

ಮೂಡಿಗೆರೆ: ಅಡಕೆ ಸಿಪ್ಪೆಯನ್ನು ವೈಜ್ಞಾನಿಕವಾಗಿ ಕಾಂಪೋಸ್ಟ್ ಮಾಡಿ ಉತ್ತಮ ಗೊಬ್ಬರ ತಯಾರಿಸಬಹುದು. ಇದರಿಂದ ಜಮೀನಿನಲ್ಲಿ ರಾಸಾಯನಿಕ ರಹಿತವಾದ ಅತ್ಯುತ್ತಮ ಬೆಳೆ, ಬೆಳೆಯಲು ಸಾಧ್ಯ ಎಂದು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರ ವಿಭಾಗದ ವಿಜ್ಞಾನಿ ಡಾ.ಬಿ.ಜಿ.ಯಮುನಾ ಹೇಳಿದರು.
ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದನ್ನು ರಾಸಾಯನಿಕ ರಹಿತವಾದ ಉತ್ಪನ್ನಗಳ ಬಳಕೆಯಿಂದ ತಡೆಗಟ್ಟಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರ ವಿಭಾಗದ ವಿಜ್ಞಾನಿ ಡಾ.ಬಿ.ಜಿ.ಯಮುನಾ ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರ ಆಡಕೆ ಸಿಪ್ಪೆಯಿಂದ ಕಾಂಪೋಸ್ಟ್ ಗೊಬ್ಬರ ತಯಾರಿಕೆ, ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿ, ಅಡಕೆ ಮಲೆನಾಡು, ಕರಾವಳಿ ಮತ್ತು ಬಯಲುಸೀಮೆ ಪ್ರದೇಶದ ಪ್ರಮುಖ ಬೆಳೆಯಾಗಿದೆ. ಒಂದು ಎಕರೆ ಅಡಕೆ ತೋಟದಿಂದ 600 ರಿಂದ 700 ಕೆಜಿಯಷ್ಟು ಸಿಪ್ಪೆ, ಎರಡುವರೆ ಸಾವಿರದಿಂದ ಮೂರುವರೆ ಸಾವಿರ ಅಡಕೆ ಹಾಳೆ ಮತ್ತು ಸೋಗೆ ಎಲೆ, 130 ರಿಂದ 160 ಕೆಜಿ ಗೊನೆಯ ಒಣ ತ್ಯಾಜ್ಯ ಲಭ್ಯವಾಗುತ್ತದೆ. ಈ ತ್ಯಾಜ್ಯವನ್ನು ನಿರ್ವಹಿಸುವುದೆದೇ ಹಲವು ರೈತರಿಗೆ ಸವಾಲಾಗುತ್ತಿದೆ ಎಂದರು.
ಆಡಕೆಯಿಂದ ದೊರೆಯುವ ತ್ಯಾಜ್ಯವನ್ನು ಕಾಂಪೋಸ್ಟ್ ವಿಧಾನದ ಮೂಲಕ ಗೊಬ್ಬರವನ್ನಾಗಿ ತಮ್ಮದೆ ಜಮೀನಿನಲ್ಲಿ ಕಡಿಮೆ ಖರ್ಚಿನಲ್ಲಿ ಗೊಬ್ಬರ ತಯಾರಿಸಿಕೊಳ್ಳಬಹುದು. ಇದರಿಂದ ಅಡಕೆ ಸಿಪ್ಪೆಯನ್ನು ರಸ್ತೆ ಬದಿಯಲ್ಲಿ ಎಸೆದು ಒಣಗಿದ ನಂತರ ಬೆಂಕಿ ಕೊಡುವ ಸಮಸ್ಯೆ ತಪ್ಪಿದಂತಾಗುತ್ತದೆ. ವ್ಯವಹಾರಿಕವಾಗಿಯೂ ಅಡಕೆ ಬೆಳೆಯ ಒಣ ತ್ಯಾಜ್ಯವನ್ನು ಸಂಗ್ರಹಿಸಿ ಕಾಂಪೋಸ್ಟ್ ಗೊಬ್ಬರ ತಯಾರಿಸಿ ಮಾರಾಟ ಮಾಡಬಹುದು ಎಂದು ತಿಳಿಸಿದರು.
ಅಡಕೆ ತ್ಯಾಜ್ಯವನ್ನು ಬಳಸಿ ಕಾಂಪೋಸ್ಟ್ ಗೊಬ್ಬರ ತಯಾರಿಕೆಯ ವಿಧಾನವನ್ನು ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ಪರಿಚಯಿಸಲಾಯಿತು.
ಪ್ರಗತಿಪರ ರೈತ ದಿವಾಕರ್, ಮನು, ಬಿ.ಕೆ.ಪರಮೇಶ್ವರ್, ಎಂ.ಆರ್.ವಿಜಯ್, ಎಂ.ಡಿ.ರಕ್ಷಕ ರಾಮು ಇತರರಿದ್ದರು.