

ಪ್ರವಾಸಿತಾಣ ನಂದಿ ಬೆಟ್ಟದಲ್ಲಿ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ವಿಳಂಬ ಹಾಗೂ ಮೂಲಸೌಕರ್ಯ ಕೊರತೆಯ ಬೇಸರದ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್ ನೇತೃತ್ವದಲ್ಲಿ ಘೋಷಣೆಯ ಕೆಲಸಗಳ ನಿರ್ವಹಣೆ ಬಗ್ಗೆ ಚರ್ಚಿಸಲಾಯಿತು.
ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರವಾಸಿ ತಾಣದಲ್ಲಿ ಭಾನುವಾರ ಸುತ್ತಾಡಿದ ಸಚಿವರು ಮಾಹಿತಿ ಸಂಗ್ರಹಿಸಿ, ಸಲಹೆ ಸೂಚನೆಗಳನ್ನು ನೀಡಿದರು.
ನಂದಿ ರೋಪ್ ವೇ ಯೋಜನೆಗೆ ನಿಗದಿತ ಸ್ಥಳಗಳು, ಸಾರಿಗೆ, ವಾಹನ ನಿಲುಗಡೆ, ಜನಸಂದಣಿ ನಿಯಂತ್ರಣ ಮತ್ತು ಪ್ರವಾಸಿಗರ ಅನುಕೂಲಕರ ವ್ಯವಸ್ಥೆ ಸೇರಿ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.
ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಂದಿ ಬೆಟ್ಟದಲ್ಲಿ ಪ್ಯಾಸೆಂಜರ್ ರೋಪ್ ವೇ ನಿರ್ಮಾಣ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗಿದೆ. ಈಗಾಗಲೇ ಸರ್ವೇ ಕಾರ್ಯ, ಕ್ರಿಯಾಯೋಜನೆಗೆ ಅನುಮೋದನೆ, ಟೆಂಡರ್ ಪ್ರಕ್ರಿಯೆ ಮುಗಿದಿದೆ. ಡೈನಾಮಿಕ್ಸ್ ರೋಪ್ ವೇ ಸಂಸ್ಥೆ ಜತೆ ಸಹಿ ಹಾಕಿ, 93.40 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಗಿರಿಧಾಮದ ಪ್ರಾಕೃತಿಕ ವೈವಿಧ್ಯಕ್ಕೆ ಯಾವುದೇ ತೊಂದರೆಯಾಗದಂತೆ 2.93 ಕಿ.ಮೀ. ಉದ್ದದ ರೋಪ್ವೇ ನಿರ್ಮಿಸಲು ಉದ್ದೇಶಿಸಲಾಗಿದೆ. ಆದರೆ, ಭೂ ಸ್ವಾಧಿನದ ವಿಚಾರವಾಗಿ ನ್ಯಾಯಾಲಯದಲ್ಲಿ ರೈತರ ದಾವೆ, ತಾಂತ್ರಿಕ ಸಮಸ್ಯೆಗಳಿಂದ ಕಾಮಗಾರಿ ಚಾಲನೆ ಪಡೆದುಕೊಂಡಿಲ್ಲ. ಮತ್ತೊಂದೆಡೆ ಅರಣ್ಯ ವ್ಯಾಪ್ತಿಯಲ್ಲಿನ ಭೂಮಿ ಮಂಜೂರಾತಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿದೆ. ಇದೆಲ್ಲವುಗಳಿಂದ ವಿಳಂಬವಾಗುತ್ತಿದೆ.
*ಸಚಿವ ಸಂಪುಟ ಸಭೆಗೆ ಸಿದ್ಧತೆ
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರದ ಬೆಟ್ಟದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ನಂದಿ ಬೆಟ್ಟದಲ್ಲಿ ಸಂಪುಟ ಸಭೆ ಆಯೋಜಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲೂ ಜಿಲ್ಲಾ ಉಸ್ತುವಾರಿ ಸಚಿವರು ಸಿದ್ಧತೆಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದರು.
*ಅಭಿವೃದ್ಧಿಗೆ ಆದ್ಯತೆ
ಮತ್ತಷ್ಟು ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ನಂದಿ ಬೆಟ್ಟವನ್ನು ಪ್ರಮುಖವಾಗಿರಿಸಿಕೊಂಡು ಆಕರ್ಷಕ ಪ್ರವಾಸಿ ವಲಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಂದ ನೀಲಿನೆಯ ಪ್ರಾತ್ಯಕ್ಷಿಕೆ ಮಂಡಿಸಲಾಯಿತು.
ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಜೇಂದ್ರ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಪಂ ಸಿಇಒ ಪ್ರಕಾಶ್ ನಿಟ್ಟಾಲಿ, ಉಪ ವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್ ಮತ್ತಿತರರು ಇದ್ದರು.