

ಬ್ಯಾಡಗಿ: ರಾಜ್ಯಮಟ್ಟದ ಶ್ರೀ ಮಹಾಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ತಾಲೂಕಿನ ಚಿಕ್ಕಬಾಸೂರ ಗ್ರಾಮದಲ್ಲಿ 2024 ಜನವರಿ 14 ಹಾಗೂ 15ರಂದು ಎರಡು ದಿನಗಳ ಕಾಲ ಏರ್ಪಡಿಸಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಸೋಮಶೇಖರ ಕಣಗಿಲಬಾವಿ ತಿಳಿಸಿದರು.
ಇಲ್ಲಿನ ಸಿದ್ದರಾಮೇಶ್ವರ ದೇವಸ್ಥಾನ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಉತ್ಸವ ಸಿದ್ಧತೆಗಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೊಳಂಬ ಸಮಾಜ ಬಾಂಧವರ ಪೂರ್ವಭಾವಿ ಸಭೆ ಏರ್ಪಡಿಸಿ ಅಭಿಪ್ರಾಯ ಪಡೆದಿದ್ದೇವೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕು ಚಿಕ್ಕಬಾಸೂರು ಗ್ರಾಮದ ಹೊರವಲಯದಲ್ಲಿ ಜಯಂತ್ಯುತ್ಸವ ಆಚರಿಸಲು ಸುಮಾರು 150 ಎಕರೆ ಜಾಗ ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ (ಎನ್.ಎಚ್. 4) ಹಾವೇರಿ ಕಡೆಯಿಂದ, ರಾಜ್ಯ ಹೆದ್ದಾರಿ ಹರಿಹರ ಸಮ್ಮಸಗಿ ರಸ್ತೆ ಸೂಡಂಬಿ, ತಿಳವಳ್ಳಿ ಕಡೆಯಿಂದ ಬಂದು ಹೋಗಲು ಅನುಕೂಲವಾಗಲಿದೆ. ರಾಜ್ಯದ ಮೂಲೆಮೂಲೆಗಳಿಂದ ಆಗಮಿಸುವ ಸಮಾಜ ಬಾಂಧವರು ಹಾಗೂ ಸಾರ್ವಜನಿಕರ ವಾಹನ ರ್ಪಾಂಗ್ ಸಲುವಾಗಿ ಮೂರು ಕಡೆಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ಅಂದಾಜು 3ರಿಂದ 4 ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, ಎಲ್ಲರಿಗೂ ಊಟ, ಆಸನಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಶಾಸಕ ಬಸವರಾಜ ಶಿವಣ್ಣನವರ ಅವರನ್ನು ಪೂರ್ವಭಾವಿ ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮ ಜಯಂತ್ಯುತ್ಸವ ಕಾರ್ಯಕ್ರಮದ ಮಹಾಪೋಷಕರೆಂದು ಆಯ್ಕೆಗೊಳಿಸಿ, ಸನ್ಮಾನಿಸಲಾಯಿತು.
ಸಭೆಯಲ್ಲಿ ಹಾಸನ ಜಿಲ್ಲೆ ಪುಷ್ಪಗಿರಿ ಮಠದ ಡಾ.ಸೋಮಶೇಖರ ಶ್ರೀಗಳು, ಅತ್ತಿಕಟ್ಟಿ ಮಠದ ಸಿದ್ಧರಾಮೇಶ್ವರ ಶ್ರೀಗಳು, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಸುರೇಶಗೌಡ್ರ ಪಾಟೀಲ, ಶಿವರಾಜ ಸಜ್ಜನ, ಕಾಂಗ್ರೆಸ್ ಘಟಕದ ತಾಲೂಕಾಧ್ಯಕ್ಷ ದಾನಪ್ಪ ಚೂರಿ,ನಾಗರಾಜ ಆನ್ವೇರಿ, ಎಸ್.ಆರ್. ಪಾಟೀಲ, ಜಗದೀಶ ಕಣಗಿಲಬಾವಿ ಇತರರಿದ್ದರು.