

ಕುಶಾಲನಗರ:
ಸ್ವಾತಂತ್ರ‍್ಯಾನAತರದ ಏಳು ದಶಕಗಳಿಂದಲೂ ಅರಣ್ಯವಾಸಿ ಗಿರಿಜನ ಕುಟುಂಬಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನ್ಯಾಯಯುತವಾಗಿ ದೊರಕಬೇಕಾದ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿರುವ ಕಾರಣ ಜಿಲ್ಲೆಯ ಗಿರಿಜನ ನಿವಾಸಿಗಳು ಒಗ್ಗೂಡಿ ಬೃಹತ್ ಹೋರಾಟ ರೂಪಿಸುವ ಮೂಲಕ ಹಕ್ಕುಗಳನ್ನು ಪಡೆದುಕೊಳ್ಳಬೇಕೆಂದು ಗಿರಿಜನ ಮುಖಂಡ ಮಾವಿನಹಳ್ಳ ಕಾಳಿಂಗ ಮತ್ತು ಜಿಪಂ ಮಾಜಿ ಸದಸ್ಯ ಆರ್.ಕೆ. ಚಂದ್ರು ನಿವಾಸಿಗಳಿಗೆ ಕರೆಕೊಟ್ಟರು. ಮಂಗಳವಾರ ಹೊಸಪಟ್ಟಣ ಸಮುದಾಯ ಭವನದಲ್ಲಿ ಜಿಲ್ಲೆಯ ವಿವಿಧ ಗಿರಿಜನ ನಿವಾಸಿಗಳ ಉಪಸ್ಥಿತಿಯಲ್ಲಿ ನಡೆದ ಹೋರಾಟದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪದವಿ ಹಾಗೂ ಉನ್ನತ ಶಿಕ್ಷಣ ವ್ಯಾಸಂಗ ಮಾಡಿದ ಗಿರಿಜನರ ಮಕ್ಕಳಿಗೆ ಸರ್ಕಾರಗಳು ಸರ್ಕಾರಿ ಹುದ್ದೆ ನೀಡಿಲ್ಲ. ಕಸ್ತೂರಿ ರಂಗನ್ ವರದಿ ಜಾರಿ ಹೆಸರಲ್ಲಿ ಗಿರಿಜನರನ್ನು ಒಕ್ಕಲೆಬ್ಬಿಸುವ ಹುನ್ನಾರ ನಿಲ್ಲಬೇಕು.
ಅರಣ್ಯ ಹಕ್ಕುಗಳನ್ನು ಪಡೆಯುವಲ್ಲಿ ಅರಣ್ಯಾಧಿಕಾರಿಗಳು ನಿರಂತರವಾಗಿ ಗಿರಿಜನರ ಮೇಲೆ ಮಾಡುತ್ತಿರುವ ಶೋಷಣೆ ನಿಲ್ಲಬೇಕು. ಈಗಾಗಲೇ ರಚಿಸಿರುವ ಅರಣ್ಯ ಹಕ್ಕು ಸಮಿತಿಗಳು ನಿಷ್ಪç್ರಯೋಜಕವಾಗಿವೆ.
ಅರಣ್ಯ ಸಮಿತಿ ಸಭೆಗಳನ್ನು ಆಯಾಯ ಹಾಡಿಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟರು.
ಸರ್ಕಾರಗಳನ್ನು ಬಡಿದೆಬ್ಬಿಸಲು ಉಗ್ರ ಸ್ವರೂಪದ ಹೋರಾಟ ರೂಪಿಸುವ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆಗಳು ನಡೆದವು. ಪಿರಿಯಾಪಟ್ಟಣದಲ್ಲಿ ಇದ್ದ ರಾಜ್ಯ ಮಟ್ಟದ ಜೇನು ಕುರುಬ ಗಿರಿಜನರ ಕಚೇರಿ ಮಾದರಿಯಲ್ಲಿ ಕೊಡಗು ಜಿಲ್ಲೆಯ ಜೇನು ಕುರುಬರು ಹಾಗೂ ಆದಿವಾಸಿಗಳ ಕಚೇರಿಯನ್ನು ಕುಶಾಲನಗರದಲ್ಲಿ ತೆರೆಯಬೇಕು. ಸರ್ಕಾರದಿಂದ ಗಿರಿಜನರಿಗೆ ಯೋಜಿಸುವ ಯೋಜನೆಗಳು ನೇರವಾಗಿ ಗಿರಿಜನ ಹಾಡಿಗಳಿಗೆ ತಲುಪಬೇಕು. ಗಿರಿಜನರ ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರ ನಿಯೋಜಿಸುವ ಅಧಿಕಾರಿಗಳು ಗಿರಿಜನರ ಹಾಡಿಗಳ ಬಳಿ ಧಾವಿಸಿ ಗಿರಿಜನರ ಕಷ್ಟ ಸುಖ ಆಲಿಸುತ್ತಿಲ್ಲ. ಅಹವಾಲುಗಳನ್ನು ಸಮರ್ಪಕವಾಗಿ ಅರಿಯುತ್ತಿಲ್ಲ. ಇವತ್ತಿಗೂ ಕೂಡ ಸಮಾಜ ಕಲ್ಯಾಣ ಹಾಗೂ ಗಿರಿಜನ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು ಗಿರಿಜನರನ್ನು ಅವರ ಗುಲಾಮರಾಗಿಯೇ ಕಾಣುವಂತಹ ಸ್ಥಿತಿ ಇದೆ ಎಂಬುದಕ್ಕೆ ಅವರ ಬೇಜವಬ್ದಾರಿಯ ವರ್ತನೆಗಳೇ ಕಾರಣವಾಗಿವೆ ಎಂದು ಗಿರಿಜನ ಮುಖಂಡ ಆರ್.ಕೆ. ಚಂದ್ರು ಸಭೆಯಲ್ಲಿ ಆಕ್ರೋಶ ಹೊರಹಾಕಿದರು.
ಗಿರಿಜನ ವಾಸಿಗಳು ಪ್ರತೀ ಹಾಡಿಗಳಲ್ಲೂ ಸಂಘಟಿತರಾಗಬೇಕು. ಹಾಡಿಗಳಲ್ಲಿ ಇರುವ ಪ್ಲಾಸ್ಟಿಕ್ ಹೊದಿಕೆಗಳ ಗುಡಿಸಲುಗಳು ಮೊದಲು ನಿರ್ಮೂಲನೆ ಆಗಬೇಕಿದೆ. ಫಲಾನುಭವಿ ಗಿರಿಜನರಿಗೆ ಹಕ್ಕುಪತ್ರಗಳು ಸೇರಿದಂತೆ ವಿವಿಧ ಮೂಲ ಸೌಕರ್ಯಗಳನ್ನು ಸರ್ಕಾರ ಕೂಡಲೇ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಜೇನು ಕುರುಬರ ಅಭಿವೃದ್ಧಿ ಸಂಘದ ಕೊಡಗು ಜಿಲ್ಲಾ ಉಸ್ತುವಾರಿ ಮಾವಿನಹಳ್ಳದ ಕಾಳಿಂಗ ಆಗ್ರಹಿಸಿದರು.
ಸಭೆಯಲ್ಲಿ ಮೀನುಕೊಲ್ಲಿ ಗಿರಿಜನ ಹಾಡಿಯ ತಮ್ಮಯ್ಯ, ಸಜ್ಜಳ್ಳಿ ಹಾಡಿಯ ವಿಶ್ವ, ಯಡವನಾಡು ನಂಜಣ್ಣ, ರವಿ, ಬಾಳೆಗುಂಡಿಯ ಸರಸ್ವತಿ, ತ್ಯಾಗತ್ತೂರಿನ ಭಾಗೀರಥಿ, ಮಾವಿನಹಳ್ಳದ ಜೆ.ಆರ್.ಗೋಪಾಲ, ಪಾಪಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.