ಈಶ್ವರನ ಆರಾಧನೆಗೆ ಸಿದ್ಧತೆ

shivalinga
Published on

ಮೈಸೂರು: ಶಿವ ಶಿವ ಎಂದರೆ ಭಯವಿಲ್ಲ, ಶಿವ ನಾಮಕೆ ಸಾಟಿ ಬೇರಿಲ್ಲ… ಹೀಗೆ ಈಶ್ವರನ ಧ್ಯಾನದಲ್ಲಿ ಮುಳುಗಲು ಸಾಂಸ್ಕೃತಿಕ ನಗರಿಯ ಶಿವಭಕ್ತರು ಹಾಗೂ ಶಿವಾಲಯಗಳು ಸಜ್ಜಾಗುತ್ತಿವೆ.


ಮಹಾಶಿವರಾತ್ರಿ ಹಬ್ಬವನ್ನು ಶನಿವಾರ ಸಡಗರದಿಂದ ಆಚರಿಸಲು ನಗರದ ದೇವಾಲಯಗಳು, ಅದರಲ್ಲೂ ಶಿವ ದೇಗುಲಗಳು ಸಜ್ಜಾಗಿವೆ. ಅರಮನೆಯ ಪ್ರಸಿದ್ಧ ತ್ರಿನೇಶ್ವರ ದೇವಸ್ಥಾನ, ರಾಮಾನುಜ ರಸ್ತೆಯ 108 ಲಿಂಗಗಳ ದೇಗುಲ, ಕಾಮೇಶ್ವರ-ಕಾಮೇಶ್ವರಿ ದೇವಸ್ಥಾನ, ಚಾಮರಾಜಪುರಂನ ಶ್ರೀ ಪ್ರಸನ್ನ ವಿಶ್ವೇಶ್ವರ ದೇವಸ್ಥಾನ, ಕೆ.ಜಿ.ಕೊಪ್ಪಲಿನ ಚಂದ್ರಮೌಳೇಶ್ವರ ದೇವಸ್ಥಾನ, ಮಾತೃಮಂಡಳಿ ವೃತ್ತದ ಚಂದ್ರಮೌಳೇಶ್ವರ ದೇವಸ್ಥಾನ, ವಿದ್ಯಾರಣ್ಯಪುರಂನ ರಾಮಲಿಂಗೇಶ್ವರ ದೇಗುಲ, ಮಹದೇಶ್ವರಸ್ವಾಮಿ ದೇಗುಲ, ಅಶೋಕಪುರಂನ ಮುಕ್ಕಣ್ಣೇಶ್ವರಸ್ವಾಮಿ ದೇಗುಲ, ಕುಂಬಾರಕೊಪ್ಪಲಿನ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನ, ಲಷ್ಕರ್ ಮೊಹಲ್ಲಾದ ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನ ಸೇರಿದಂತೆ ನಗರದ ವಿವಿಧ ದೇಗುಲಗಳಲ್ಲಿ ಶಿವರಾತ್ರಿ ಆಚರಣೆಗೆ ಶುಕ್ರವಾರ ಸ್ವಚ್ಛತಾ ಕಾರ್ಯಗಳು ನಡೆದವು.

ಮಹಾಶಿವರಾತ್ರಿ ದಿನದಂದು ಶಿವನಿಗೆ ಚಿನ್ನದ ಕೊಳಗ ಧಾರಣೆ ಮಾಡಿ ದರ್ಶನಕ್ಕೆ ಅವಕಾಶ ಕಲ್ಪಿಸುವ ಅರಮನೆಯ ಪ್ರಸಿದ್ಧ ತ್ರಿನೇಶ್ವರ ದೇವಸ್ಥಾನದಲ್ಲೂ ಸಿದ್ಧತೆ ಪೂರ್ಣಗೊಂಡಿದೆ. ಶನಿವಾರ ಬೆಳಗ್ಗೆ ಅಭಿಷೇಕ, ವಿಶೇಷ ಪೂಜೆ ನಂತರ ಕೊಳಗ ಧಾರಣೆ ಮಾಡಿದ ಬಳಿಕ ಬೆಳಗ್ಗೆ 6 ಗಂಟೆಯಿಂದಲೇ ದೇವರ ದರ್ಶನಕ್ಕೆ ಅವಕಾಶ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ.

ಭರ್ಜರಿ ವ್ಯಾಪಾರ: ಶುಕ್ರವಾರ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು. ಮಾರುಕಟ್ಟೆಯಲ್ಲಿ ಕಾಕಡ, ಕನಕಾಂಬರ, ಮಲ್ಲಿಗೆ, ಸೇವಂತಿಗೆ ಹೂವಿನ ಮಾರಾಟ ಭರ್ಜರಿಯಾಗಿತ್ತು. ಅಲ್ಲದೆ, ಕುಂಕುಮ, ವಿಭೂತಿ, ಬಿಲ್ವಪತ್ರೆ ಇತರ ಪೂಜಾ ಸಾಮಗ್ರಿಗಳನ್ನು ಖರೀದಿಸುವಲ್ಲಿ ಭಕ್ತರು ನಿರತರಾಗಿದ್ದರು. ಶಿವರಾತ್ರಿಯಲ್ಲಿ ಕಲ್ಲಂಗಡಿ ಹಣ್ಣನ್ನು ಜಾಸ್ತಿ ಬಳಸುವುದರಿಂದ ಮಾರುಕಟ್ಟೆ, ಆರ್‌ಎಂಸಿ, ಗ್ರಾಮಾಂತರ ಬಸ್ ನಿಲ್ದಾಣ, ನಗರ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವ್ಯಾಪಾರಸ್ಥರು ಲಾರಿಗಟ್ಟಲೆ ಕಲ್ಲಂಗಡಿ ಹಣ್ಣು ಸಂಗ್ರಹ ಮಾಡಿಕೊಂಡು ವ್ಯಾಪಾರ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net