

ಹಿರೀಸಾವೆ: ಪಟ್ಟಣದ ಗ್ರಾಮದೇವತೆ ಶ್ರೀ ಚೌಡೇಶ್ವರಿ ದೇವಿಯ ರಥೋತ್ಸವ ಬುಧವಾರ ನಡೆಯಲಿದ್ದು ಸೋಮವಾರ ಭಕ್ತರು ಸಕಲ ಸಿದ್ಧತೆ ಮಾಡಿಕೊಂಡರು.
ಹೊನ್ನೇನಹಳ್ಳಿ ಹಾಗೂ ಹಿರೀಸಾವೆಯ ಗ್ರಾಮದೇವತೆ ಶ್ರೀ ಚೌಡೇಶ್ವರಿ ದೇವಿಯ ಹಬ್ಬವನ್ನು ಈ ಎರಡೂ ಗ್ರಾಮಗಳಲ್ಲಿ ವಿವಿಧ ಸಂಪ್ರದಾಯಗಳೊಂದಿಗೆ 11 ದಿನಗಳಿಂದ ಆಚರಿಸಲಾಗುತ್ತಿದೆ.
ಪ್ರತಿ ದಿನ ರಾತ್ರಿ ಒಂದೊಂದು ಮನೆತನದವರು ಚೌಡೇಶ್ವರಿ ದೇವಿಯ ಉತ್ಸವ ನಡೆಸುತ್ತಿದ್ದು ಎರಡು ಗ್ರಾಮಗಳಲ್ಲಿ ಜನಪದ ಶೈಲಿಯ ರಂಗದ ಕುಣಿತವನ್ನು ಕುಣಿಯುತ್ತಿದ್ದಾರೆ. ಜತೆಗೆ ಹಿರಿಯ ತಾಯಂದಿರು ಸೋಬಾನೆ ಪದಗಳನ್ನು ಹೇಳುವುದು ವಿಶೇಷವಾಗಿದೆ.
ಹಿರೀಸಾವೆ ಪಟ್ಟಣದ ಕುಂಬಾರರಿಂದ ಹಬ್ಬದ ಸಲುವಾಗಿ ವಿಶೇಷ ಮಡಕೆಗಳನ್ನು (ಕುಂಭ) ತಯಾರಿಸಲಾಗಿದೆ. ಮಂಗಳವಾರ ಬೆಳಗ್ಗೆ ಹೊನ್ನೇನಹಳ್ಳಿ ಗ್ರಾಮಸ್ಥರು ಹಸಿ ಈಚಲು ಗರಿಯಿಂದ ಮಣ್ಣಿನ ಮಡಕೆಯಲ್ಲಿ ಮಡೆ ಅನ್ನ ಬೇಯಿಸುವುದು ಈ ಹಬ್ಬ ಹಾಗೂ ಜಾತ್ರಾ ಮಹೋತ್ಸವದ ವಿಶೇಷ. ಅಂದು ರಾತ್ರಿ ಅಲಂಕೃತ ಮಡೆಗಳನ್ನು ಹೊತ್ತ ಭಕ್ತರು ಹೆಬ್ಬಾರಮ್ಮ ದೇವರ ಜತೆಯಲ್ಲಿ ಮೆರವಣಿಗೆ ನಡೆಸುತ್ತಾರೆ. ಹರಕೆ ಹೊತ್ತ ಭಕ್ತರು ಉರುಳು ಸೇವೆ, ಬಾಯಿ ಬೀಗದ ಸೇವೆಗಳನ್ನು ನೆರವೇರಿಸುತ್ತಾರೆ.
ಬುಧವಾರ ಮಧ್ಯಾಹ್ನ 12 ಗಂಟೆಗೆ ಚೌಡೇಶ್ವರಿ ದೇವಿಯ ರಥೋತ್ಸವ ನಡೆಯಲಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಇರುವ ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.