

ಅವಿನಾಶ್ ಜೈನಹಳ್ಳಿ ಮೈಸೂರು
ಮಾ.6 ರಿಂದ 11ರವರೆಗೆ ನಡೆಯಲಿರುವ ರಂಗಾಸಕ್ತರ ಹಬ್ಬ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ- 2024’ಕ್ಕೆ ರಂಗಾಯಣದ ಅಂಗಳದಲ್ಲಿ ಸಿದ್ಧತೆ ಭರದಿಂದ ಸಾಗಿದೆ.
ಒಂದು ವಾರ ‘ಕಲಾರಸ’ ಹಂಚಲು ರಂಗಾಯಣದ ಆವರಣ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ವೇದಿಕೆಗಳ ವಿನ್ಯಾಸ, ಆವರಣ ಸ್ವಚ್ಛತಾ ಕಾರ್ಯ, ನಾಟಕಗಳ ತಾಲೀಮು, ಮಳಿಗೆಗಳ ನಿರ್ಮಾಣ, ಶಿಲ್ಪಗಳ ಕೆತ್ತನೆ… ಹೀಗೆ ಸಕಲ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿವೆ.
‘ಇವ ನಮ್ಮವ ಇವ ನಮ್ಮವ’ ಪರಿಕಲ್ಪನೆ ಅಡಿ ನಾಟಕಗಳು, ಜಾನಪದ ಸಂಭ್ರಮ, ಚಲನಚಿತ್ರೋತ್ಸವ, ಪುಸ್ತಕ ಮೇಳ, ಕರಕುಶಕಲ ಮೇಳ ಮತ್ತು ಪ್ರಾತ್ಯಕ್ಷಿಕೆ, ದೇಸಿ ಆಹಾರ ಮೇಳ, ಚಿತ್ರಕಲಾ ಪ್ರದರ್ಶನ, ಚಾರಿತ್ರಿಕ ದಾಖಲೆಗಳ ಪ್ರದರ್ಶನ, ವಚನಾಂತರಂಗ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
‘ಬಹುರೂಪಿ’ ಕುರಿತು ಹತ್ತಾರು ಕಲಾವಿದರು ಬಿಡಿಸುತ್ತಿರುವ ಪೋಸ್ಟರ್‌ಗಳು, ಭಿತ್ತಿಚಿತ್ರಗಳನ್ನು ರಂಗಾಯಣದ ಅಂಗಳದಲ್ಲಿ ಹಾಕಲಾಗುತ್ತಿದೆ. ಕರಕುಶಲ, ಆಹಾರ, ತಿನಿಸು, ಪುಸ್ತಕ ಪ್ರದರ್ಶನದ ಮಾರಾಟ ಮಳಿಗೆಗಳನ್ನು ಸಿದ್ಧಪಡಿಸಲಾಗುತ್ತಿದೆ. ರಂಗಾಯಣ ಅಂಗಳದ ತುಂಬ ‘ರಂಗ ಸಂಭ್ರಮ’ ಮನೆ ಮಾಡಿದೆ.
ಕರಕುಶಲ, ಆಹಾರ, ತಿನಿಸು, ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕಾಗಿ 60 ಮಳಿಗೆಗಳು ತಲೆ ಎತ್ತುತ್ತಿವೆ. ದೇಸಿ ಆಹಾರಕ್ಕಾಗಿ 11ಕ್ಕೂ ಹೆಚ್ಚಿನ ಮಳಿಗೆಗಳನ್ನು ಸಿದ್ಧಪಡಿಸಲಾಗಿದೆ. 18 ಮಳಿಗೆಗಳು ಪುಸ್ತಕ ಮಾರಾಟಕ್ಕೆ ಸಿದ್ಧವಾಗುತ್ತಿವೆ. ಇನ್ನುಳಿದ ಮಳಿಗೆಗಳಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಇರಲಿದೆ. ದೇಶದ ನಾನಾ ಭಾಗಗಳಿಂದ ಕುಶಲಕರ್ಮಿಗಳು ಭಾಗವಹಿಸಲಿದ್ದಾರೆ. ಈ ಬಾರಿ ವಿಶೇಷ ಕರಕುಶಲ ವಸ್ತುಗಳನ್ನು ರಂಗಾಯಣದ ಆವರಣದಲ್ಲಿ ಪ್ರದರ್ಶನ ಮಾಡಲಾಗುತ್ತಿದೆ.
ಪ್ರತಿದಿನ ಉತ್ಸವಕ್ಕೆ ಆಗಮಿಸುವ 250 ರಿಂದ 300 ಕಲಾವಿದರು, ಗಣ್ಯರಿಗಾಗಿ ನಗರದ ಖಾಸಗಿ ಹೋಟೆಲ್‌ಗಳು ಹಾಗೂ ಸರ್ಕಾರಿ ಗೆಸ್ಟ್‌ಹೌಸ್‌ಗಳನ್ನು ಕಾಯ್ದಿರಿಸಲಾಗಿದೆ. ಗೆಸ್ಟ್‌ಹೌಸ್‌ಗಳಿಂದ ರಂಗಾಯಣಕ್ಕೆ ಕರೆತರಲು ಬಸ್ ವ್ಯವಸ್ಥೆಯನ್ನೂ ಮಾಡಲಾಗಿದೆ. ನಗರ ಪಾಲಿಕೆಯು ಒಂದು ಬಸ್ ಹಾಗೂ ಮಿನಿ ವಾಹನವನ್ನು ನೀಡಲು ಒಪ್ಪಿಕೊಂಡಿದೆ.
ಜನಪದ ಸಂಭ್ರಮಕ್ಕೆ ಕಿಂದರಿಜೋಗಿ ಆವರಣ, ಚಲನಚಿತ್ರೋತ್ಸವಕ್ಕೆ ಶ್ರೀರಂಗ ಮಂದಿರ ಹಾಗೂ ನಾಟಕ ಪ್ರದರ್ಶನಕ್ಕೆ ವನರಂಗ, ಕಿರುರಂಗಮಂದಿರ, ಭೂಮಿಗೀತ, ಕಲಾಮಂದಿರ ವೇದಿಕೆಗಳನ್ನು ಸಿದ್ಧ ಮಾಡಲಾಗುತ್ತಿದೆ. ಬಹುರೂಪಿ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜನೆಗೆ ಬಿ.ವಿ.ಕಾರಂತ ರಂಗಚಾವಡಿಯನ್ನು ಸಿಂಗರಿಸಲಾಗುತ್ತಿದೆ.
ಬಹುರೂಪಿ ಅಂಗವಾಗಿ ರಂಗಾಯಣದ ಅಂಗಳದಲ್ಲಿ ‘ಕಾಯಕ ಮನೆ’ ಎಂಬ ಹೆಸರಿನಲ್ಲಿ ನಾಡಿನ ಕಾಯಕ ಕಲೆಗಳನ್ನು ಪ್ರಚಾರ ಮಾಡುವ ಹಾಗೂ ಆ ಕಲೆಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸುವ ಕೆಲಸ ನಡೆಯಲಿದೆ. ಮುಖ್ಯವಾಗಿ ಮೇದಾರರ ಕಸುಬು ಪರಿಚಯಿಸುವ ಕೆಲಸ ಹಾಗೂ ಬಿದಿರಿನಿಂದ ಬುಟ್ಟಿ, ಏಣಿ ಇನ್ನಿತರ ವಸ್ತುಗಳನ್ನು ತಯಾರಿಸುವ ಪ್ರಾತ್ಯಕ್ಷಿಕೆ ನಡೆಯಲಿದೆ. ಜತೆಗೆ ಶಿಲ್ಪಕಲೆ, ಕುಂಬಾರರ ಮಡಕೆ ತಯಾರಿಕೆ ಸೇರಿದಂತೆ ನಾನಾ ಕಲೆಗಳ ಪ್ರಾತ್ಯಕ್ಷಿಕೆ ನಡೆಯಲಿದೆ. ಜತೆಗೆ ‘ವಚನಾಂತರಂಗ’ ಎಂಬ ಹೆಸರಿನಲ್ಲಿ ಬಸವಣ್ಣನವರ ಸಾಮಾಜಿಕ ತಳದಿಯ 25 ವಚನಗಳಿಗೆ ಸಂಬಂಧಿಸಿದ ಚಿತ್ರಗಳ ಪ್ರದರ್ಶನ ನಡೆಯಲಿದೆ.
ಈ ಬಾರಿಯ ಬಹುರೂಪಿಯಲ್ಲಿ ವಿಶೇಷವಾಗಿ ಕಲೆ, ರಂಗಭೂಮಿಗೆ ಸಂಬಂಧಿಸಿದ ಚಾರಿತ್ರಿಕ ದಾಖಲೆಗಳ ಪ್ರದರ್ಶನ ಆಯೋಜನೆಗೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಕಲೆ, ರಂಗಭೂಮಿ ಹಾಗೂ ಕಲಾವಿದರಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪ್ರದರ್ಶಿಸಲಾಗುತ್ತದೆ. ಮಹಾರಾಜರ ಕಾಲದಿಂದ ಇಲ್ಲಿವರೆಗೆನ ಎಲ್ಲ ದಾಖಲೆಗಳು ಪ್ರದರ್ಶನವಾಗಲಿವೆ ಎಂದು ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ನಾಟಕೋತ್ಸವದಲ್ಲಿ ಎಲ್ಲ ನಾಟಕಗಳಿಗೆ 100 ರೂ. ಬೆಲೆ ನಿಗದಿ ಮಾಡಲಾಗಿದ್ದು, ಈಗಾಗಲೇ ಆನ್‌ಲೈನ್ ಹಾಗೂ ರಂಗಾಯಣದ ಟಿಕೆಟ್ ಕೌಂಟರ್‌ನಲ್ಲಿ ಟಿಕೆಟ್ ಮಾರಾಟ ಆರಂಭವಾಗಿದ್ದು, ರಂಗಾಸಕ್ತರು ತಮ್ಮ ನೆಚ್ಚಿನ ನಾಟಕಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಕನ್ನಡ ನಾಟಕಗಳು ಸೇರಿದಂತೆ ಬಂಗಾಳಿ, ಮಲಯಾಳಂ, ಮರಾಠಿ, ಹಿಂದಿ, ತುಳು ಹಾಗೂ ಮಣಿಪುರಿ ನಾಟಕಗಳ ಟಿಕೆಟ್‌ಗೂ ಬೇಡಿಕೆ ಹೆಚ್ಚಾಗಿದೆ.
‘ಇವ ನಮ್ಮವ ಇವ ನಮ್ಮವ’ ಪರಿಕಲ್ಪನೆ ಅಡಿ ಮಾ.6 ರಿಂದ 11 ರವರೆಗೆ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ- 2024’ ಆಯೋಜಿಸಲಾಗುತ್ತಿದ್ದು, ರಂಗಾಯಣದ ಅಂಗಳದಲ್ಲಿ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ವೇದಿಕೆಗಳ ವಿನ್ಯಾಸ, ಆವರಣ ಸ್ವಚ್ಛತಾ ಕಾರ್ಯ, ಮಳಿಗೆಗಳ ನಿರ್ಮಾಣ ಸೇರಿದಂತೆ ಸಕಲ ಕೆಲಸ ನಡೆಯುತ್ತಿವೆ.ನಿರ್ಮಲಾ ಮಠಪತಿ, ರಂಗಾಯಣದ ಉಪ ನಿರ್ದೇಶಕಿ.