30ರಂದು ಟಿಇಟಿ ಪರೀಕ್ಷೆಗೆ ಸಿದ್ಧತೆ

Preparation for TET exam on 30th
ಬಾಗಲಕೋಟೆ ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಟಿಇಟಿ ಪರೀಕ್ಷಾ ಪೂರ್ವ ಸಿದ್ದತಾ ಸಭೆ ಅಧ್ಯಕ್ಷತೆ ವಹಿಸಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಮಾತನಾಡಿದರು. ಜಿಲ್ಲಾ ಪರೀಕ್ಷಾ ವೀಕ್ಷಕ ಡಿ.ಐ. ಅಸುಂಡಿ, ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎಚ್.ಜಿ. ಮಿರ್ಜಿ ಇತರರಿದ್ದರು.
Published on

ಬಾಗಲಕೋಟೆ: ಜಿಲ್ಲೆಯಲ್ಲಿ ಜೂ.30 ರಂದು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ನಡೆಸಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಹೇಳಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಟಿಇಟಿ ಪರೀಕ್ಷಾ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷೆ ಎರಡು ಅವಧಿಯಲ್ಲಿ ನಡೆಯಲಿದ್ದು, ಪೂರ್ವಾಹ್ನ ಪತ್ರಿಕೆ-1 9.30 ರಿಂದ ಮಧ್ಯಾಹ್ನ 12 ವರೆಗೆ ಹಾಗೂ ಅಪರಾಹ್ನ ಪತ್ರಿಕೆ-2 ಮಧ್ಯಾಹ್ನ 2 ರಿಂದ 4.30 ವರೆಗೆ ಪರೀಕ್ಷೆ ನಡೆಸಲಾಗುತ್ತಿದೆ. ಪತ್ರಿಕೆ-1ಕ್ಕೆ 16 ಪರೀಕ್ಷಾ ಕೇಂದ್ರಗಳಲ್ಲಿ 4122 ವಿದ್ಯಾರ್ಥಿಗಳು ಹಾಗೂ ಪತ್ರಿಕೆ-2ಗೆ 25 ಪರೀಕ್ಷಾ ಕೇಂದ್ರಗಳಲ್ಲಿ 6591 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದರು.

ಬಾಗಲಕೋಟೆ ನಗರದಲ್ಲಿರುವ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಪರೀಕ್ಷಾ ಕೇಂದ್ರಗಳನ್ನಾಗಿ ಆಯ್ಕೆ ಮಾಡಲಾಗಿದ್ದು, ಎಲ್ಲ ಪರೀಕ್ಷಾ ಕೇಂದ್ರಗಳಿಗೆ ತಲಾ ಒಬ್ಬರಂತೆ ಮುಖ್ಯ ಅಧೀಕ್ಷಕರನ್ನು, ಸ್ಥಾನಿಕ ಜಾಗೃತಿ ದಳದ ಅಧಿಕಾರಿಗಳನ್ನಾಗಿ ಬಿ ವೃಂದದ ಅಧಿಕಾರಿಗಳನ್ನು ನೇಮಿಸಲಾಗಿದೆ. ಪರೀಕ್ಷಾ ವೀಕ್ಷಕರನ್ನಾಗಿ ಜಮಖಂಡಿ ಸಿಟಿಇ ಪ್ರವಾಚಕ ಡಿ.ಐ.ಅಸುಂಡಿ ಅವರನ್ನು ನೇಮಿಸಿ ಸರ್ಕಾರದಿಂದ ಆದೇಶಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿ 20 ವಿದ್ಯಾರ್ಥಿಗಳಿಗೆ ಒಂದು ಕೊಠಡಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಪ್ರಶ್ನೆ ಪತ್ರಿಕೆ ಬಂಡಲ್‌ಗಳನ್ನು ಜಿಲ್ಲಾ ಖಜಾನೆಯಿಂದ ಪಡೆದು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು 9 ಜನ ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ. ಮಾರ್ಗಾಕಾರಿಗಳ ಜೊತೆ ಸಶಸ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಪೊಲೀಸ್ ಇಲಖೆಗೆ ತಿಳಿಸಲಾಯಿತು. 25 ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಬಂದೋಬಸ್ತಗಾಗಿ ಪ್ರತಿ ಕೇಂದ್ರಕ್ಕೆ ಇಬ್ಬರಂತೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ. ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲು 144 ಕಲಂ ಜಾರಿ ಮಾಡಿ ಆದೇಶ ಹೊರಡಿಸಲಾಗುತ್ತದೆ ಎಂದು ತಿಳಿಸಿದರು.

ಪರೀಕ್ಷಾ ಕೇಂದ್ರಕ್ಕೆ ನಿಯೋಜನೆಗೊಂಡ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಗಳು ಪರೀಕ್ಷಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾವುದೇ ರೀತಿಯ ತೊಂದರೆ ಯಾಗದಂತೆ ಸುಸೂತ್ರವಾಗಿ ನಡೆಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಪರೀಕ್ಷೆಯಲ್ಲಿ ಮೊಬೈಲ್‌ನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪರೀಕ್ಷೆ ನಡೆಯುವುವ ಅರ್ಧ ಗಂಟೆ ಮುಂಚಿತವಾಗಿ ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪರೀಕ್ಷಾ ವೀಕ್ಷಕ ಡಿ.ಐ. ಅಸುಂಡಿ, ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎಚ್.ಜಿ. ಮಿರ್ಜಿ, ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು , ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net