

ವರಮಹಾಲಕ್ಷ್ಮೀ ಹಬ್ಬಕ್ಕೆ ಒಂದು ದಿನ ಇರುವಾಗಲೇ (ಆ.25)ಬೆಲೆ ಏರಿಕೆ ಬಿಸಿಯ ನಡುವೆಯೂ ನಾಗರಿಕರಿಂದ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು.
ಮನೆಯಲ್ಲಿ ಸುಖ, ಶಾಂತಿ, ಸಂಪತ್ತು ನೆಲೆಸುವಂತೆ ಪೂಜಿಸುವ ‘ವರಮಹಾಲಕ್ಷ್ಮೀ’ ಹಬ್ಬ ಶುಕ್ರವಾರ ನಗರದಲ್ಲಿ ಸಡಗರ ಸಂಭ್ರಮದೊಂದಿಗೆ ನಡೆಯಲಿದೆ. ಲಕ್ಷ್ಮೀಯನ್ನು ಮನೆಗೆ ಬರಮಾಡಿಕೊಳ್ಳುವ, ಶ್ರಾವಣಮಾಸದ ಮೊದಲ ಹಬ್ಬಕ್ಕೆ ಮೈಸೂರಿನಲ್ಲಿ ಸಿದ್ಧತೆ ಜೋರಾಗಿದ್ದು, ಹಬ್ಬದ ಮುನ್ನಾ ದಿನವಾದ ಗುರುವಾರ ಹಣ್ಣು ಸೇರಿದಂತೆ ಪೂಜಾ ಸಾಮಗ್ರಿಗಳ ಬೆಲೆ ಹೆಚ್ಚಾಗುವ ನಿರೀಕ್ಷೆ ಇರುವುದರಿಂದ ಬುಧವಾರದಿಂದಲೇ ಬಹುತೇಕ ಜನರು ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿಗಳನ್ನು ಖರೀದಿಸಿದರು.
ನಗರದ ದೇವರಾಜ ಮಾರುಕಟ್ಟೆ, ಅಗ್ರಹಾರದ ವಾಣಿವಿಲಾಸ ಮಾರುಕಟ್ಟೆ, ಶಿವರಾಂಪೇಟೆ, ಚಿಕ್ಕಗಡಿಯಾರ, ದಿವಾನ್ಸ್ ರಸ್ತೆ, ನಗರ ಬಸ್ ನಿಲ್ದಾಣ, ಸಯ್ಯಜಿರಾವ್ ರಸ್ತೆ, ಧನ್ವಂತ್ರಿ ರಸ್ತೆಗಳಲ್ಲಿ ಬುಧವಾರದಿಂದಲೇ ಹೂ, ಹಣ್ಣು, ಬಾಳೆದಿಂಡು ಸೇರಿಂದಂತೆ ಪೂಜಾ ಸಾಮಗ್ರಿಗಳ ವ್ಯಾಪಾರ ಆರಂಭವಾಗಿದ್ದು, ಮಳೆ ಕೊರತೆಯಿಂದಾಗಿ ಹೂ, ತರಕಾರಿಗಳ ಬೆಲೆ ಗಗನಕ್ಕೇರಿದೆ. ಜತೆಗೆ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ದರ ಮತ್ತಷ್ಟು ಏರಿಕೆ ಕಂಡಿತ್ತಾದರೂ ಜನರು ಎಂದಿನಂತೆ ಖರೀದಿ ನಡೆಸುತ್ತಿದ್ದಾರೆ.