂಗಳೂರು ಪಶ್ಚಿಮ - ಆರ್.ಆರ್.ನಗರ, ಗೋವಿಂದರಾಜನಗರ, ವಿಜಯನಗರ, ಚಾಮರಾಜಪೇಟೆ, ಬಸವನಗುಡಿ, ಪದ್ಮನಾಭನಗರ.

ಬೆಂಗಳೂರು ಕೇಂದ್ರ - ಗಾಂಧಿನಗರ, ಶಿವಾಜಿನಗರ, ಪುಲಿಕೇಶಿನಗರ, ಹೆಬ್ಬಾಳ, ಮಲ್ಲೇಶ್ವರ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net