ಬಂಜಾರ ಸಂಸ್ಕೃತಿ ವಿಶ್ವಕೋಶ ರಚನೆಗೆ ತಯಾರಿ: ರಾಜ್ಯ ಸರ್ಕಾರ - ಅಕಾಡೆಮಿ ಸಾರಥ್ಯ

banjara so_tory
Published on

ಆರ್​​.ತುಳಸಿಕುಮಾರ್​

ಬೆಂಗಳೂರು: ಕರ್ನಾಟಕದ ಜನಸಮುದಾಯದಲ್ಲಿ ವಿಶಿಷ್ಟತೆ ಹೊಂದಿರುವ ಬಂಜಾರ (ಲಂಬಾಣಿ) ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ದಾಖಲೀಕರಿಸುವ ನಿಟ್ಟಿನಲ್ಲಿ ‘ಬಂಜಾರ ಸಂಸ್ಕೃತಿ ವಿಶ್ವಕೋಶ’ ರಚನೆಗೆ ತಯಾರಿ ನಡೆಸಲಾಗುತ್ತಿದೆ. ಕನ್ನಡ ಶಬ್ದಕೋಶವನ್ನು ಭಾಷೆ ಕುರಿತು ವಿಸ್ತೃತವಾಗಿ ಹೊರತಂದಿರುವ ಮಾದರಿಯಲ್ಲೇ, ಬಂಜಾರ ಸಂಸ್ಕೃತಿಯ ಸಮಗ್ರ ರೂಪದ ಎನ್‌ಸೈಕ್ಲೋಪಿಡಿಯಾ ಇದಾಗಲಿದೆ.

ಬಂಜಾರ ಜನಾಂಗವು ಹರಪ್ಪಾ ಮಹೆಂಜೋದಾರೊ ನಾಗರಿಕತೆ ಸಮಯದಲ್ಲೇ ವಾಸವಿದ್ದವರು ಎಂಬುದಕ್ಕೆ ಕೆಲ ಪುರಾವೆಗಳು ದೊರೆತಿವೆ. ಇದಕ್ಕೆ ಸಾಕ್ಷ್ಯ ಒದಗಿಸುವ ಅಧ್ಯಯನ ವರದಿಯಿಂದ ಆರಂಭಿಸಿ ಇತರ ದೇಶಗಳಲ್ಲಿನ ಬಂಜಾರ ಇತಿಹಾಸ, ಕರ್ನಾಟಕದಲ್ಲಿ ನೆಲಗೊಂಡಿದ್ದು, ಸಾಮಾಜಿಕ, ಸಾಹಿತ್ಯ/ಸಾಂಸ್ಕೃತಿಕ, ಆಚಾರ-ವಿಚಾರ, ಹಬ್ಬ, ಸಂಪ್ರದಾಯ, ಆಹಾರ, ಉಡುಗೆ-ತೊಡುಗೆ, ಮೌಖಿಕ ಪರಂಪರೆ ದಾಖಲಿಸುವ ಯತ್ನ ನಡೆದಿದೆ. ಈ ಬೃಹತ್ ಕಾರ್ಯಕ್ಕೆ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು ತಜ್ಞರು ಒಳಗೊಂಡ ಸಲಹಾ ಸಮಿತಿಯನ್ನು ರಚಿಸಿ ಆರಂಭಿಕ ಚಟುವಟಿಕೆಗಳಿಗೆ ಚಾಲನೆ ನೀಡಿದೆ.

ಸಾಂಸ್ಕೃತಿಕ ಸಿರಿ ದಾಖಲಿಸಲು ಒತ್ತು:

ಬಂಜಾರ ಸಂಸ್ಕೃತಿ ವಿಶ್ವಕೋಶ ರಚನಾ ಕಾರ್ಯದ ಜತೆಗೆ ಸಾಂಸ್ಕೃತಿಕ ಸಿರಿ ಸಂಪತ್ತು ದಾಖಲಿಸಲು ಆದ್ಯತೆ ನೀಡಲಾಗುತ್ತದೆ. ಇದರಲ್ಲಿ ಬಂಜಾರರ ಸಮಗ್ರ ಸಂಸ್ಕೃತಿ, ಇತಿಹಾಸ, ಜನಜೀವನ, ಆಚರಣಾ ಪದ್ಧತಿ, ನೃತ್ಯ, ಸಂಗೀತ, ಶ್ರದ್ಧಾಕೇಂದ್ರಗಳು, ಅನ್ಯಭಾಷಾ ಪ್ರಭಾವದ ಜತೆಗೆ ಹೊಸ ಪೀಳಿಗೆಯೊಂದಿಗೆ ಬೆಸೆದುಕೊಂಡಿರುವ ಅಂಶಗಳನ್ನು ಕ್ರೋಡೀಕರಿಸಲಾಗುತ್ತದೆ. ಇದಕ್ಕಾಗಿ ಮೂಲ ಕೈಪಿಡಿಗಳ ಅವಕಲೋಕನ, ಕ್ಷೇತ್ರ ಕಾರ್ಯ ನಡೆಸುವುದು, ಸಮೀಕ್ಷೆ, ಮಾಹಿತಿ ಸಂಗ್ರಹ, ಸಂಶೋಧಕರು/ಬರಹಾಗಾರರಿಗೆ ತರಬೇತಿ, ಕಾರ್ಯಾಗಾರ ಹಮ್ಮಿಕೊಳ್ಳಲು ಒತ್ತು ನೀಡಲಾಗಿದೆ. ಜತೆಗೆ ಶಾಸನ, ತಾಮ್ರಪತ್ರಗಳಲ್ಲಿ ಬಂಜಾರರ ಇತಿಹಾಸದ ಮಾಹಿತಿ ಶೋಧಕ್ಕೂ ಆದ್ಯತೆ ನೀಡಲಾಗುತ್ತದೆ.

ಸಂಪನ್ಮೂಲ ಸಂಗ್ರಹಕ್ಕೆ ವಿಶೇಷ ಗಮನ:

ವಿಶ್ವಕೋಶ ತಯಾರಿಸಲು ಹೆಚ್ಚಿನ ಸಮಯ ಹಾಗೂ ದೊಡ್ಡ ಮೊತ್ತ ಬೇಕಿದೆ. ಇದಕ್ಕಾಗಿ ಬಂಜಾರ ಅಕಾಡೆಮಿಯು ಸಿದ್ಧತೆಯ 2ನೇ ಹಂತದಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಗಮನ ನೀಡಲಿದೆ. ಸಮಾಜ ಕಲ್ಯಾಣ ಇಲಾಖೆ, ತಾಂಡ ಅಭಿವೃದ್ಧಿ ನಿಗಮ, ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ (ಎಚ್‌ಕೆಡಿಬಿ) ಹಾಗೂ ಇತರ ಸಂಸ್ಥೆಗಳ ಮೂಲಕ ಹಣದ ನೆರವು ಪಡೆಯಲು ಯತ್ನಿಸಲಾಗುತ್ತದೆ.

5 ವರ್ಷದ ಯೋಜನೆ:

ಬಂಜಾರ ಸಂಸ್ಕೃತಿ ವಿಶ್ವಕೋಶ ರಚನೆಗೆ 5 ವರ್ಷದ ಗುರಿ ಹೊಂದಲಾಗಿದೆ. ಆರಂಭಿಕ ಚಟುವಟಿಕೆ ಜತೆ ಜತೆಗೆ ಮಾಹಿತಿ ಸಂಗ್ರಹ, ಸಂಶೋಧನಾ ವರದಿಗಳ ಸಂರಕ್ಷಣೆ ಮಾಡಲಾಗುತ್ತದೆ. ಸಮುದಾಯದ ಜನ ಹೆಚ್ಚಾಗಿ ವಾಸವಿರುವ ತಾಂಡ, ಗ್ರಾಮ, ತಾಲೂಕು ಹಾಗೂ ಜಿಲ್ಲಾ ಸಂಪಾದಕರನ್ನು ನಿಯೋಜಿಸಲಾಗುತ್ತದೆ. ಮಾಹಿತಿ ಕಾರಾರುವಕ್ಕಾಗಿ ದಾಖಲಿಸಲು ಅನ್ಯ ಭಾಷಾ ವಿದ್ವಾಂಸರ ನೆರವು ಪಡೆಯಲಾಗುತ್ತದೆ. ಒಟ್ಟಾರೆ ವಿಶ್ವಕೋಶ ಸಿದ್ಧಪಡಿಸಲು 150 ವಿದ್ವಾಂಸರನ್ನು ಗುರುತಿಸಲು ಚರ್ಚೆ ನಡೆದಿದೆ. ಈ ಅಗಾಧ ಕಾರ್ಯವನ್ನು ಹಂತಗಳಲ್ಲಿ ಕೈಗೊಳ್ಳಲು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಮಾರ್ಗದರ್ಶನ ಪಡೆಯಲಾಗಿದೆ.

ಸರ್ಕಾರಕ್ಕೆ ಶೀಘ್ರ ಪ್ರಸ್ತಾವನೆ:

ಬಂಜಾರ ವಿಶ್ವಕೋಶ ರಚನೆ ಸಂಬಂಧ ಈಗಾಗಲೇ ಆರಂಭಿಕ ಸಭೆಗಳು ನಡೆದಿವೆ. ಯೋಜನೆಯನ್ನು ಅನುಷ್ಠಾನಕ್ಕೆ ತರುವ ಸಂಬಂಧ ಸಮುದಾಯದ ಗಣ್ಯರು, ಭಾಷಾ ಪಂಡಿತರು, ತಜ್ಞರನ್ನು ಸಂಪರ್ಕಿಸಿ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೆರಡು ಸಭೆಗಳನ್ನು ಆಯೋಜಿಸಿ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲು ಬಂಜಾರ ಅಕಾಡೆಮಿ ನಿರ್ಧರಿಸಿದೆ.

ನಮ್ಮ ಅಕಾಡೆಮಿಯಿಂದ ಬಂಜಾರ ಸಂಸ್ಕೃತಿ ವಿಶ್ವಕೋಶ ಸಿದ್ಧಪಡಿಸಲು ಈಗಾಗಲೇ ಹಿರಿಯರು, ತಜ್ಞರೊಂದಿಗೆ ಚರ್ಚೆ ನಡೆಸಲಾಗಿದೆ. ಆಡಳಿತ ಸಮಿತಿ, ಸಲಹಾ ಸಮಿತಿ ಹಾಗೂ ಸಂಪಾದಕ ಸಮಿತಿ ರಚಿಸಿ ಮಾಹಿತಿ ಸಂಗ್ರಹಕ್ಕೆ ಚಾಲನೆ ನೀಡಬೇಕಿದೆ. ಈ ಯೋಜನೆಗೆ 5 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆ ಇದ್ದು, ಪ್ರಸ್ತಾವನೆಯನ್ನು ಸಿಎಂ ಅವರಿಗೆ ಸಲ್ಲಿಸಿ ಅನುಷ್ಠಾನಕ್ಕೆ ಒಪ್ಪಿಗೆ ಕೋರಲಾಗುವುದು.

- ಡಾ. ಎ.ಆರ್.ಗೋವಿಂದಸ್ವಾಮಿ, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net