

ಚಿಕ್ಕಬಳ್ಳಾಪುರ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮಟ್ಟದ 10 ನೇ ಸಮ್ಮೇಳನಾಧ್ಯಕ್ಷರಾಗಿ ಗೋಪಾಲಗೌಡ ಕಲ್ವಮಂಜಲಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಕೇಂದ್ರದಲ್ಲಿ ಏ.8 ಹಾಗೂ ಏ.9 ರಂದು ಸಮ್ಮೇಳನ ನಡೆಯಲಿದೆ. ಇದರ ಸರ್ವಾಧ್ಯಕ್ಷರ ಆಯ್ಕೆಗೆ ಹಿರಿಯ ಸಾಹಿತಿ ಗೋಪಾಲಗೌಡ ಕಲ್ವಮಂಜಲಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಮಕ್ಕಳ ಸಾಹಿತಿ ಚೇಳೂರು ನಾಗರಾಜಶೆಟ್ಟಿ, ಸಾಹಿತಿ ಜಿ.ಜ್ಞಾನಾನಂದ ಹೆಸರು ಚರ್ಚೆಯಾಗಿತ್ತು. ಕೊನೆಗೆ ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ ಕೋಡಿರಂಗಪ್ಪ ನೇತೃತ್ವದಲ್ಲಿ ಕೈಗೊಂಡಿದ್ದ ಜಿಲ್ಲಾ ಹಾಗೂ ತಾಲೂಕು ಕಸಾಪ ಪದಾಧಿಕಾರಿಗಳ ಸಭೆಯಲ್ಲಿ ಗೋಪಾಲಗೌಡರ ಹೆಸರನ್ನು ಅಂತಿಮಗೊಳಿಸಲಾಯಿತು.
*10 ನೇ ಸಮ್ಮೇಳನಕ್ಕೆ ಸಿದ್ಧತೆ*
ಪ್ರಸ್ತುತ ಈ ಭಾಗದಲ್ಲಿ ಜಿಲ್ಲಾ ಮಟ್ಟದ 9 ಸಮ್ಮೇಳನಗಳು ನಡೆದಿವೆ. ಡಾ ಸರೋಜಾ, ಗಂಗಾಧರ ಮೂರ್ತಿ, ರಮಣ್ ಗ್ರೂಫ್ ಸಂಸ್ಥೆಯ ಅಧ್ಯಕ್ಷ ಷಡಾಕ್ಷರಿ, ನಿವೃತ್ತ ಐಎಎಸ್ ಅಧಿಕಾರಿ ಅಮರನಾರಾಯಣ, ಪ್ರೋ ಕೋಡಿರಂಗಪ್ಪ ಸೇರಿದಂತೆ ಹಲವರು ಜಿಲ್ಲಾ ಸಮ್ಮೇಳನಾಧ್ಯಕ್ಷ ಸ್ಥಾನ ನಿಭಾಯಿಸಿ ನಾಡು ನುಡಿಯ ವಿಚಾರವಾಗಿ ಮಹತ್ತರವಾದ ಸಂದೇಶದ ಮೂಲಕ ಗಮನ ಸೆಳೆದಿದ್ದಾರೆ. 10 ನೇ ಸಮ್ಮೇಳನಕ್ಕೆ ಸಿದ್ಧತೆಯ ಮೊದಲ ಹಂತದ ಚಟುವಟಿಕೆಯು ಪ್ರಾರಂಭವಾಗಿದೆ. ಕಳೆದ ಜನವರಿ ಇಲ್ಲವೇ ಫೆಬ್ರವರಿಯಲ್ಲಿಯೇ ಕಾರ್ಯಕ್ರಮಗಳನ್ನು ಕೈಗೊಳ್ಳಲು ಚಿಂತಿಸಲಾಗಿತ್ತು. ಆದರೆ, ರಾಜ್ಯ ಸಮ್ಮೇಳನ, ಸುಸಜ್ಜಿತ ಸ್ಥಳ ನಿಗದಿ ಸೇರಿದಂತೆ ನಾನಾ ಕಾರಣಗಳಿಂದ ಮುಂದೂಡಲಾಗಿತ್ತು.
*ಹಿರಿಯ ಸಾಹಿತಿಗೆ ಅವಕಾಶ*
ನಾಡುಪ್ರಭುಗಳು, ಪಾಳೇಗಾರರು, ಬಯಲು ಸೀಮೆ ಸ್ಮಾರಕಗಳು, ಸ್ಥಳಗಳು, ದೇಗುಲಗಳು, ಚಿಕ್ಕಬಳ್ಳಾಪುರ ಇತಿಹಾಸ, ಮಠದ ಪರಂಪರೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅಧ್ಯಯನ ನಡೆಸಿ ಪುಸ್ತಕಗಳನ್ನು ಬರೆದಿರುವ ಗೋಪಾಲಗೌಡರು,
ಅವಿಭಜಿತ ಕೋಲಾರ ಜಿಲ್ಲೆಯ ಕಲ್ವಮಂಜಲಿ ಊರಿನಲ್ಲಿ ಜನಿಸಿದ್ದಾರೆ. ಪ್ರಸ್ತುತ ಚಿಕ್ಕಬಳ್ಳಾಪುರ ನಗರದ ಎಚ್.ಎಸ್.ಗಾರ್ಡನ್ ನಲ್ಲಿ ನೆಲೆಸಿದ್ದಾರೆ.
ಹಲವು ದಶಕಗಳಿಂದಲೂ ಸಾಹಿತ್ಯ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಹಿತ್ಯಾತ್ಮಕ ಚಟುವಟಿಕೆಗೆ ಮಾರ್ಗದರ್ಶನ ನೀಡುತ್ತ ಬಂದಿದ್ದಾರೆ. ದಿನಪತ್ರಿಕೆಗಳು, ವಿಶೇಷಾಂಕಗಳಿಗೆ ಅಂಕಣಗಳನ್ನು ಬರೆದು ಗಮನ ಸೆಳೆದಿದ್ದಾರೆ.
*ಉದ್ಘಾಟನೆ ಜತೆಗೆ ಸಮ್ಮೇಳನ*
ನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕನ್ನಡ ಭವನದಲ್ಲಿ ಸಮ್ಮೇಳನವನ್ನು ಆಯೋಜಿಸಲು ಚಿಂತಿಸಲಾಗಿದೆ. ಇದೇ ವೇಳೆಯೇ ಕಟ್ಟಡದ ಉದ್ಘಾಟನೆ ನೆರವೇರಿಸಲಾಗುತ್ತದೆ. ಇದರ ಮೂಲಕ 18 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಭವನದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ಮೊದಲ ಕಾರ್ಯಕ್ರಮವಾಗಲಿದೆ. ಅರ್ಥಪೂರ್ಣ ವಿವಿಧ ಚಟುವಟಿಕೆಯೊಂದಿಗೆ ಕಟ್ಟಡವು ಕಾರ್ಯಾಂಭಿಸಿದಂತಾಗುತ್ತದೆ ಎಂಬ ಮಾತನ್ನು ಹೇಳಲಾಗುತ್ತಿದೆ.
ಕೋಟ್ ೧
ಚಿಕ್ಕಬಳ್ಳಾಪುರದಲ್ಲಿ ಏ.8 ಹಾಗೂ ಏ.9 ರಂದು ಜಿಲ್ಲಾ ಕನ್ನಡ ಸಾಹಿತ್ಯ 10 ನೇ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ
ಹಿರಿಯ ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ಮಂಜಲಿರ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಪ್ರೊ ಕೋಡಿ ರಂಗಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ, ಚಿಕ್ಕಬಳ್ಳಾಪುರ