

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಆಗಾಗ ನಡೆಯುತ್ತಿರುವ ಕೋಮು ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆರಂಭಿಸಿರುವ ವಿಶೇಷ ಕಾರ್ಯಪಡೆಯನ್ನು ಜೂ.13ರಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉದ್ಘಾಟಿಸುವರು.
ಮಂಗಳೂರಿನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬೆಳಗ್ಗೆ 9 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ.
ರಾಜ್ಯದ ನಕ್ಸಲ್ ನಿಗ್ರಹ ಪಡೆ (ಎಎನ್‌ಎ್) ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ದರ್ಜೆಯ 656 ಹುದ್ದೆಗಳಲ್ಲಿ 248 ಹುದ್ದೆಗಳನ್ನು ಬೇರ್ಪಡಿಸಿ, ವಿಶೇಷ ಕಾರ್ಯಪಡೆಯನ್ನು ಸ್ಥಾಪಿಸಲಾಗಿದೆ. ಕೇಂದ್ರಸ್ಥಾನ ಮಂಗಳೂರಿನಲ್ಲಿ ಇರಲಿದ್ದು, ಉಡುಪಿ ಜಿಲ್ಲೆ, ಶಿವಮೊಗ್ಗ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದು ಕಾರ್ಯಾಚರಿಸಲಿದೆ.
ಡಿಐಜಿಪಿ ಹುದ್ದೆ-1, ಡಿವೈಎಸ್‌ಪಿ (ಸಿವಿಲ್)-1, ಸಹಾಯಕ ಕಮಾಂಡೆಂಟ್-1, ಪಿಐ/ ಆರ್‌ಪಿಐ-4, ಪಿಎಸ್‌ಐ/ಆರ್‌ಎಸ್‌ಐ/ಎಸ್‌ಐ-16, ಸಿಎಚ್‌ಸಿ -60, ಸಿಪಿಸಿ/ಎಪಿಸಿ-150 ಮತ್ತು ಅನುಯಾಯಿ -15 ಸೇರಿ 248 ಹುದ್ದೆಗಳಿವೆ.
ವಿಶೇಷ ಕಾರ್ಯಪಡೆ ಮಂಗಳೂರು ಕೇಂದ್ರವಾಗಿ ಕಾರ್ಯಾಚರಿಸಲಿದ್ದು, ಕೇಂದ್ರ ಸ್ಥಾನದಲ್ಲಿ 15 ಮಂದಿಯ ತಂಡ ಕಾರ್ಯಾಚರಿಸಲಿದೆ. ಇದರಲ್ಲಿ ಡಿಐಜಿಪಿ ಹುದ್ದೆ-1, ಡಿವೈಎಸ್‌ಪಿ (ಸಿವಿಲ್)-1, ಸಹಾಯಕ ಕಮಾಂಡೆಂಟ್-1, ಪಿಐ/ಆರ್‌ಪಿಐ-1, ಪಿಎಸ್‌ಐ/ ಆರ್‌ಎಸ್‌ಐ/ಎಸ್‌ಐ-1, ಸಿಎಚ್‌ಸಿ -3, ಸಿಪಿಸಿ/ಎಪಿಸಿ-6 ಮಂದಿ ಇರಲಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಶಿವಮೊಗ್ಗ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಪಿಐ/ಆರ್‌ಪಿಐ-1, ಪಿಎಸ್‌ಐ/ಆರ್‌ಎಸ್‌ಐ/ಎಸ್‌ಐ-5, ಸಿಎಚ್‌ಸಿ -19, ಸಿಪಿಸಿ/ಎಪಿಸಿ-48 ಮತ್ತು ಅನುಯಾಯಿ 5 ಮಂದಿ ಸೇರಿ 78 ಮಂದಿ ಕಾರ್ಯಾಚರಿಸಲಿದ್ದಾರೆ. ಉಡುಪಿ ಜಿಲ್ಲೆ ತಾತ್ಕಾಲಿಕವಾಗಿ ಮಂಗಳೂರು ನಗರ ವ್ಯಾಪ್ತಿಯ ಅಧೀನದಲ್ಲಿ ಬರಲಿದೆ. ಮಂಗಳೂರು ನಗರ ಪೊಲೀಸ್ ಮೈದಾನದಲ್ಲಿ ಕವಾಯತು ನಡೆಸಲಾಗಿದೆ.
ವಿಶೇಷ ಕಾರ್ಯಪಡೆಯ ಮುಖ್ಯಸ್ಥರಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರೇ ಕಾರ್ಯಾಚರಿಸಲಿದ್ದಾರೆ. ಡಿವೈಎಸ್‌ಪಿ ಸ್ಥಾನಕ್ಕೆ ಮಂಗಳೂರಿನಲ್ಲಿ ಈ ಹಿಂದೆಯೂ ಕೆಲಸ ಮಾಡಿ ಅನುಭವ ಇರುವ ಕೆ.ಯು.ಬೆಳ್ಳಿಯಪ್ಪ ಅವರನ್ನು ನಿಯೋಜನೆ ಮಾಡಲಾಗಿದೆ.
ಮೂರು ಜಿಲ್ಲೆಗಳ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಈ ಕಾರ್ಯಪಡೆ ವಿಶೇಷ ನಿಗಾ ವಹಿಸಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದಾಗ ತಕ್ಷಣ ಹಾಜರಾಗಲಿದೆ. ತಮ್ಮದೇ ಆದ ಗುಪ್ತಚರ ದಳವನ್ನೂ ಈ ಕಾರ್ಯಪಡೆ ಹೊಂದುವ ಮೂಲದ ಸಂಭಾವ್ಯ ಕೋಮು ಹಿಂಸಾಚಾರ, ಗಲಭೆಯಂತಹ ಸಂಚುಗಳನ್ನು ವಿಲಗೊಳಿಸಲಿದೆ. ದ್ವೇಷದ ಭಾಷಣ, ಮೂಲಭೂತವಾದಿಗಳ ಮೇಲೆ ನಿಗಾ, ಜಾಲತಾಣಗಳ ಮೇಲೆ ಸೂಕ್ಷ್ಮ ನಿಗಾ ಇಡುವ ಮೂಲಕ ಕೋಮುದ್ವೇಷ ಹರಡದಂತೆ ಎಚ್ಚರ ವಹಿಸಲಿದೆ.