

ಸುನಿಲ್ ಪೊನ್ನೇಟಿ ಮಡಿಕೇರಿ:
ಜಿಲ್ಲೆಯಲ್ಲಿ ಈಗಾಗಲೇ ಮಳೆಗಾಲದ ವಾತಾವರಣ ಕಾಣಿಸಿಕೊಂಡಿದ್ದು, ಈ ಬಾರಿಯ ಮುಂಗಾರು ಕೂಡ ಆಶಾದಾಯಕವಾಗಿರುವ ಮುನ್ಸೂಚನೆ ಸಿಕ್ಕಿರುವುದರಿಂದ ರೈತರಲ್ಲಿ ದೊಡ್ಡ ನಿರೀಕ್ಷೆ ಮನೆ ಮಾಡಿದೆ. ಇದಕ್ಕೆ ಪೂರಕವಾಗಿ ಕೃಷಿ ಇಲಾಖೆಯೂ ಈ ಕೃಷಿ ಹಂಗಾಮಿಗೆ ಭರದ ಸಿದ್ಧತೆ ನಡೆಸಿದ್ದು, ಬಿತ್ತನೆ ಬೀಜ, ರಸಗೊಬ್ಬರಕ್ಕೆ ಸಂಬಂಧಿಸಿದಂತೆ ರೈತರ ಬೇಡಿಕೆಗಳನ್ನು ಪೂರೈಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಕೊಡಗಿನಲ್ಲಿ ಈ ವರ್ಷವೂ ಒಟ್ಟು ೩೨,೫೭೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದ್ದು, ೧,೯೧೩ ಕ್ವಿಂಟಾಲ್ ಬಿತ್ತನೆ ಬೀಜಕ್ಕಾಗಿ ಬೇಡಿಕೆ ಸಲ್ಲಿಸಲಾಗಿದೆ.
ಮಲೆನಾಡಿನ ಮಡಿಲಲ್ಲಿರುವ ಪುಟ್ಟ ಜಿಲ್ಲೆ ಕೊಡಗು ಪ್ರವಾಸಿ ಕೇಂದ್ರಿತವಾಗಿ ಅಭಿವೃದ್ಧಿ ಹೊಂದುತ್ತಿದ್ದರೂ ಇಲ್ಲಿಯ ಮೂಲ ಕಸುಬು ವ್ಯವಸಾಯವೇ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಭತ್ತದ ಗದ್ದೆಗಳು ಕಾಫಿ ಸೇರಿದಂತೆ ವಾಣಿಜ್ಯ ಬೆಳೆಗಳನ್ನು ಬೆಳೆಯುವ ತೋಟಗಳಾಗಿ ಪರಿವರ್ತನೆಗೊಂಡಿವೆ. ಹಲವು ಕಡೆಗಳಲ್ಲಿ ಕೃಷಿ ಭೂಮಿ ವಾಣಿಜ್ಯ ಉದ್ದೇಶಕ್ಕಾಗಿ ಪರಿವರ್ತನೆಗೊಂಡು ಲೇಔಟ್, ರೆಸಾರ್ಟ್ ಸೇರಿದಂತೆ ಕಾಂಕ್ರಿಟ್ ಕಾಡು ಕೂಡ ಬೆಳೆದು ನಿಂತಿದೆ. ಇವುಗಳ ಮಧ್ಯೆಯೂ ಕೃಷಿಕರು ತಮ್ಮ ಅಸ್ತಿತ್ವ ಉಳಿಸಿಕೊಂಡಿದ್ದು, ಮುಂಗಾರಿನ ಸೂಚನೆ ಸಿಗುತ್ತಿದ್ದಂತೆಯೇ ತಮ್ಮ ಕೆಲಸ ಶುರು ಮಾಡಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ಭತ್ತ ಮತ್ತು ಮುಸುಕಿನ ಜೋಳ ಬೆಳೆಯಲಾಗುತ್ತದೆ. ಕುಶಾಲನಗರ ಒಳಗೊಂಡು ಸೋಮವಾರಪೇಟೆ ತಾಲೂಕಿನ ಅಲ್ಲಲ್ಲಿ ರಾಗಿಯನ್ನೂ ಬೆಳೆಯುತ್ತಾರೆ. ಕಳೆದ ಒಂದು ವಾರದಿಂದ ಉತ್ತಮ ಮಳೆ ಆಗುತ್ತಿದ್ದು, ಬಿಸಿಲಿನ ಕಾವಿಗೆ ಒಣಗಿದ್ದ ಭೂಮಿ ಒಂದು ಹದಕ್ಕೆ ಬರುತ್ತಿದೆ. ಈ ಮುಂಗಾರಿನಲ್ಲಿ ಮಳೆಯ ಪ್ರಮಾಣ ವಾಡಿಕೆಗಿಂತ ಸ್ವಲ್ಪ ಜಾಸ್ತಿ ಆಗಬಹುದು ಎನ್ನುವ ಹವಾಮಾನ ತಜ್ಞರ ಮುನ್ಸೂಚನೆಯೂ ರೈತರ ಉತ್ಸಾಹ ಇಮ್ಮಡಿಗೊಳಿಸಿದೆ. ಬರ ಇದ್ದ ಕಾರಣ ಕಳೆದ ವರ್ಷ ಆಗಿದ್ದ ನಷ್ಟವನ್ನು ತುಂಬಿಕೊಳ್ಳುವ ನಿಟ್ಟಿನಲ್ಲಿ ಈ ಮುಂಗಾರು ಹಂಗಾಮಿನಲ್ಲಿ ಲಾಭದಾಯಕ ಒಕ್ಕಲುತನ ಮಾಡುವ ಸಿದ್ಧತೆ ನಡೆಸಲಾಗಿದೆ.
ಕೃಷಿ ಇಲಾಖೆಯೂ ಈ ನಿಟ್ಟಿನಲ್ಲಿ ಅನ್ನದಾತರ ಆಶಯಕ್ಕೆ ಪೂರಕವಾಗಿ ಸ್ಪಂದಿಸುತ್ತಿದೆ. ಹವಾಮಾನ ತಜ್ಞರ ಆಶಾದಾಯಕ ಮುನ್ಸೂಚನೆ ಹಿನ್ನೆಲೆಯಲ್ಲಿ ಮುಂಗಾರು ಹಂಗಾಮಿಗೆ ಭರದ ಸಿದ್ಧತೆ ನಡೆಸಲಾಗುತ್ತಿದೆ. ಭತ್ತ ಬೆಳೆಯುವ ರೈತರ ಬಿತ್ತನೆ ಬೀಜದ ಬೇಡಿಕೆ ಈಡೇರಿಸುವ ಸಲುವಾಗಿ ಒಟ್ಟು ೧,೮೪೪ ಕ್ವಿಂಟಾಲ್ ವಿವಿಧ ತಳಿಯ ಭತ್ತದ ಬೀಜಕ್ಕಾಗಿ ರಾಜ್ಯ ಬೀಜ ನಿಗಮ, ಮತ್ತು ರಾಷ್ಟ್ರೀಯ ಬೀಜ ನಿಗಮಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಐಆರ್ ೬೪, ತುಂಗಾ, ತನು, ಉಮಾ, ಆರ್‌ಎನ್‌ಆರ್‌೧೪೦೫೮, ಅಖಿರಾ ತಳಿಯ ಭತ್ತದ ಬೀಜಗಳನ್ನು ರೈತರಿಗೆ ತರಿಸಿಕೊಡಲಾಗುತ್ತಿದೆ. ಇದರ ಜತೆಗೆ ಖಾಸಗಿ ಕಂಪೆನಿಗಳಿಂದ ೨೭.೩೪ ಕ್ವಿಂಟಾಲ್ ಹೈಬ್ರಿಡ್ ತಳಿಯ ಭತ್ತದ ಬೀಜಗಳನ್ನು ಪೂರೈಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಮುಸುಕಿನ ಜೋಳವನ್ನೂ ಬೆಳೆಯಲಾಗುತ್ತದೆ. ಹಾಗಾಗಿ ಆಸಕ್ತ ರೈತರಿಗೆ ೪೧.೪೭ ಕ್ವಿಂಟಾಲ್ ಮುಸುಕಿನ ಜೋಳದ ಬಿತ್ತನೆ ಬೀಜ ವಿತರಿಸಲೂ ಕೃಷಿ ಇಲಾಖೆ ಸಿದ್ಧತೆ ನಡೆಸಿದೆ. ಬೀಜ ನಿಗಮಗಳಿಂದ ಮಾತ್ರವಲ್ಲದೆ ಖಾಸಗಿ ಸಂಸ್ಥೆಗಳಿಂದಲೂ ಹೈಬ್ರಿಡ್ ಮುಸುಕಿನ ಜೋಳದ ಬೀಜ ತರಿಸಲಾಗುತ್ತದೆ. ಈ ತಿಂಗಳಾಂತ್ಯಕ್ಕೆ ಭತ್ತ ಮತ್ತು ಮುಸುಕಿನ ಜೋಳದ ಬಿತ್ತನೆ ಬೀಜ ಕೃಷಿ ಇಲಾಖೆ ಕೈ ಸೇರಲಿದ್ದು, ಕೂಡಲೇ ಹೋಬಳಿ ಮಟ್ಟದಲ್ಲಿ ಇರುವ ರೈತ ಸಂಪರ್ಕ ಕೇಂದ್ರಗಳ ಮೂಲಕ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ಪೂರೈಸಲಾಗುವುದು.
ಬಿತ್ತನೆ ಬೀಜದ ಜತೆಗೆ ರೈತರಿಗೆ ರಸಗೊಬ್ಬರದ ಅಗತ್ಯವೂ ಇದ್ದು, ಯೂರಿಯಾ, ಡಿಎಪಿ, ಎಂಒಪಿ, ಕಾಂಪ್ಲೆಕ್ಸ್, ಎಸ್‌ಎಸ್‌ಪಿ ಸೇರಿದಂತೆ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಖಾರಿಫ್ ಬೆಳೆಗೆ ೮೦,೯೪೬ ಟನ್‌ಗಳಷ್ಟು ರಸಗೊಬ್ಬರಕ್ಕೆ ಬೇಡಿಕೆ ಇದೆ. ಈ ಬೇಡಿಕೆಯಷ್ಟು ರಸಗೊಬ್ಬರ ಸಂಗ್ರಹಿಸಿ ಇಟ್ಟುಕೊಳ್ಳುವತ್ತ ಕೃಷಿ ಇಲಾಖೆ ಆದ್ಯತೆ ಕೊಟ್ಟಿದೆ. ಜಿಲ್ಲೆಯಲ್ಲಿ ಬೇಡಿಕೆಯಿರುವ ರಸಗೊಬ್ಬರಗಳ ಬಗ್ಗೆ ಕೃಷಿ ಇಲಾಖೆ ಈಗಾಗಲೇ ಮಾಹಿತಿ ಸಂಗ್ರಹಿಸಿದ್ದು, ರೈತರಿಗೆ ಅನಾನೂಕೂಲ ಆಗದ ರೀತಿಯಲ್ಲಿ ರಸಗೊಬ್ಬರ ಪೂರೈಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಕಳೆದ ವರ್ಷ ಒಟ್ಟು ೬೨,೮೦೯.೬ ಟನ್‌ಗಳಷ್ಟು ರಸಗೊಬ್ಬರ ವಿತರಣೆ ಮಾಡಲಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ ೬ ಸಾವಿರ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಆದರೆ ಬರದ ಕಾರಣ ಕಳೆದ ವರ್ಷ ೩,೦೫೦ ಹೆಕ್ಟೇರ್ ಪ್ರದೇಶದಲ್ಲಷ್ಟೇ ಬಿತ್ತನೆ ಆಗಿತ್ತು. ಕುಶಾಲನಗರ ತಾಲೂಕು ಒಳಗೊಂಡಂತೆ ಸೋಮವಾರಪೇಟೆ ತಾಲೂಕಿನ ಮಳೆಯಾಶ್ರಿತ ೭,೧೦೦ ಹೆಕ್ಟೇರ್ ಪ್ರದೇಶ ಮತ್ತು ೨,೪೦೦ ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ನಿಗದಿಪಡಿಸಲಾಗಿದೆ. ಆದರೆ ಕಳೆದ ಮುಂಗಾರಿನಲ್ಲಿ ಇಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ೨,೪೦೦ ಹೆಕ್ಟೇರ್ ಮತ್ತು ನೀರಾವರಿ ಪ್ರದೇಶದಲ್ಲಿ ೨,೧೫೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿತ್ತು. ಪೊನ್ನಂಪೇಟೆ ತಾಲೂಕು ಒಳಗೊಂಡಂತೆ ವಿರಾಜಪೇಟೆ ತಾಲೂಕಿನಲ್ಲಿ ಈ ವರ್ಷ ೧೩,೫೦೦ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಇಟ್ಟುಕೊಳ್ಳಲಾಗಿದೆ. ಆದರೆ ಕಳೆದ ಮುಂಗಾರಿನಲ್ಲಿ ಈ ಭಾಗದಲ್ಲಿ ೮,೯೦೭ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿತ್ತು.
ಕುಶಾಲನಗರ ತಾಲೂಕು ಒಳಗೊಂಡಂತೆ ಸೋಮವಾರಪೇಟೆ ತಾಲೂಕಿನಲ್ಲಿ ಈ ಮಂಗಾರಿನಲ್ಲಿ ೩,೫೦೦ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಮತ್ತು ೭೦ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯುವ ಗುರಿ ಇಟ್ಟುಕೊಳ್ಳಲಾಗಿದೆ. ಕಳೆದ ವರ್ಷ ಇಲ್ಲಿ ೨,೯೩೬ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆದಿದ್ದರೆ, ರಾಗಿ ಬೆಳೆಯಲು ಸಾಧ್ಯವೇ ಆಗಿರಲಿಲ್ಲ. ಹಾಗಾಗಿ ಕಳೆದ ಮುಂಗಾರಿನಲ್ಲಿ ಮಡಿಕೇರಿ ತಾಲೂಕಿನಲ್ಲಿ ಶೇ. ೫೦.೮, ಸೋಮವಾರಪೇಟೆ ತಾಲೂಕಿನಲ್ಲಿ ಶೇ. ೭೭.೫೧ ಹಾಗೂ ವಿರಾಜಪೇಟೆ ತಾಲೂಕಿನಲ್ಲಿ ಶೇ. ೬೫.೯೮ ಸೇರಿದಂತೆ ಜಿಲ್ಲೆಯಲ್ಲಿ ಶೇ. ೬೭.೮೧೭ರಷ್ಟು ಮಾತ್ರ ಬಿತ್ತನೆಯ ಗುರಿ ಸಾಧಿಸಲಾಗಿತ್ತು.
ಕೊಡಗಿನಲ್ಲಿ ಭತ್ತದ ಬೆಳೆಗೆ ಬೆಂಕಿ ರೋಗದ ಬಾಧೆ ಹೆಚ್ಚಾಗಿ ಕಂಡುಬರುವ ಸಾಧ್ಯತೆ ಇರುವುದರಿಂದ ರೈತರು ಬಿತ್ತನೆ ಅವಧಿಯಲ್ಲೇ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಬಿತ್ತನೆಗೆ ಮೊದಲು ಕಾರ್ಬನ್‌ಡೈಜಿಂ ಶಿಲೀಂಧ್ರ ನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದು ಸೂಕ್ತವಾಗಿದೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು. ದೀರ್ಘಾವಧಿ ತಳಿಗಳಾದ ಇಂಟಾನ್, ತುಂಗಾ, ಅತಿರಾ, ಬಿ.ಆರ್. ೨೬೫೫ ತಳಿ ಭತ್ತಗಳನ್ನು ಜೂನ್ ೧೦ ರಿಂದ ೨೦ ರೊಳಗೆ ಬಿತ್ತನೆ ಮಾಡಬಹುದಾಗಿದೆ. ಮಧ್ಯಮಾವಧಿ ತಳಿಗಳಾದ ಐ.ಇ.ಟಿ.೭೧೯೧, ಜಯ, ಎಂ.ಟಿ.ಯು ೧೦೦೧ ತಳಿಗಳನ್ನು ಜೂನ್ ಮೂರನೇ ಅಥವಾ ೪ನೇ ವಾರದಲ್ಲಿ ಬಿತ್ತನೆ ಮಾಡಬಹದು. ಅಲ್ಪಾವಧಿ ತಳಿಗಳಾದ ಐ.ಆರ್.೬೪, ಹೈಬ್ರೀಡ್ ಭತ್ತಗಳನ್ನು ಜುಲೈ ಮೊದಲನೇ ವಾರದ ನಂತರ ಬಿತ್ತನೆಗೆ ಬಳಸುವುದು ಸೂಕ್ತವಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಜಿಲ್ಲೆಗೆ ಬೇಕಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ದಾಸ್ತಾನು ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದೆ. ಕೊಡಗಿನಲ್ಲಿ ಈ ವರ್ಷವೂ ಒಟ್ಟು ೩೨,೫೭೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದ್ದು, ಭತ್ತ ಮತ್ತು ಮುಸುಕಿನ ಜೋಳ ಸೇರಿ ೧,೯೧೩ ಕ್ವಿಂಟಾಲ್ ಬಿತ್ತನೆ ಬೀಜವನ್ನು ಸಹಾಯಧನದ ಅಡಿಯಲ್ಲಿ ರೈತರಿಗೆ ವಿತರಿಸಲಾಗುವುದು. ಜಿಲ್ಲೆಯ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಇರುವ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಬಿತ್ತನೆ ಬೀಜ ಪೂರೈಸಲಾಗುವುದು. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಸೋಮಸುಂದರ, ಕೃಷಿ ಇಲಾಖೆ ಜಂಟಿ ನಿರ್ದೇಶಕ