108 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಗೆ ಸಿದ್ದತೆ : ಡಾ.ಕುಮಾರ್

Vyaksin Dryrun
Published on

ಚಿಕ್ಕಮಗಳೂರು: ಜಿಲ್ಲೆಯಲ್ಲಿ 10 ಸಾವಿರ ಪ್ರಾಥಮಿಕ ಆರೋಗ್ಯ ಸಿಬ್ಬಂದಿ ನೋಂದಣಿ ಮಾಡಿಕೊಂಡಿದ್ದು ಲಸಿಕೆ ಹಾಕಲು 108 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಕುಮಾರ್ ಹೇಳಿದರು.
ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಕರೊನಾ ಲಸಿಕೆ ಅಣಕು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

6 ಸ್ಥಳಗಳಲ್ಲಿ ಮಾದರಿ ಲಸಿಕಾ ಕೇಂದ್ರ:
ಜಿಲ್ಲೆಯ 6 ಸ್ಥಳಗಳಲ್ಲಿ ಮಾದರಿ ಲಸಿಕಾ ಕೇಂದ್ರವನ್ನು ಮಾಡಲಾಗಿದ್ದು ಕರೊನಾ ಲಸಿಕೆ ಬರುವ ಪೂರ್ವದಲ್ಲಿ ಯಾವೆಲ್ಲ ಸಿದ್ಧತೆ ಮಾಡಿಕೊಳ್ಳಬೇಕು, ಲಸಿಕೆ ಬಂದ ನಂತರ ಯಾವುದೆ ಲೋಪದೋಷವಿಲ್ಲದಂತೆ ಸಮರ್ಪಕ ಮತ್ತು ಸಮರ್ಥವಾಗಿ ಕಾರ್ಯಕ್ರಮ ರೂಪಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯರ ತಂಡ ಹೇಗೆ ಸಿದ್ದತೆಯಲ್ಲಿ ತೊಡಗಬೇಕೆಂಬ ಹಿನ್ನೆಲೆಯಲ್ಲಿ ಮಾದರಿ ಲಸಿಕಾ ಕೇಂದ್ರ ತೆರೆಯಲಾಗಿದೆ ಎಂದರು.

ಈ ವಾರದಲ್ಲಿ ಲಸಿಕೆ ಬರುವ ನಿರೀಕ್ಷೆಯಿದ್ದು ಬಂದ ನಂತರ ನಿತ್ಯ 100 ಜನರಂತೆ 1ರಿಂದ 2 ದಿನದಲ್ಲಿ ಸಂಪೂರ್ಣ 10 ಸಾವಿರ ಮಂದಿಗೆ ಲಸಿಕೆ ಹಾಕಲು ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ತಂತ್ರಾಂಶ ಬಳಸಿ ಲಸಿಕೆ:
ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಕೆ.ಭರತ್‍ಕುಮಾರ್ ಮಾತನಾಡಿ, ಜಿಲ್ಲಾ ಆಸ್ಪತ್ರೆ, ನಗರ ಆರೋಗ್ಯ ಕೇಂದ್ರ, ಹೋಲಿಕ್ರಾಸ್ ಆಸ್ಪತ್ರೆ, ಮೂಡಿಗೆರೆ ತಾಲೂಕು ಆಸ್ಪತ್ರೆ, ಅಜ್ಜಂಪುರ ಸಮುದಾಯ ಆರೋಗ್ಯ ಕೇಂದ್ರ, ಹುಲಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡ್ರೈ ರನ್ ಮಾಡಲಾಗಿದೆ. ತಂತ್ರಾಂಶ ಬಳಸಿ ಲಸಿಕೆ ನೀಡುವ ಕೆಲಸ ಮಾಡಲಾಗುತ್ತದೆ. 10,124 ಜನ ಆರೋಗ್ಯ ಇಲಾಖೆ ಸಿಬ್ಬಂದಿ ನೋಂದಣಿಯಾಗಿದ್ದು ಆನ್‍ಲೈನ್‍ನಲ್ಲಿ ಮಾಹಿತಿ ಪಡೆದು ಪ್ರತಿ ಸೆಂಟರ್ ನಲ್ಲಿ 25 ಮಂದಿಗೆ ಲಸಿಕೆ ಪ್ರಾತ್ಯಕ್ಷಿಕೆ ಮಾಡಲಾಗಿದೆ. ನಮ್ಮ ತಂತ್ರಾಂಶದಲ್ಲಿ ಅವರ ಆಧಾರ್‍ಕಾರ್ಡ್ ತಾಳೆಯಾದಲ್ಲಿ ಮಾತ್ರ ಲಸಿಕೆ ನೀಡಿ ನಂತರವೂ ಅವರ ಮೊಬೈಲ್‍ಗೆ ಎಸ್‍ಎಂಎಸ್ ಮಾಡಲಾಗುತ್ತದೆ ಎಂದರು.

ಡಿಎಚ್‍ಒ ಡಾ.ಎಸ್.ಎನ್.ಉಮೇಶ್, ಜಿಲ್ಲಾ ಸರ್ಜನ್ ಡಾ.ಸಿ.ಮೋಹನ್‍ಕುಮಾರ್, ಡಿಸಿಎಂಒ ಡಾ.ಲೋಕೇಶ್, ಡಾ.ಕಲ್ಪನಾ, ಡಾ.ನಾಗೇಂದ್ರ, ಡಾ.ಗಂಗಾಧರ್, ನಿವಾಸಿ ವೈದ್ಯಾಧಿಕಾರಿ ಡಾ.ಅಶ್ವತ್ಥ ಬಾಬು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net