

ಜನ್ಮಾಷ್ಟಮಿ ನಿಮಿತ್ತ ಭಕ್ತರಿಗೆ ಹಂಚಲು ಮಠದಲ್ಲಿ ನೂರಾರು ಸಂಖ್ಯೆಯಲ್ಲಿ ಪಾಕತಜ್ಞರು ವಿವಿಧ ಸಿಹಿಖಾದ್ಯ ತಯಾರಿಯಲ್ಲಿ ತೊಡಗಿದ್ದಾರೆ. ಈಗಾಗಲೇ 1.50 ಲಕ್ಷ ಚಕ್ಕುಲಿ ಹಾಗೂ 3.50 ಲಕ್ಷ ಲಡ್ಡು ಸಿದ್ಧಪಡಿಸಲಾಗಿದೆ. ಅಷ್ಟಮಿಯ ಮರುದಿನ ನಡೆಯುವ ಅನ್ನ ಸಂತರ್ಪಣೆಯಲ್ಲಿ ಇದನ್ನು ವಿತರಿಸಲಾಗುತ್ತದೆ.
ಸೆ.14ರಂದು ಬೆಳಗ್ಗೆ ಶ್ರೀಕೃಷ್ಣನಿಗೆ ಮಹಾಪೂಜೆ ಬಳಿಕ ಮುದ್ದುಕೃಷ್ಣ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಯ ಬಳಿಕ, ಶ್ರೀಕೃಷ್ಣ ಸಂಗೀತ ಸುಧೆ, ಶ್ರೀಕೃಷ್ಣ ಲೀಲೋತ್ಸವ ಕಲಾ ಪ್ರಸ್ತುತಿ, ಜಾನಪದ ನೃತ್ಯ, ಕಂಸಾಳೆ ಮತ್ತು ವೀರಗಾಸೆ, ದಾಸರ ಪದಗಳ ಗಾಯನ, ಚಂಡೆ ವಾದನ, ಭಜನೆ, ವೇಣು ವಾದನ ಕಚೇರಿ ನಡೆಯಲಿದೆ. ದಿನವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳ ಸಡಗರ ಇರಲಿದೆ.
ಶ್ರೀಕೃಷ್ಣ ಜಯಂತಿ ನಿಮಿತ್ತ ಸೆ.14ರಂದು ರಾತ್ರಿ 11 ಗಂಟೆಗೆ ಪರ್ಯಾಯ ಶ್ರೀಪಾದರಿಂದ ಶ್ರೀಕೃಷ್ಣಗೆ ವಿಶೇಷ ಪೂಜೆ ನಡೆಯಲಿದೆ. ರಾತ್ರಿ 12:11ಕ್ಕೆ ಚಂದ್ರೋದಯ ಕಾಲದಲ್ಲಿ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ನಡೆಯಲಿದೆ.
ಜನ್ಮಾಷ್ಟಮಿ ನಿಮಿತ್ತ ರಾಜಾಂಗಣದಲ್ಲಿ ಸೆ.14ರಂದು ಸಂಜೆ 5 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ. ಪರ್ಯಾಯ ಸುಗುಣೇಂದ್ರ ಶ್ರೀ, ಕಿರಿಯ ಪಟ್ಟದ ಸುಶ್ರೀಂದ್ರ ಶ್ರೀಗಳ ಉಪಸ್ಥಿತಿಯಲ್ಲಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅದಮಾರು ಮಠದ ವಿಶ್ವಪ್ರಿಯ ತೀರ್ಥರು ಶುಭಾಶೀರ್ವಾದ ನೀಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಶಾಸಕ ಯಶ್ಪಾಲ್ ಸುವರ್ಣ, ಕರ್ಣಾಟಕ ಬ್ಯಾಂಕ್ನ ಎಂಡಿ ರಾಘವೇಂದ್ರ ಭಟ್ ಹಾಗೂ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಮಾಹಿತಿ ನೀಡಿದ್ದಾರೆ.
ಶ್ರೀಕೃಷ್ಣನು ಪೊಡವಿಗೆ ಒಡೆಯನಾದರೂ ಉಡುಪಿಯಲ್ಲಿ ಕಡಗೋಲು ಹಿಡಿದು ನಿಂತಿರುವ ಪುಟ್ಟ ಬಾಲಕ. ಸಾಂಸ್ಕೃತಿಕ ಕಲೆ, ಕ್ರೀಡೆಯೆಂದರೆ ಆತನಿಗೆ ಅಚ್ಚುಮೆಚ್ಚು. ಹೀಗಾಗಿ ನಮ್ಮ ಚತುರ್ಥ ಪರ್ಯಾಯದ ಸಂದರ್ಭದಲ್ಲಿ ಆಚಾರ್ಯ ಮಧ್ವರ ಜಯಂತೀ ನಿರ್ಣಯದ ಹಿನ್ನೆಲೆಯಲ್ಲಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಸೆ.14ರಂದು ಶ್ರೀಕೃಷ್ಣ ಜಯಂತಿ ಹಾಗೂ ಸೆ.15ರಂದು ವಿಟ್ಲಪಿಂಡಿ ಉತ್ಸವವನ್ನು ವೈಭವೋಪೇತವಾಗಿ ಆಚರಿಸಲಾಗುತ್ತಿದೆ. ಭಕ್ತರೆಲ್ಲ ಅಗಮಿಸಿ ಶ್ರೀಕೃಷ್ಣ-ಮುಖ್ಯಪ್ರಾಣ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠ